ಕುಷ್ಟಗಿ/ಕೊಪ್ಪಳ:
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಮತ್ತು ಪರೀಕ್ಷಾ ಭಯ ದೂರ ಮಾಡುವ ಉದ್ದೇಶದಿಂದ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್, ಶಾಲಾ ಶಿಕ್ಷಣ ಇಲಾಖೆ, ಶ್ರೀವಿಜಯ ಚಂದ್ರಶೇಖರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಬಳ್ಳಾರಿ ಸನ್ಮಾರ್ಗ ಗೆಳಯರ ಬಳಗದ ಸಹಕಾರದೊಂದಿಗೆ ಕುಷ್ಟಗಿ ತಾಲೂಕು ಸರ್ಕಾರಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಅಭೂತಪೂರ್ವ ಯಶಸ್ಸು ಕಂಡಿದೆ.ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ನಿರೀಕ್ಷೆ ಮೀರಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದಿನಪೂರ್ತಿ ನಡೆದ ಕಾರ್ಯಾಗಾರದಲ್ಲಿ ಸನ್ಮಾರ್ಗ ಗೆಳೆಯರ ಬಳಗದ ಸಂಪನ್ಮೂಲ ವ್ಯಕ್ತಿಗಳು ಅರ್ಥಪೂರ್ಣ ಪಾಠ ಮಾಡಿ ಮಕ್ಕಳಲ್ಲಿನ ಪರೀಕ್ಷಾಭಯ ದೂರ ಮಾಡಿದರು.ವಿದ್ಯಾರ್ಥಿಗಳಿಗೆ ಪಾಸಾಗುವ ಬಗೆ ಮತ್ತು ತಂತ್ರವನ್ನು ಸುಲಭವಾಗಿ ಹೇಳಿಕೊಟ್ಟರು. ಪಾಸಾಗುವುದು ಕಷ್ಟವೇನು ಅಲ್ಲ. ಅದಕ್ಕೆ ದೃಢ ನಿರ್ಧಾರ ಮಾಡಬೇಕು. ಇಂದಿನಿಂದಲೇ ಈಗ ಹೇಳಿಕೊಟ್ಟಂತೆ ಅಭ್ಯಾಸ ಮಾಡಿದರೆ ಸುಲಭವಾಗಿ ಪಾಸಾಗಬಹುದು ಎಂದು ಹೇಳುವ ಮೂಲಕ ಮಕ್ಕಳಲ್ಲಿನ ಪರೀಕ್ಷಾ ಭಯ ಓಡಿಸಲಾಯಿತು.
ಕೇವಲ ಪಾಸಾಗುವುದು ನಿಮ್ಮ ಗುರಿಯಾಗಬಾರದು. ಗರಿಷ್ಠ ಅಂಕ ಗಳಿಸಲು ಇಂದಿನಿಂದಲೇ ಈ ಮಾದರಿಯಲ್ಲಿ ಅಭ್ಯಾಸ ಮಾಡಿ ಎಂದು ಅನೇಕ ಮಾರ್ಗಗಳನ್ನು ಹೇಳಿಕೊಡುತ್ತಿದ್ದಂತೆ ವಿದ್ಯಾರ್ಥಿಗಳು ಖುಷಿಯಾದರು.ನಾಲ್ಕೈದು ಗಂಟೆಗಳ ಕಾಲ ನಡೆದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಆಸಕ್ತಿಯಿಂದ ಕಲಿತರು ಮತ್ತು ಹಬ್ಬದಂತೆ ಸಂಭ್ರಮಿಸಿದರು. ಕಾರ್ಯಾಗಾರದಲ್ಲಿ ಕೇವಲ ಪಠ್ಯದ ಪಾಠ ಇರದೆ ಜನಪದ, ಹಾಸ್ಯದ ಮೂಲಕ ವಿದ್ಯಾರ್ಥಿಗಳು ಇಡೀ ದಿನ ನಗುಮೂಗದಿಂದ ಇದ್ದರು.
ಇದಕ್ಕೂ ಮೊದಲು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ, ಪತ್ರಿಕೆಗಳು ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಜತೆಗ ಸಾಮಾಜಿಕ ಜವಾಬ್ದಾರಿಯೊಂದಿಗೆ ಸಾಗುತ್ತಿವೆ. ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಭದ್ರ ಬುನಾದಿಯಾಗಿದ್ದು ಆ ಬುನಾದಿಯನ್ನು ಗಟ್ಟಿಗೊಳಿಸಲು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಹಮ್ಮಿಕೊಂಡಿರುವ ಕಾರ್ಯಾಗಾರ ಶ್ಲಾಘನೀಯ ಎಂದು ಹೇಳಿದರು. ಪಾಲಕರ ಬೆವರಿಗೆ ಅಂಕ ನೀಡಿ:ಪಾಲಕರು ಬಿಸಿಲು, ಮಳೆ ಎನ್ನದೆ ತಮ್ಮ ಬೆವರು ಸುರಿಸಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಅವರು ಪಟ್ಟ ಕಷ್ಟ ವ್ಯರ್ಥವಾಗಬಾರದು. ನೀವು ಉತ್ತಮವಾಗಿ ಓದಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದಾಗ ಪಾಲಕರ ಶ್ರಮಕ್ಕೆ ಸಾರ್ಥಕತೆ ಸಿಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿರುವುದನ್ನು ಮನನ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಹೆತ್ತವರಿಗೂ, ಶಿಕ್ಷಕರಿಗೂ ಹೆಸರು ತಂದುಕೊಟ್ಟು ನಿಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಶಕ್ತಿ ತುಂಬುವ ಕೆಲಸ:
ಮಕ್ಕಳಿಗೆ ಶಿಕ್ಷಣದಲ್ಲಿ ಶಕ್ತಿ ತುಂಬುವ ಜತೆಗ ಅವರ ಒಡನಾಡಿಯಾಗಿ ಕನ್ನಡಪ್ರಭ ಕೆಲಸ ಮಾಡುತ್ತಿದೆ. ಪರೀಕ್ಷೆ ಎಂದರೆ ಭಯಪಡದೆ ಆತ್ಮವಿಶ್ವಾಸದಿಂದ ಬರೆಯಬೇಕು. ಅದಕ್ಕಾಗಿ ನಿಮ್ಮಲ್ಲಿ ಇರುವ ಪರೀಕ್ಷೆ ಭಯ ಹೋಗಲಾಡಿಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದ ಶಾಸಕರು, ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮವಾಗಿ ಬರಬೇಕೆಂಬ ಹೊಣೆಗಾರಿಕೆ ಹೊತ್ತುಕೊಂಡು ಕನ್ನಡಪ್ರಭ ಈ ಕಾರ್ಯಾಗಾರ ಮಾಡಿದೆ. ಈ ಮೂಲಕ ಸಾಮಾಜಿಕ, ಶೈಕ್ಷಣಿಕ ಹೊಣೆಗಾರಿಕೆ ಏನು ಎನ್ನುವುದನ್ನು ಈ ಕಾರ್ಯಕ್ರಮದ ಮೂಲಕ ತೋರಿಸಿಕೊಟ್ಟಿದೆ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಂತೆ ದುರ್ಬಳಕೆಯೂ ಹೆಚ್ಚಿದೆ. ಯುವಜನತೆ ಮೊಬೈಲ್‌ನತ್ತ ಹೆಚ್ಚು ವಾಲಿದ್ದು ಶೈಕ್ಷಣಿಕ ಜೀವನಕ್ಕೆ ತೊಂದರೆಯಾಗುತ್ತಿದೆ. ಮೊಬೈಲ್‌ನಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಇರುತ್ತದೆ. ಆದರೆ, ನಾವು ಉಜ್ವಲ ಜೀವನಕ್ಕೆ ಬೇಕಾಗಿರುವುದನ್ನು ಆಯ್ಕೆ ಮಾಡಿಕೊಂಡು ಒಳ್ಳೆಯ ವಿಚಾರಗಳತ್ತ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿ, ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಯಭೀತರಾಗಬಾರದು. ಸಮಯ ವ್ಯರ್ಥ ಮಾಡಬಾರದು. ಶಿಕ್ಷಕರು ಕಲಿಸಿದ ಪಾಠಗಳನ್ನು ನಿರಂತರ ಮನನ ಮಾಡಿಕೊಳ್ಳಬೇಕು. ಕಾರ್ಯಾಗಾರದ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚು ಅಂಕ ಗಳಿಸಬೇಕು ಎಂದು ಹೇಳಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಭಯಮುಕ್ತರಾಗಿ ಸಿದ್ಧರಾಗಬೇಕು. ವಿದ್ಯಾರ್ಥಿಗಳ ಪರೀಕ್ಷೆಯ ಪಾಲಿಗೆ ಈ ಕಾರ್ಯಾಗಾರ ದಿಕ್ಸೂಚಿಯಾಗಿದೆ. ಇಂತಹ ಸುವರ್ಣಾವಕಾಶದ ಲಾಭವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಪಡೆಯಬೇಕು ಎಂದು ಹೇಳಿದರು.
ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಮರುದಿನ ಪತ್ರಿಕೆಗಳಲ್ಲಿ ಫಲಿತಾಂಶ ಕುಸಿಯಿತು, ನಪಾಸಾದ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ, ಶಿಕ್ಷಕರ ಹಿನ್ನಡೆ ಎಂದು ಬರೆಯುತ್ತೇವೆ. ಆದರೆ, ಇದಕ್ಕೆ ಸುಧಾರಣೆ ತರುವ ಹೊಣೆಗಾರಿಕೆ ಸಹ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸುವಂತಹ ಕಾರ್ಯಕ್ರಮ ಹಮ್ಮಿಕೊಂಡು ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿವೆ ಎಂದರು.ಇದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅನುಕೂಲವಾಗಿದೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ ಎಂದರು. ಪರೀಕ್ಷೆಯಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕನ್ನಡಪ್ರಭ ಯುವ ಆವೃತ್ತಿ ಆರಂಭಿಸಿ, ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುತ್ತಿದ್ದೇವೆ ಎಂದ ಅವರು, ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಅಭ್ಯಾಸ ಮಾಡಿ ಉತ್ತಮ ಅಂಕ ಗಳಿಸಬೇಕು. ಉತ್ತಮ ಅಂಕಗಳಿಸಿದ ಟಾಪ್‌ಟೆನ್ ವಿದ್ಯಾರ್ಥಿಗಳನ್ನು ಕನ್ನಡಪ್ರಭದಿಂದ ಸನ್ಮಾನಿಸಲಾಗುವುದು ಎಂದು ಪ್ರೋತ್ಸಾಹಿಸಿದರು.
ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡಿ, ಮಾಧ್ಯಮ ಎಂದರೆ ಸುದ್ದಿ ಮಾಡುವುದು ಅಷ್ಟೇ ಅಲ್ಲ. ಸಾಮಾಜಿಕ ಕಳಕಳಿಯೂ ಇದೆ. ಇಂತಹ ಒಂದು ಕಾರ್ಯಾಗಾರಕ್ಕೆ ಮೊಟ್ಟ ಮೊದಲು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಹೆಜ್ಜೆ ಇಟ್ಟಿದೆ. ಇದೊಂದು ಅಭೂತಪೂರ್ವ ಕಾರ್ಯಕ್ರಮ ಎಂದರು.ಶ್ರೀಮಂತರಿಗೆ ಮಾತ್ರ ಅವಕಾಶ ಇವೇ ಎಂಬುದು ತಪ್ಪು. ಗುಡಿಸಲಿನಿಂದ ಅನೇಕ ಪ್ರತಿಭೆಗಳು ಅರಳಿವೆ. ಬಡವರಿದ್ದೇವೆ ಎಂಬುದನ್ನು ಮನಸ್ಸಿನಿಂದ ತೆಗೆದುಬಿಡಿ. ಪ್ರತಿ ನಿಮಿಷ ಸದ್ಬಳಕೆ ಮಾಡಿಕೊಂಡು ಭಯಮುಕ್ತರಾಗಿ ಪರೀಕ್ಷೆ ಎದುರಿಸಿ ಎಂದ ಅವರು, ಐಐಎಸ್‌ಸಿಆರ್‌ದಿಂದ ಉನ್ನತ ಶಿಕ್ಷಣ ಪಡೆಯಲು ಅನೇಕ ಅವಕಾಶ ಇವೆ. ಅವುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕನ್ನಡಪ್ರಭ ಬಡತನದಲ್ಲಿರುವ ಪ್ರತಿಭೆಗಳನ್ನು ಉನ್ನತ ಶಿಕ್ಷಣ ಪಡೆಯಲು ಸಾಥ್ ನೀಡಿದೆ. ಜಿಲ್ಲೆಯಲ್ಲಿ 9 ಜನ ಬಡ ವಿದ್ಯಾರ್ಥಿಗಳು ಎಂಬಿಬಿಎಸ್ ಓದಲು ವಿಶೇಷ ವರದಿ ಮೂಲಕ ಸಹಾಯ ಮಾಡಿದೆ. ಸಮಾಜದ ಗಣ್ಯರು ವಿದ್ಯಾರ್ಥಿಗಳ ಅಭ್ಯಾಸಕ್ಕೆ ಸಹಾಯ ಮಾಡಿದ್ದಾರೆ ಎಂದು ಕನ್ನಡಪ್ರಭದ ಶೈಕ್ಷಣಿಕ ಕಾಳಜಿ ವರದಿ ಸ್ಮರಿಸಿದರು.ಕಾರ್ಯಾಗಾರದಲ್ಲಿ ಶ್ರೀವಿಜಯ ಚಂದ್ರಶೇಖರ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಿಇಒ ಡಾ. ಜಗದೀಶ ಅಂಗಡಿ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ನೀಲನಗೌಡ, ಬಳ್ಳಾರಿ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಬಿ. ಚಂದ್ರಶೇಖರ, ಪ್ರಮುಖರಾದ ಎಂ.ಎಂ. ಬಣ್ಣದವರ, ತಾಲೂಕಿನ ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಜಾನಪದ ಕಲಾವಿದ ಜೀವನಸಾಬ್ ಬಿನ್ನಾಳ ಕಾರ್ಯಕ್ರಮ ನಿರೂಪಿಸಿದರು.