ಕ್ರೀಡಾಂಗಣ ಮಳಿಗೆ ಹರಾಜು ಮತ್ತೆ ಮುಂದೂಡಿಕೆ: ಪ್ರತಿಭಟನೆ

KannadaprabhaNewsNetwork | Published : Apr 2, 2025 1:03 AM

ಸಾರಾಂಶ

ಏ.1ರ ಮಂಗಳವಾರ ನಡೆಯಬೇಕಾಗಿದ್ದ ತಾಲೂಕು ಕ್ರೀಡಾಂಗಣ ವಾಣಿಜ್ಯ ಸಂಕೀರ್ಣಗಳ ಮಳಿಗೆ ಹರಾಜು ಮತ್ತೆ ಮುಂದೂಡಲಾಗಿದೆ. ಈ ಕ್ರಮ ಖಂಡಿಸಿ, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹಾಗೂ ಹರಾಜಿನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದವರು ಪ್ರತಿಭಟನೆಗೆ ಮುಂದಾದರು. ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಗೋವಿಂದ ಹರಾಜು ಮಾಡದಿದ್ದರೆ ಇಲ್ಲಿಯೇ ವಿಷ ಕುಡಿಯುತ್ತೇನೆ ಎಂದು ಕಚೇರಿ ಮುಂಭಾಗ ಧರಣಿ ಕುಳಿತು, ಅಸ್ವಸ್ಥಗೊಂಡ ಘಟನೆ ಮಂಗಳವಾರ ನಡೆಯಿತು.

- ವಿಷ ಕುಡಿಯುವ ಬೆದರಿಕೆ ಹಾಕಿದ್ದ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಅಸ್ವಸ್ಥ, ಚಿಕಿತ್ಸೆ - - -

ಕನ್ನಡಪ್ರಭ ವಾರ್ತೆ ಹರಿಹರ

ಏ.1ರ ಮಂಗಳವಾರ ನಡೆಯಬೇಕಾಗಿದ್ದ ತಾಲೂಕು ಕ್ರೀಡಾಂಗಣ ವಾಣಿಜ್ಯ ಸಂಕೀರ್ಣಗಳ ಮಳಿಗೆ ಹರಾಜು ಮತ್ತೆ ಮುಂದೂಡಲಾಗಿದೆ. ಈ ಕ್ರಮ ಖಂಡಿಸಿ, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹಾಗೂ ಹರಾಜಿನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದವರು ಪ್ರತಿಭಟನೆಗೆ ಮುಂದಾದರು. ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಗೋವಿಂದ ಹರಾಜು ಮಾಡದಿದ್ದರೆ ಇಲ್ಲಿಯೇ ವಿಷ ಕುಡಿಯುತ್ತೇನೆ ಎಂದು ಕಚೇರಿ ಮುಂಭಾಗ ಧರಣಿ ಕುಳಿತು, ಅಸ್ವಸ್ಥಗೊಂಡ ಘಟನೆ ಮಂಗಳವಾರ ನಡೆಯಿತು.

ನಗರದ ಗಾಂಧಿ ಮೈದಾನದಲ್ಲಿರುವ ಯುವಜನ ಕ್ರೀಡಾ ಇಲಾಖೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಅವಧಿ ಮುಗಿದು ವರ್ಷಗಳೇ ಕಳೆದಿವೆ. ಆದರೂ, ಮರುಹರಾಜು ಮಾಡುತ್ತಿಲ್ಲ ಎಂದು ನಗರದ ಸಾರ್ವಜನಿಕರು, ವಿವಿಧ ಸಂಘಟನೆಗಳು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ತಾಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮರುಹರಾಜು ನಡೆಸಬೇಕು ಎಂದು ಅನೇಕ ತಿಂಗಳಿಂದ ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ಧರಣಿ ನಡೆಸುತ್ತಿದ್ದರು. ಅನೇಕ ಬಾರಿ ಹರಾಜು ಮಾಡುವ ಪ್ರಕಟಣೆ ಹೊರಡಿಸಿದ್ದ ಇಲಾಖೆ ವಿವಿಧ ಕಾರಣಗಳನ್ನು ನೀಡಿ, ಹರಾಜು ಪ್ರಕ್ರಿಯೆ ಮುಂದೂಡುತ್ತ ಬಂದಿದೆ. ಈ ಬಾರಿಯೂ ಏ.1ರಂದು ಮರುಹರಾಜು ಮಾಡುವುದಾಗಿ ತಿಳಿಸಿದ್ದ ಇಲಾಖೆ ಮತ್ತೆ ಹರಾಜು ಮುಂದೂಡಿದೆ. ಇದು ಸಂಘಟನೆ ಕಾರ್ಯಕರ್ತರಲ್ಲಿ ಕೋಪ ತರಿಸಿದೆ.

ಈ ಸಂದರ್ಭ ವಿಷ ಕುಡಿಯುವ ಬೆದರಿಕೆ ಹಾಕಿದ್ದ ಸಂಘಟನೆ ಅಧ್ಯಕ್ಷ ಗೋವಿಂದ ಅಸ್ವಸ್ಥಗೊಂಡರು. ಕೂಡಲೇ ಸ್ಥಳದಲ್ಲಿದ್ದ ಕೆಲವರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದರು.

ವಾಣಿಜ್ಯ ಸಂಕೀರ್ಣದಲ್ಲಿ ನೆಲ ಮತ್ತು ಮೊದಲನೆ ಮಹಡಿ ಸೇರಿ ಒಟ್ಟು 48 ಮಳಿಗೆಗಳಿವೆ. ಅವುಗಳಲ್ಲಿ 22 ಮಳಿಗೆಗಳಿಗೆ ಮಾತ್ರ ಏ.1ರಂದು ಹರಾಜು ಮಾಡಲಾಗುವುದು ಎಂದು ಪ್ರಕಟಣೆ ಹೊರಡಿಸಲಾಗಿತ್ತು. ಈ ಹಿನ್ನೆಲೆ ಆಸಕ್ತರು ₹500 ಅರ್ಜಿ ಶುಲ್ಕ ನೀಡಿ, ಆರ್ಜಿ ಪಡೆದು ಹರಾಜಿನಲ್ಲಿ ಭಾಗವಹಿಸಲು ಹಲವರು ಡಿ.ಡಿ. ಸಹ ತುಂಬಿ ಕಾಯುತ್ತಿದ್ದರು.

ಆದರೆ, ಏ.1ರಂದು ಬೆಳಗ್ಗೆ ಯುವಜನ ಕ್ರೀಡಾ ಇಲಾಖೆ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಹಾಗೂ ಜಿಲ್ಲಾಧಿಕಾರಿ ಆದೇಶದಂತೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಏ.7ರಂದು ವಿಚಾರಣೆ ನಡೆಯಲಿದೆ. ಅನಂತರ ಮಳಿಗೆ ಹರಾಜು ನಡೆಸಲಾಗುವುದು ಎಂದು ಕಚೇರಿ ಗೋಡೆ ಮೇಲೆ ನೋಟಿಸ್ ಹಾಕಿದರು.

ಪ್ರತಿಭಟನೆ ಮಾಡುತ್ತಿದ್ದ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಕೂಡಲೇ ಮಳಿಗೆ ಹರಾಜು ಮಾಡಬೇಕು ಎಂದು ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಧಿಕಾರಿಗಳ ನಡೆಯನ್ನು ಖಂಡಿಸಿ ಅರ್ಜಿದಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿ ಅಲ್ಲಿಂದ ತೆರಳಿದರು.

ಈ ವೇಳೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು, ಅರ್ಜಿದಾರರು ಹಾಗೂ ಇತರರಿದ್ದರು.

- - -

-1ಎಚ್‍ಆರ್‍ಆರ್02:

ಹರಿಹರದ ಗಾಂಧಿ ಮೈದಾನದಲ್ಲಿರುವ ಕ್ರೀಡಾ ಇಲಾಖೆ ಕಚೇರಿ ಮುಂಭಾಗ ಮಂಗಳವಾರ ಜಯ ಕರ್ನಾಟಕ ಕಾರ್ಯಕರ್ತರು ಮಳಿಗೆ ಹರಾಜು ನಡೆಸಲು ಆಗ್ರಹಿಸಿ ಪ್ರತಿಭಟನೆ ಮಾಡಿದರು. -1ಎಚ್‍ಆರ್‍ಆರ್02ಎ:

ಹರಿಹರದ ಗಾಂಧಿ ಮೈದಾನದಲ್ಲಿರುವ ಕ್ರೀಡಾ ಇಲಾಖೆ ಕಚೇರಿ ಮುಂಭಾಗ ಮಂಗಳವಾರ ಹೋರಾಟ ಮಾಡುವ ವೇಳೆ ಅಸ್ವಸ್ಥಗೊಂಡ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಗೋವಿಂದ ಅವರಿಗೆ ಆಂಬ್ಯುಲೆನ್ಸ್‌ನಲ್ಲಿ ಚಿಕಿತ್ಸೆ ನೀಡಲಾಯಿತು.

Share this article