ಬಿಸಿಯೂಟದ ಸಾಮಗ್ರಿ ಕದ್ದು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಸಿಬ್ಬಂದಿ

KannadaprabhaNewsNetwork |  
Published : Aug 25, 2024, 01:55 AM ISTUpdated : Aug 25, 2024, 01:56 AM IST
ಸಸಸಸಸ | Kannada Prabha

ಸಾರಾಂಶ

ಮಕ್ಕಳು ಪಾಲಕರಿಗೆ ತಿಳಿಸಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಗ್ರಾಮಸ್ಥರು, ಇದರ ಜಾಡು ಹಿಡಿದು ಪರಿಶೀಲನೆ ನಡೆಸಿದಾಗ ಶನಿವಾರ ಪ್ರಕರಣ ಬೆಳಕಿಗೆ

ಲಕ್ಷ್ಮೇಶ್ವರ: ಸಮೀಪದ ಸೂರಣಗಿ ಗ್ರಾಮದ ಮಕ್ಕಳ ಬಿಸಿಯೂಟಕ್ಕೆ ದಾಸ್ತಾನು ಮಾಡಲಾಗಿದ್ದ ಅಕ್ಕಿ ಹಾಗೂ ಹಾಲಿನ ಪುಡಿ, ತರಕಾರಿಯನ್ನು ಅಡುಗೆ ಸಹಾಯಕಿಯರು ಸೇರಿದಂತೆ ಶಾಲಾ ಸಿಬ್ಬಂದಿಗಳೇ ಕಳವು ಮಾಡಿ ತೆಗೆದುಕೊಂಡು ಹೋಗುತ್ತಿರುವಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಶನಿವಾರ ನಡೆದಿದೆ.

ಸೂರಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ದಿನನಿತ್ಯ ಮಕ್ಕಳಿಗೆ ಕೊಡುವ ಬಿಸಿಯೂಟದ ಅಕ್ಕಿ, ಹಾಲಿನ ಪ್ಯಾಕೇಟ್ ಹಾಗೂ ತರಕಾರಿ ಕಳವು ಆಗುತ್ತಿರುವ ಬಗ್ಗೆ ಮಕ್ಕಳು ಪಾಲಕರಿಗೆ ತಿಳಿಸಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಗ್ರಾಮಸ್ಥರು, ಇದರ ಜಾಡು ಹಿಡಿದು ಪರಿಶೀಲನೆ ನಡೆಸಿದಾಗ ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ.

ಮಕ್ಕಳು ನಮ್ಮ ಶಾಲೆಯಲ್ಲಿ ನಮಗೆ ಬಿಸಿಯೂಟ ಸರಿಯಾಗಿ ಕೊಡುತ್ತಿಲ್ಲ ಎಂದು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷರಿಗೆ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಶನಿವಾರ ಬಿಸಿಯೂಟದ ಸಾಮಗ್ರಿ ಕದ್ದು ತೆಗೆದುಕೊಂಡು ಹೋಗುತ್ತಿರುವ ಖಚಿತ ಮಾಹಿತಿ ಮೇರೆಗೆ ಬಿಸಿಯೂಟದ ಅಕ್ಕಿ, ಹಾಲಿನ ಪ್ಯಾಕೇಟ್ ಹಾಗೂ ತರಕಾರಿಯನ್ನು ತಳ್ಳುವ ಗಾಡಿಯಲ್ಲಿ ಸಾಗಿಸುತ್ತಿರುವಾಗ ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಸವರಾಜ ಮೇಲ್ಮುರಿ, ಶರಣಪ್ಪ ಅಮರಾಪೂರ, ಬಸಣ್ಣ ಹಾದಿಮನಿ, ಈರಣ್ಣ ಶಿರನಹಳ್ಳಿ, ಪುಟ್ಟಯ್ಯ ಮಠಪತಿ ಮೊದಲಾದವರು ಇದ್ದರು.

ಶನಿವಾರ ಶಾಲೆಗೆ ಅರ್ಧ ದಿನ ರಜೆ ಇದ್ದ ವೇಳೆಯಲ್ಲಿ ಕದ್ದು ಸಾಗಿಸುತ್ತಿದ್ದ ಬಿಸಿಯೂಟದ ಸಾಮಗ್ರಿಗಳನ್ನು ಮರಳಿ ಶಾಲೆಗೆ ತೆಗೆದುಕೊಂಡು ಹೋಗಿ ಇಡಲಾಗಿದೆ. ಸೋಮವಾರ ಶಾಲೆ ಆರಂಭಕ್ಕೂ ಮೊದಲು ಭೇಟಿ ನೀಡಿ ಪರಿಶೀಲನೆ ಮಾಡಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಶಾಲೆಯಲ್ಲಿ ಪೂರ್ಣಾವಧಿ ಮುಖ್ಯೋಪಾಧ್ಯಾಯರು ವರ್ಗಾವಣೆಗೊಂಡಿದ್ದರಿಂದ ಪ್ರಭಾರಿ ಮುಖ್ಯೋಪಾಧ್ಯಾಯ ಮಳಲಿ ಅವರಿಗೆ ಈ ಕುರಿತು ನೋಟೀಸ್ ನೀಡಲಾಗುವುದು ಎಂದು ಬಿಸಿಯೂಟ ಅಕ್ಷರ ದಾಸೋಹ ತಾಲೂಕಾಧಿಕಾರಿ ರಾಮನಗೌಡರ ತಿಳಿಸಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಿಯಾಗಿ ಬಿಸಿಯೂಟ ಕೊಡುತ್ತಿಲ್ಲ ಎಂದು ಮಕ್ಕಳು ನಮ್ಮ ಮುಂದೆ ಹೇಳಿದರು, ಖಚಿತ‌ ಮಾಹಿತಿಯ ಮೇರೆಗೆ ಅಕ್ಕಿ, ಹಾಲಿನ ಪುಡಿ ಹಾಗೂ ತರಕಾರಿ ಸಾಗಾಟ ಮಾಡುತ್ತಿರುವುದನ್ನು ಗಮನಿಸಿ ಗ್ರಾಮಸ್ಥರು, ನಾವು ಸೇರಿ ಬಿಸಿಯೂಟದ ಸಾಮಗ್ರಿ ಕದ್ದು ಸಾಗಾಟ ಮಾಡುತ್ತಿದ್ದವರನ್ನು ಹಿಡಿದಿದ್ದೇವೆ. ಇದರಲ್ಲಿ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಹಾಗೂ ಇಬ್ಬರು ಅಡುಗೆ ಸಹಾಯಕಿಯರ ಕೈವಾಡ ಇದೆ. ಇವರನ್ನು ಶಾಲೆಯಿಂದ ಕೂಡಲೇ ಅಮಾನತ್ತು ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ರಮೇಶ ಹಂಗನಕಟ್ಟಿ ತಿಳಿಸಿದ್ದಾರೆ.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು