- ಮಾವ, ಪತಿಯ ಗ್ರಾಮೀಣ ಅಭಿವೃದ್ಧಿ ಹೇಳದ ಕಾಂಗ್ರೆಸ್ ಅಭ್ಯರ್ಥಿ: ಗಾಯತ್ರಿ ಸಿದ್ದೇಶ್ವರ ಟೀಕೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆದಾವಣಗೆರೆ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ. ಕಾಂಗ್ರೆಸ್ಸಿನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕೊಡುಗೆ ಏನೆಂಬ ಬಗ್ಗೆ ಚರ್ಚೆಗೆ ಬರಲಿ ಎಂದು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕಾಂಗ್ರೆಸ್‌ಗೆ ಪಂಥಾಹ್ವಾನ ನೀಡಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಾಪಟ್ಟಣ, ತ್ಯಾವಣಿಗೆ ಗ್ರಾಪಂ ವ್ಯಾಪ್ತಿಯ ಬೆಳಲಗೆರೆ, ಕೋಟೆಹಾಳು, ಚಿರಡೋಣಿ, ಕಣಿವೆಬಿಳಚಿ, ಬಸವಾಪಟ್ಟಣ ಗ್ರಾಮಗಳಲ್ಲಿ ಮಂಗಳವಾರ ಮತಯಾಚಿಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕೊಡುಗೆಯೇನೆಂದು ದಾಖಲೆ ಸಮೇತ ಬರುವಂತೆ ಬಿಜೆಪಿ ಮುಖಂಡ, ವಿಪ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ ಸವಾಲು ಹಾಕಿದರೂ, ಕಾಂಗ್ರೆಸ್ಸಿಗರು ಸವಾಲು ಸ್ವೀಕರಿಸಿಲ್ಲ ಎಂದರು.ಅಭಿವೃದ್ಧಿ ವಿಚಾರ ಬಗ್ಗೆ ಚರ್ಚೆ ಮಾಡುವ ಮನಸ್ಸಿದ್ದರೆ ಮುಕ್ತವಾಗಿ ನಮ್ಮ ಸವಾಲು ಸ್ವೀಕರಿಸಿ, ನಿಮ್ಮ ಸಾಧನೆಗಳ ದಾಖಲೆ ಸಮೇತ ಚರ್ಚೆಗೆ ಬನ್ನಿ. ಈಗಾಗಲೇ ಕ್ಷೇತ್ರದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಕಾರ್ಯವೈಖರಿ, ಅಭಿವೃದ್ಧಿ ಕಾರ್ಯ ನೋಡಿ, ಕಾಂಗ್ರೆಸ್ಸಿಗೆ ನಡುಕ ಉಂಟಾಗಿದೆ ಎಂದು ಅವರು ಟೀಕಿಸಿದರು.
ಸಿದ್ದೇಶ್ವರ ದೂರದೃಷ್ಟಿ, ಸಮಾಜಮುಖಿ ಕೆಲಸ ನೋಡಿಯೇ 4 ಅವದಿಗೆ ಮತದಾರರು ಆಶೀರ್ವಾದ ಮಾಡಿ, ಸಂಸದರಾಗಿ ಮಾಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಪತಿ ಜಿ.ಎಂ.ಸಿದ್ದೇಶ್ವರ ಕೈಗೊಂಡ ಅಭಿವೃದ್ಧಿ ಕೆಲಸಗಳ ಹೇಳಿ ಮತ ಕೇಳುತ್ತಿದ್ದೇನೆ. ಸ್ಮಾರ್ಟ್ ಸಿಟಿಯಡಿ ₹1071 ಕೋಟಿ ಅನುದಾನ, ಇಎಸ್ಐ ಆಸ್ಪತ್ರೆ ಮೇಲ್ದರ್ಜೆಗೆ ₹12 ಕೋಟಿ, ಅಮೃತ ಸರೋವರ್‌ಗೆ ₹7.35 ಕೋಟಿ ಹೀಗೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ್ದಾರೆ. ತ್ಯಾವಣಿಗೆ, ಬಸವಾಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ₹2.75 ಕೋಟಿ ಅನುದಾನ ತಂದು, ರೈತ ಸಂಪರ್ಕ ಕೇಂದ್ರ, ಬೀಜೋತ್ಪಾದನಾ ಕೇಂದ್ರ ಬಲವರ್ಧನೆ ಮಾಡಿದ್ದು ಸಿದ್ದೇಶ್ವರ ಎಂಬುದನ್ನು ಮರೆಯದಿರಿ ಎಂದು ತಿಳಿಸಿದರು.ಮಾಜಿ ಶಾಸಕ ಪ್ರೊ. ಎನ್.ಲಿಂಗಣ್ಣ ಮಾತನಾಡಿ, ಮತದಾರರು ದೇಶದ ಹಿತದೃಷ್ಟಿ ಜೊತೆಗೆ ಜಿಲ್ಲೆಯ ಅಭಿವೃದ್ಧಿ ಬಯಸುತ್ತಿದ್ದಾರೆ. ದೇಶ ಸುರಕ್ಷತೆಯಿಂದ ಇರಬೇಕೆಂದರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ದಾವಣಗೆರೆ ಕ್ಷೇತ್ರ ಅಭಿವೃದ್ಧಿಯಾಗಲು ಗಾಯತ್ರಿ ಸಿದ್ದೇಶ್ವರ ಸಂಸದರಾಗಬೇಕು. ನಮ್ಮ ಕಾರ್ಯಕರ್ತರು, ಸಮಾಜ ಬಂಧುಗಳು ಗಾಯತ್ರಿ ಸಿದ್ಧೇಶ್ವರರ ಪರ ಕೆಲಸ ಮಾಡಿ, ಹೆಚ್ಚಿನ ಮತಗಳನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಬಸವರಾಜ್ ನಾಯ್ಕ್ ಮಾತನಾಡಿ, ಮಾಯಕೊಂಡ ಸೇರಿದಂತೆ ಇಡೀ ರಾಜ್ಯದ ಲಂಬಾಣಿ ಸಮುದಾಯ ಬಿಜೆಪಿ ಪರ ನಿಲ್ಲಬೇಕಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಾಂಡಾ ಅಭಿವೃದ್ಧಿ ನಿಗಮ ಮಾಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದರು. ನಮ್ಮ ಆರಾಧನಾ ಸ್ಥಳ ಸೂರಗೊಂಡನಕೊಪ್ಪದ ಸಮಗ್ರ ಅಭಿವೃದ್ಧಿಗಾಗಿ ಕೋಟ್ಯಂತರ ರು. ಅನುದಾನ ನೀಡಿದ್ದರು. ಬಿಜೆಪಿ ಯಾವಾಗಲೂ ನಮ್ಮ ಪರ ಇದ್ದು, ದಾವಣಗೆರೆ ಕ್ಷೇತ್ರದ ಲಂಬಾಣಿ ಬಾಂಧರು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ನಿಂತು, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ, ದೆಹಲಿಗೆ ಕಳುಹಿಸಬೇಕು ಎಂದು ಹೇಳಿದರು.ಮುಖಂಡರಾದ ದಾಕ್ಷಾಯಣಿ ಸಂಗಮೇಶ ನಿರಾಣಿ, ಪ್ರೇಮ, ಮಾಗನೂರು ಪ್ರಭಣ್ಣ, ಅಣಬೇರು ಜೀವನಮೂರ್ತಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಜಿ.ಎಸ್. ಶ್ಯಾಮ್ ಮಾಯಕೊಂಡ, ಮಂಡಲದ ಅಧ್ಯಕ್ಷ ದೇವೇಂದ್ರಪ್ಪ, ಹನುಮಂತ ನಾಯ್ಕ, ಮಂಜಾನಾಯ್ಕ್, ಹನುಮಂತಪ್ಪ, ಮಂಡಲದ ಸದಸ್ಯರು, ಗ್ರಾಪಂ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು, ಮಾಯಕೊಂಡ ಕ್ಷೇತ್ರದ ಮುಖಂಡರು, ಗ್ರಾಮಸ್ಥರು ಇದ್ದರು.
- - - ಕೋಟ್ದೇಶದ ಹಿತದೃಷ್ಟಿಯಿಂದ ಬಿಜೆಪಿ, ಜೆಡಿಎಸ್, ಜೆಡಿಯು ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದೆ. ಮೈತ್ರಿ ಭಾಗವಾಗಿ ನಮ್ಮ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಸಂಸದ ಜಿ.ಎಂ. ಸಿದ್ದೇಶ್ವರ ಪ್ರತಿ ಬಾರಿ ಬೆಂಬಲ ಕೋರುತ್ತಿದ್ದರು. ಈ ಬಾರಿ ಪ್ರೀತಿ ಪೂರ್ವಕವಾಗಿ ನಾವೆಲ್ಲರೂ ಸೇರಿಕೊಂಡು, ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ. ನೀವೆಲ್ಲರೂ ಅವರ ಪರವಾಗಿ ನಿಂತು, ಗಾಯತ್ರಿ ಸಿದ್ದೇಶ್ವರರನ್ನು ಗೆಲ್ಲಿಸಬೇಕು
- ತೇಜಸ್ವಿ ವಿ.ಪಟೇಲ್, ಹಿರಿಯ ಮುಖಂಡ- - - -30ಕೆಡಿವಿಜಿ8, 9:
ದಾವಣಗೆರೆ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾಯಕೊಂಡ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿದರು. ತೇಜಸ್ವಿ ಪಟೇಲ್, ದಾಕ್ಷಾಯಣಿ ಸಂಗಮೇಶ ನಿರಾಣಿ ಇತರರು ಇದ್ದರು. -30ಕೆಡಿವಿಜಿ10:ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾಯಕೊಂಡ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿದರು.