ಮಾರ್ಚ್‌ 18ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

KannadaprabhaNewsNetwork |  
Published : Mar 11, 2026, 02:00 AM IST
ಹಾವೇರಿ ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ರ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿದರು. | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆ-1ನ್ನು ಪಾರದರ್ಶಕ ಹಾಗೂ ನಕಲು ಮುಕ್ತವಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಈ ಬಾರಿ ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ. ಈ ನಿಟ್ಟಿನಲ್ಲಿ ಇಲಾಖೆಯು ಸಕಲ ತಯಾರಿ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಹಾವೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ-1ನ್ನು ಪಾರದರ್ಶಕ ಹಾಗೂ ನಕಲು ಮುಕ್ತವಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಈ ಬಾರಿ ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ. ಈ ನಿಟ್ಟಿನಲ್ಲಿ ಇಲಾಖೆಯು ಸಕಲ ತಯಾರಿ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾ.18ರಿಂದ ಏಪ್ರಿಲ್ 2ರ ವರೆಗೆ ಜಿಲ್ಲೆಯಲ್ಲಿ 471 ಪ್ರೌಢ ಶಾಲೆಗಳಿಂದ ಒಟ್ಟು 81 ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಸುಮಾರು 23,361 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ 21453 ರೆಗ್ಯುಲರ್ ಫ್ರೆಶ್ ವಿದ್ಯಾರ್ಥಿಗಳು, 534 ಪ್ರೈವೆಟ್ ಫ್ರೆಶ್ ವಿದ್ಯಾರ್ಥಿಗಳು ಹಾಗೂ 1374 ರೆಗ್ಯುಲರ್ ರಿಪೀಟರ್ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, 10,200 ಹೊಸ ವಿದ್ಯಾರ್ಥಿಗಳು ಹಾಗೂ 11,253 ಹೊಸ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲ್ಲಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನಿಡಿದರು.ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಕುಡಿಯುವ ಶುದ್ಧ ನೀರು, ಕೊಠಡಿ ಸ್ವಚ್ಛತೆ, ಅಗತ್ಯ ಬೆಳಕಿನ ಸೌಲಭ್ಯ, ಸಿಸಿ ಟಿವಿ, ಉತ್ತಮ ಬೆಂಚಿನ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು. ವಿದ್ಯಾರ್ಥಿಗಳ ಪರೀಕ್ಷೆಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಪರೀಕ್ಷೆ ಕೇಂದ್ರಕ್ಕೆ ನಿಯೋಜನೆಗೊಂಡ ಎಲ್ಲ ಸಿಬ್ಬಂದಿಗಳಿಗೂ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಮೊಬೈಲ್ ತೆಗೆದುಕೊಂಡು ಬರುವಂತಿಲ್ಲ. ಈ ನಿಟ್ಟಿನಲ್ಲಿ ಶಿಸ್ತು ಕ್ರಮ ವಹಿಸಿ ಎಂದರು. ಪರೀಕ್ಷಾ ದಿನಗಳಂದು ಆಯಾ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿರುವ ತಹಸೀಲ್ದಾರ್‌ಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಖಜಾನೆ ಅಧಿಕಾರಿಗಳು ತಮಗೆ ವಹಿಸಿಕೊಟ್ಟ ವಿಶೇಷ ವಿಚಕ್ಷಣಾ ದಳದ ಕರ್ತವ್ಯಗಳನ್ನು ತಪ್ಪದೇ ನಿರ್ವಹಿಸಬೇಕು ಎಂದರು.ಪ್ರಶ್ನೆ ಪತ್ರಿಕೆಗಳನ್ನು ಪೊಲೀಸ್ ಬಿಗಿ ಬಂದೋಬಸ್ತನಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು. ಪ್ರಶ್ನೆ ಪತ್ರಿಕೆಗಳ ಸಾಗಾಟಕ್ಕೆ ಖಾಸಗಿ ವಾಹನಗಳ ಬಳಕೆ ಮಾಡಬಾರದು. ಸರ್ಕಾರಿ ವಾಹನಗಳನ್ನು ಮಾತ್ರ ಬಳಕೆ ಮಾಡಬೇಕು. ಇದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಅನಗತ್ಯ ಗೊಂದಲಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದರು. ಪರೀಕ್ಷಾ ದಿನಗಳಂದು ಹೆಸ್ಕಾಂ ಇಲಾಖೆಯು ಸಮರ್ಪಕವಾಗಿ ವಿದ್ಯುತ್ ಪೂರೈಸುವುದರೊಂದಿಗೆ ವಿದ್ಯುತ್ ವ್ಯತ್ಯಯವಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರೀಕ್ಷಾ ಕೊಠಡಿ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತ ದಳ ಹಾಗೂ ಮೊಬೈಲ್ ಸ್ವಾಧೀನ ದಳಗಳ ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಕುರಿತು ನಿಗಾ ವಹಿಸಬೇಕು, ನಿರಂತರ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ವಿದ್ಯುತ್ ತೊಂದರೆಯಾಗದ ರೀತಿ ಜನರೇಟರ್ ಇಲ್ಲವೆ ಯುಪಿಎಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಪರೀಕ್ಷಾ ಕೊಠಡಿಯ ಹೊರಗಡೆಯ 200ಮೀ ಅಳತೆಯಲ್ಲಿ ನಿಷೇಧಾಜ್ಞೆ ಜಾರಿಯಿದ್ದು, ಅದಕ್ಕೆ ಅವಶ್ಯಕವಾದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಪೊಲೀಸ್ ಇಲಾಖೆ ಸಕಲ ತಯಾರಿ ಮಾಡಿಕೊಂಡಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಒ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ. ಎಲ್.ನಾಗರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಡಿಡಿಪಿಐ ಮೋಹನ ದಂಡಿನ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಶಿಕ್ಷಕರು ಇದ್ದರು. ಫಲಿತಾಂಶ ಸುಧಾರಣೆಯಲ್ಲಿ ಆದ್ಯತೆ ನೀಡಿ: ಬೆಳಗಾವಿ ವಿಭಾಗದ 9 ಶೈಕ್ಷಣಿಕ ಜಿಲ್ಲೆಗಳಲ್ಲಿ 4 ಜಿಲ್ಲೆಗಳು ಕಳೆದ ಬಾರಿ ಪ್ರತಿಶತ ಶೇ.80ರಷ್ಟು ಫಲಿತಾಂಶ ಮಾಡಿದ್ದು, ಹಾವೇರಿ 5ನೇ ಸ್ಥಾನದಲ್ಲಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಬೇಕು. ಪರೀಕ್ಷೆ ಫಲಿತಾಂಶ ಸುಧಾರಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಯಕವಾಗಿದೆ. ಕಲಿಕೆಯಲ್ಲಿ ಹಿಂದೆ ಇರುವ ಹಾಗೂ ಮಾನಸಿಕವಾಗಿ ಕುಗ್ಗಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಮನೋ ಸಾಮರ್ಥ್ಯವನ್ನು ಹೆಚ್ಚಿಸಿ, ಅವರಿಗೆ ಧೈರ್ಯ ತುಂಬಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು