ಶಿವಾನಂದ ಪಿ.ಮಹಾಬಲಶೆಟ್ಟಿ
ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಅಗತ್ಯ ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕ ಸೇವೆಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ನಗರಸಭೆ ಕಚೇರಿಯಲ್ಲಿ ಒಟ್ಟು ೪೯ ಸಿಬ್ಬಂದಿ ಇರಬೇಕಿದ್ದು, ಪ್ರಸ್ತುತ ಕೇವಲ ೩೭ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ೧೨ಕ್ಕೂ ಅಧಿಕ ಹುದ್ದೆಗಳು ಖಾಲಿ ಉಳಿದಿದ್ದು, ಇರುವ ಸಿಬ್ಬಂದಿ ಮೇಲೆಯೇ ಹೆಚ್ಚಿನ ಕೆಲಸದ ಹೊರೆ ಬಿದ್ದಿದೆ.
ನಗರಸಭೆಯ ವಿವಿಧ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ನಿತ್ಯ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ನಗರ ವ್ಯಾಪ್ತಿ ಹಾಗೂ ಜನಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಅಗತ್ಯ ಪ್ರಮಾಣದ ಅಧಿಕಾರಿ ಮತ್ತು ಸಿಬ್ಬಂದಿ ನೇಮಕವಾಗದಿರುವುದು ಆಡಳಿತದ ಮೇಲೆ ನೇರ ಪರಿಣಾಮ ಬೀರುತ್ತಿದೆ.ಪ್ರಸ್ತುತ ನಗರಸಭೆಯಲ್ಲಿ ಎಇ, ಜೆಇಇ, ಪರಿಸರ ಅಭಿಯಂತರರು ತಲಾ ಒಂದು, ಸಮುದಾಯ ಸಂಘಟಕರು ಎರಡು, ಬಿಲ್ ಕಲೆಕ್ಟರ್ ಒಂದು, ಸಾಮುದಾಯಿಕ ಅಧಿಕಾರಿ, ದ್ವಿತೀಯ ದರ್ಜೆ ಸಹಾಯಕರು ಎರಡು, ಹಿರಿಯ ಆರೋಗ್ಯ ನಿರೀಕ್ಷಕರು ಒಂದು ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರ ಒಂದು ಹುದ್ದೆ ಸೇರಿದಂತೆ ಒಟ್ಟು ೧೨ ಹುದ್ದೆಗಳು ಖಾಲಿ ಇವೆ.ಈ ಹುದ್ದೆಗಳು ಖಾಲಿ ಇರುವುದರಿಂದ ನಗರಸಭೆ ಆಡಳಿತಾತ್ಮಕ ಕಾರ್ಯಗಳ ಜತೆಗೆ ಸಾರ್ವಜನಿಕರಿಗೆ ಒದಗಿಸಬೇಕಾದ ವಿವಿಧ ಸೇವೆಗಳ ಮೇಲೂ ಪರಿಣಾಮ ಬೀರುತ್ತಿದೆ. ಒಂದೇ ಸಿಬ್ಬಂದಿ ಹಲವು ವಿಭಾಗಗಳ ಜವಾಬ್ದಾರಿ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಕೆಲಸದ ಒತ್ತಡ ಹೆಚ್ಚುತ್ತಿದ್ದು, ಸಾರ್ವಜನಿಕರ ಅರ್ಜಿಗಳು, ದಾಖಲೆಗಳ ಪರಿಶೀಲನೆ, ತೆರಿಗೆ ಸಂಬಂಧಿತ ಕೆಲಸಗಳು, ಆರೋಗ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದ ಕಾರ್ಯಗಳು ಸೇರಿದಂತೆ ವಿವಿಧ ಸೇವೆಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸುವುದು ಕಷ್ಟವಾಗುತ್ತಿದೆ.