ಎಂ.ಅಫ್ರೋಜ್ ಖಾನ್
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದ ರ್‍ಯಾಂಕಿಂಗ್ ಪಟ್ಟಿಯಲ್ಲಿ 24 ಸ್ಥಾನಕ್ಕೆ ಕುಸಿದಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಟಾಪ್ 5ರೊಳಗೆ ತರಲು ಪ್ರಯತ್ನ ಮುಂದುವರಿಸಿರುವ ಶಾಲಾ ಶಿಕ್ಷಣ ಇಲಾಖೆ ಪರಿಪೂರ್ಣ ಫಲಿತಾಂಶಕ್ಕಾಗಿ ''''''''ಪ್ರಗತಿ ಪಥ'''''''' ವಿದ್ಯಾರ್ಥಿ ಕೈಪಿಡಿ ಸಿದ್ಧಪಡಿಸಿದೆ.
ಕಳೆದ 2024- 2025ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸಾಧನೆ ತೃಪ್ತಿಕರವಾಗಿರಲಿಲ್ಲ. ಶೇಕಡ 63.12 ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಯು ರಾಜ್ಯಮಟ್ಟದಲ್ಲಿ 24ನೇ ಸ್ಥಾನ ಪಡೆದಿತ್ತು. ಎರಡಂಕಿಯ ಈ ಸ್ಥಾನವನ್ನು ಒಂದಂಕಿಗೆ ಇಳಿಸುವ ಗುರಿ ಹೊಂದಿರುವ ಇಲಾಖೆ, ಈ ನಿಟ್ಟಿನಲ್ಲಿ ಸಮಾರೋಪಾದಿಯಲ್ಲಿ ಪ್ರಯತ್ನ ನಡೆಸುತ್ತಿದೆ.ಈಗಾಗಲೇ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಶೇಷ ತರಗತಿಗಳು, ಕಿರು ಪರೀಕ್ಷೆಗಳು, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸುತ್ತಿರುವ ಇಲಾಖೆ, ಇವೆಲ್ಲವುಗಳಿಗೆ ಪೂರಕವಾಗಿ ಕನ್ನಡ, ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಸೇರಿ ಆರೂ ವಿಷಯಗಳ ಪ್ರಮುಖ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ''''''''ಪ್ರಗತಿ ಪಥ'''''''' ಎಂಬ ವಿದ್ಯಾರ್ಥಿ ಕೈಪಿಡಿಯನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ.
ಯಶಸ್ಸಿನಿಂದ ಪ್ರಗತಿ ಪಥದತ್ತ:
ಪ್ರಸಕ್ತ ಸಾಲಿನಲ್ಲಿ ಫಲಿತಾಂಶ ಸುಧಾರಣೆಗಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಮಾರ್ಗದರ್ಶನದಲ್ಲಿ ಮತ್ತಷ್ಟು ಸರಳೀಕರಿಸಿದ ವಿಷಯವಾರು ಪ್ರಶ್ನೋತ್ತರಗಳನ್ನು ಒಳಗೊಂಡ 100 ಪುಟಗಳ ‘ಪ್ರಗತಿ ಪಥ’ ಕೈಪಿಡಿಯನ್ನು ಇಲಾಖೆ ಹೊರ ತಂದಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಸುಧಾರಣೆ ತರುವ ಪ್ರಯತ್ನಕ್ಕೆ ಟ್ರಾನ್ ಸಿಸ್ಟಮ್ ಎಂಬ ಕಂಪನಿಯು ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸಿದೆ. ಇಲಾಖೆಯು ಪರಿಪೂರ್ಣ ಫಲಿತಾಂಶದೆಡೆ ನಮ್ಮ ನಡೆ ಘೋಷಣೆ ಅಡಿಯಲ್ಲಿ ಸಿದ್ದಪಡಿಸಿರುವ ಪ್ರಗತಿ ಪಥ ವಿದ್ಯಾರ್ಥಿ ಕೈಪಿಡಿಯನ್ನು ಈ ಕಂಪನಿ ತನ್ನ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಮುದ್ರಣ ಮಾಡಿ ಕೊಟ್ಟಿದೆ.
---
- ಸೋಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಾಮನಗರ.
ಡೀಸಿ - ಸಿಇಒ ಸಂದೇಶ
ಶಾಲಾ ಶಿಕ್ಷಣ ಇಲಾಖೆ ಹೊರ ತಂದಿರುವ ಪ್ರಗತಿ ಪಥ ವಿದ್ಯಾರ್ಥಿ ಕೈಪಿಡಿಯ ಮೊದಲ ಪುಟದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಸಂದೇಶ ನೀಡಿದ್ದಾರೆ.ಸಂದೇಶದಲ್ಲಿ ಏನಿದೆ ?
ಪ್ರಿಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೇ.ನಿಮ್ಮೆಲ್ಲರಿಗೂ ನಮ್ಮ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದ ಮಹತ್ವದ ಹಂತವೊಂದರಲ್ಲಿ ನೀವು ನಿಂತಿರುವಿರಿ. ನಿಮ್ಮ ಕೈಯಲ್ಲಿರುವ ಈ ಕೈಪಿಡಿಗಳು ಕೇವಲ ಪರೀಕ್ಷೆಗಳನ್ನು ಎದುರಿಸಲು ಮಾತ್ರವಲ್ಲ, ನಿಮ್ಮ ಭವಿಷ್ಯವನ್ನು ರೂಪಿಸುವ ಅಮೂಲ್ಯ ಮಾರ್ಗದರ್ಶಿಗಳಾಗಿವೆ.
ಈ ಕೈಪಿಡಿಗಳನ್ನು ಆಸಕ್ತಿಯಿಂದ ಅರ್ಥಮಾಡಿಕೊಂಡು ಅಧ್ಯಯನ ಮಾಡಿ. ಪ್ರತಿ ದಿನ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಪ್ರಶ್ನೆಗಳನ್ನು ಕೇಳುವ ಮನೋಭಾವ, ಶಿಸ್ತು, ಅತ್ಮವಿಶ್ವಾಸ ಮತ್ತು ಪರಿಶ್ರಮವೇ ನಿಮ್ಮ ಯಶಸ್ವಿನ ಗುಟ್ಟು. ಶಿಕ್ಷಕರ ಮಾರ್ಗದರ್ಶನವನ್ನು ಗೌರವಿಸಿ, ಪೋಷಕರ ಸಹಕಾರವನ್ನು ಸದ್ಬಳಕೆ ಮಾಡಿಕೊಳ್ಳಿ.ಪರೀಕ್ಷೆ ಎಂದರೆ ಭಯಪಡುವ ವಿಷಯವಲ್ಲ. ಪರೀಕ್ಷೆಗಳು ಭವಿಷ್ಯವನ್ನು ರೂಪಿಸುವ ಹೆಬ್ಬಾಗಿಲುಗಳು. ಆದ್ದರಿಂದ ಅತ್ಮಸ್ಥೆರ್ಯದಿಂದ, ನಂಬಿಕೆಯಿಂದ ಮತ್ತು ಸಕಾರಾತ್ಮಕ ಚಿಂತನೆಯೊಂದಿಗೆ ಮುಂದುವರೆಯಿರಿ. ನೆನಪಿಡಿ: "WINNERS NEVER QUIT, QUITTERS NEVER WIN " (ಜಯಶಾಲಿಗಳು ಎಂದಿಗೂ ಛಲವನ್ನು ಬಿಡುವುದಿಲ್ಲ. ಛಲವನ್ನು ಬಿಟ್ಟವರು ಎಂದಿಗೂ ಜಯಶಾಲಿಗಳಾಗುವುದಿಲ್ಲ.) ಅದ್ದರಿಂದ ಛಲದಿಂದ ಮುನ್ನಡೆಯಿರಿ, ಛಲವೇ ಬಲ.
ನೀವು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ, ಜಿಲ್ಲೆಗೆ ಕೀರ್ತಿಯನ್ನು ತರುತ್ತೀರೆಂದು ಎಂದು ಹಾರೈಸುತ್ತೇವೆ.