ಕುಮಟಾ: ಇಲ್ಲಿನ ಕೆನರಾ ಎಜ್ಯಕೇಶನ್ ಸೊಸೈಟಿಯ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಶೇ.೯೯.೮೪ ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಯಶಿಕಾ ಗುರುಪ್ರಸಾದ ಶೇ.೯೮.೨೪ (ದ್ವಿತೀಯ), ಶ್ರೀಲಕ್ಷ್ಮೀ ನಾಗೇಶ ಪೈ ಶೇ.೯೬.೦೮ (ತೃತೀಯ), ಪನ್ನಗ ಪ್ರಕಾಶ ಶಾನಭಾಗ ಶೇ. ೯೪.೫೬, ಅನೀಶ ಬುದವಂತ ಹರಿಕಂತ್ರ ಹಾಗೂ ಶ್ರೇಯಾ ಸುಬ್ರಹ್ಮಣ್ಯ ನಾಯ್ಕ ಶೇ. ೯೩.೯೨ ಅಂಕಗಳಿಸಿ ಸಾಧನೆ ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕ ವಿನಾಯಕ ಶಾನಭಾಗ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಗಿಬ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿನಾಯಕ ಶಾನಭಾಗ ಮಾತನಾಡಿ, ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿರುವ ನಮ್ಮ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಸಾಧನೆ ನಮ್ಮ ಶಿಕ್ಷಕ ವೃಂದ, ಆಡಳಿತ ಮಂಡಳಿ, ಪಾಲಕರು, ಶಿಕ್ಷಣ ಇಲಾಖೆ ಸಹಿತ ಎಲ್ಲರಿಗೂ ಸಂತಸ ತಂದಿದೆ. ಕಳೆದ ಎರಡು ವರ್ಷಗಳಿಂದ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟದಲ್ಲಿ ವಿಜೇತಳು, ಚೆಸ್‌ನಲ್ಲಿ ರಾಜ್ಯಮಟ್ಟದಲ್ಲಿ ಗೆದ್ದು ರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಿದ್ದು ಅವಳು ಬಹುಮುಖಿ ಪ್ರತಿಭೆ ಎಂದರು.ಭೂಮಿಕಾ ಹೆಗಡೆ ತಂದೆ ನೆಲ್ಲಿಕೇರಿ ಬೆಣ್ಣೆ ಸರ್ಕಾರಿ ಪಿಯು ಕಾಲೇಜು ಪ್ರಾಧ್ಯಾಪಕ ನಾಗರಾಜ ಹೆಗಡೆ, ತಾಯಿ ರೇಣುಕಾ ಹೆಗಡೆ, ಶಿಕ್ಷಕರು ಇದ್ದರು.