ಎಸ್ಸೆಸ್ಸೆಲ್ಸಿ ಪರೀಕ್ಷೆ-2: ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ

KannadaprabhaNewsNetwork |  
Published : Jun 12, 2024, 12:33 AM IST
ಸಭೆ ಪರೀಕ್ಷೆ | Kannada Prabha

ಸಾರಾಂಶ

ನಗರದ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಜೂನ್ 14 ರಿಂದ 22ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ನಡೆಯಲಿದ್ದು, ಪರೀಕ್ಷಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಎಲ್ಲಾ ಕೊಠಡಿಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಿ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುನಗರದ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಜೂನ್ 14 ರಿಂದ 22ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ನಡೆಯಲಿದ್ದು, ಪರೀಕ್ಷಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಎಲ್ಲಾ ಕೊಠಡಿಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಿ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ-1ನ್ನು ನಡೆಸಿದ ರೀತಿಯಲ್ಲಿಯೇ ಈ ಪರೀಕ್ಷೆಯನ್ನೂ ಸಹ ಪಾರದರ್ಶಕವಾಗಿ ನಡೆಸಬೇಕು. ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಯಾವುದೇ ಆತಂಕ ಪಡುವುದು ಬೇಡ. ಧೈರ್ಯವಾಗಿ ಪರೀಕ್ಷೆಯನ್ನು ಬರೆಯುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಆತ್ಮಸ್ಥೆರ್ಯ ತುಂಬಬೇಕೆಂದು ನಿರ್ದೇಶನ ನೀಡಿದರು.ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಲ್ಲಿ ಕಟ್ಟುನಿಟ್ಟಿನ ಪರೀಕ್ಷೆ ಅತ್ಯಗತ್ಯ. ಉನ್ನತ ವ್ಯಾಸಂಗಕ್ಕಾಗಿ ನಡೆಯುವ ಎಲ್ಲಾ ಪ್ರವೇಶ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳು ಸಿಸಿ ಟಿವಿ ಕಣ್ಗಾವಲಿನಲ್ಲಿಯೇ ನಡೆಯುವುದರಿಂದ ಸಿಸಿ ಕ್ಯಾಮೆರಾ ಅಳವಡಿಕೆಯು ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳ ಪರೀಕ್ಷೆಯನ್ನು ಎದುರಿಸಲು ಸಹಕಾರವಾಗುತ್ತದೆ ಎಂದು ವಿಧ್ಯಾರ್ಥಿಗಳಿಗೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 14 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 17 ಸೇರಿದಂತೆ ಒಟ್ಟು 31 ಕೇಂದ್ರಗಳಲ್ಲಿ ಜೂನ್ 14 ರಿಂದ 22ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ನಡೆಯಲಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಮುಖ್ಯ ಅಧಿಕ್ಷಕರು, ಕಸ್ಟೋಡಿಯನ್, ಜಾಗೃತದಳ, ಮೊಬೈಲ್ ಸ್ವಾಧೀನಾಧಿಕಾರಿಗಳು, ಪೊಲೀಸ್ ಎಸ್ಕಾರ್ಟ್, ಕೊಠಡಿ ಮೇಲ್ವಿಚಾರಕರು ಹಾಗೂ ಡಿ ದರ್ಜೆ ನೌಕರರನ್ನು ನಿಯೋಜಿಸಬೇಕು ಎಂದು ಸೂಚಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು. ಪೊಲೀಸ್ ರಕ್ಷಣೆಯೊಂದಿಗೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸಬೇಕು ಎಂದು ನಿರ್ದೇಶಿಸಿದರು. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಕೊಠಡಿಗಳಲ್ಲಿ ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ ಇರಬೇಕು. ಯಾವುದೇ ಗೊಂದಲ, ಭಯ ಉಂಟಾಗದಂತೆ ಪರೀಕ್ಷಾ ಆತಂಕವನ್ನು ದೂರ ಮಾಡಬೇಕು. ಯಾವುದೇ ಲೋಪದೋಷವಿಲ್ಲದೆ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂದು ಸೂಚನೆ ನೀಡಿದರು. ಶಾಲಾ ಶಿಕ್ಷಣ ಇಲಾಖೆ ತುಮಕೂರು ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಅಧಿಕಾರಿ ಮಾಧವರೆಡ್ಡಿ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ 2024ರ ಎಸ್ಸೆಸ್ಸೆಲ್ಸಿ ಪರೀಕ್ಷೆ-2ಕ್ಕೆ 739 ವಿದ್ಯಾರ್ಥಿಗಳು ಫಲಿತಾಂಶ ಉತ್ತಮಗೊಳಿಸಲು, 9219 ಪುನರಾವರ್ತಿತ ಹಾಗೂ 252 ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 10210 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯದೊಳಗಾಗಿ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು 15 ಮಾರ್ಗಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಮರಿಯಪ್ಪ, ಜಿಲ್ಲಾ ಖಜಾನಾಧಿಕಾರಿ ಉಮಾ ಮಧುಗಿರಿ ಶಿಕ್ಷಣಾಧಿಕಾರಿ ಎನ್.ಶಾಂತಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-2ನ್ನು ಸುಸೂತ್ರವಾಗಿ, ಲೋಪದೋಷವಿಲ್ಲದಂತೆ ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮತ್ತ 200 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶಿಸಿದ್ದಾರೆ. ನಿಷೇಧಾಜ್ಞೆಯು ಜೂನ್ 14 ರಿಂದ 22ರವರೆಗೆ ಪರೀಕ್ಷಾ ವೇಳಾಪಟ್ಟಿಗೆ ಅನುಗುಣವಾಗಿ ಬೆಳಿಗ್ಗೆ 9 ರಿಂದ ಸಂಜೆ 5-30 ಗಂಟೆವರೆಗೆ ಜಾರಿಯಲ್ಲಿರುತ್ತದೆ. ನಿಷೇಧಾಜ್ಞೆಯನ್ವಯ ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಝರಾಕ್ಸ್ ಮತ್ತು ಬೆರಳಚ್ಚು ಕೇಂದ್ರಗಳನ್ನು ಮುಚ್ಚಬೇಕು. ನಿಷೇಧಾಜ್ಞೆಯು ಜಾರಿಯಲ್ಲಿರುವ ಅವಧಿಯಲ್ಲಿ ಅನಧಿಕೃತ ವ್ಯಕ್ತಿಗಳು ಯಾರೂ ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವ ಅನಧಿಕೃತ ವ್ಯಕ್ತಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೈಬ್ರರಿ ಮೇಲ್ವಿಚಾರಕರಿಗೆ ವರ್ಷದಿಂದ ಅರ್ಧ ವೇತನ!
ಕುರಿಗಾಹಿ ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು : ಸಿದ್ದು ಕಿಡಿ