ಕನ್ನಡಪ್ರಭ ವಾರ್ತೆ ಬೇಲೂರು
ಅರೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಪರೀಕ್ಷಾ ಕೇಂದ್ರಗಳ ವ್ಯಾಪ್ತಿಗೆ ಸೇರಿರುವ ವಿವಿಧ ಶಾಲೆಯ ಸುಮಾರು 260 ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ಮುಖ್ಯ ಪರೀಕ್ಷೆಯ ಮಾದರಿಯಲ್ಲಿಯೇ ಅಣುಕು ಪರೀಕ್ಷೆಯನ್ನು ನಡೆಸಲಾಯಿತು.ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ಯಾವ ರೀತಿಯಲ್ಲಿ ನಡೆಯುತ್ತದೆಯೋ ಅದೆ ಮಾದರಿಯಲ್ಲಿ ಈ ಪರೀಕ್ಷೆಯು ನಡೆಡಿದ್ದು, ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಹೆಚ್ಚಿಸಿದೆ, ವಿದ್ಯಾರ್ಥಿಗಳು ಮಾನಸಿಕ ಒತ್ತಡವನ್ನ ಮಾಡಿಕೊಳ್ಳದೆ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ದಿನನಿತ್ಯ ಸಮಯ ಪಾಲನೆ ಮಾಡಿಕೊಂಡು ಪಠ್ಯಪುಸ್ತಕವನ್ನು ಓದುತ್ತಾ ಪರೀಕ್ಷೆಯನ್ನು ಎದುರಿಸಬೇಕು,
ಮುಖ್ಯ ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಉಳಿದಿದ್ದು ಈಗಲೂ ಸಹ ಸಮಯವಿದ್ದು ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆಯಬೇಕು. ಈ ಬಾರಿ ತಾಲೂಕಿನ ಎಲ್ಲಾ ಶಾಲೆಯ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದು ಶೇಕಡ 90ಕ್ಕೂ ಮೇಲ್ಪಟ್ಟು ಉತ್ತಮ ಫಲಿತಾಂಶ ಪಡೆಯಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ಈ ಬಾರಿ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿ ಎಂಬ ಉದ್ದೇಶದಿಂದ ಪಾಸಿಂಗ್ ಮತ್ತು ಸ್ಕೋರಿಂಗ್ ಎಂಬ ಎರಡು ಪ್ಯಾಕೇಜ್ ಮಾಡಿದ್ದು ಯಾವ ವಿದ್ಯಾರ್ಥಿ ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ ಅವರ ಮೇಲೆ ನಿಗಾ ವಹಿಸಿ ಅವರಿಂದ ಉತ್ತಮ ಫಲಿತಾಂಶ ಪಡೆಯಲು ಹಾಗೂ ಉತ್ತಮ ಕಲಿಕಾ ಜ್ಞಾನವಿರುವ ವಿದ್ಯಾರ್ಥಿಗಳಿಂದ ಹೆಚ್ಚಿನ ಅಂಕಗಳಿಸಲು ಈ ಪ್ಯಾಕೇಜ್ ಸಹಕಾರಿಯಾಗಲಿದೆ ಎಂದರು.ಈ ವೇಳೆ ಶಿಕ್ಷಣ ಸಂಯೋಜನಾಧಿಕಾರಿ ಗೋಪಾಲ್, ಜಗದೀಶ್, ಮುಖ್ಯ ಶಿಕ್ಷಕರಾದ ಶಿವಕುಮಾರ್ ಎಸ್.ಎನ್, ಮಂಜುಳಾ, ಶಿಕ್ಷಕರಾದ ಪ್ರಸನ್ನ ಅರಸ್, ಪ್ರವೀಣ್, ನವೀನ್, ಪಾಟೀಲ್ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.