ಎಟಿಎಂಗಳಿಗೆ ಹಾಕಬೇಕಿದ್ದ 3.4 ಕೋಟಿ ರು.ಗೂ ಹೆಚ್ಚು ಹಣವನ್ನು ಸಿಎಂಎಸ್ ಸಂಸ್ಥೆಯ ಸಿಬ್ಬಂದಿ ನುಂಗಿದ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ.
ಕನ್ನಡಪಗ್ರ ವಾರ್ತೆ ಹಾಸನ:
ಎಟಿಎಂಗಳಿಗೆ ಹಾಕಬೇಕಿದ್ದ 3.4 ಕೋಟಿ ರು.ಗೂ ಹೆಚ್ಚು ಹಣವನ್ನು ಸಿಎಂಎಸ್ ಸಂಸ್ಥೆಯ ಸಿಬ್ಬಂದಿ ನುಂಗಿದ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ. ಫೆ.18 ಮತ್ತು 19ರಂದು ಕಂಪನಿಯ ಆಡಿಟ್ ವೇಳೆ ಹಣಕಾಸು ವ್ಯವಹಾರಗಳಲ್ಲಿ ಭಾರಿ ವ್ಯತ್ಯಾಸ ಪತ್ತೆಯಾಗಿದೆ. ಇದಕ್ಕೂ ಮೊದಲು ಫೆ.9ರಂದು ನಡೆದ ಆಡಿಟ್ ವೇಳೆ ಯಾವುದೇ ಹಣ ದುರ್ಬಳಕೆ ಆಗಿದ್ದು ಕಂಡು ಬಂದಿರಲಿಲ್ಲ. ಬಳಿಕ, ಶಾಖಾ ವ್ಯವಸ್ಥಾಪಕರು ಪರಿಶೀಲನೆ ನಡೆಸಿದಾಗ ಸುಮಾರು 15 ಎಟಿಎಂಗಳಲ್ಲಿ ಹಣದ ಕೊರತೆ ಕಂಡು ಬಂದಿದೆ. ಪ್ರಕರಣ ಸಂಬಂಧ ಕಂಪನಿಯ ಇಬ್ಬರು ಕಸ್ಟೋಡಿಯನ್ ಸಿಬ್ಬಂದಿ ನಂದೀಶ್ ಬಿ.ಎಲ್. ಹಾಗೂ ಮಧುಕುಮಾರ್ ಎಂ.ಪಿ.ವಿರುದ್ಧ ದೂರು ದಾಖಲಾಗಿದೆ. ಇಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇವರಿಬ್ಬರೂ ಕಳೆದ 10 ವರ್ಷಗಳಿಂದ ಕಸ್ಟೋಡಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಟಿಎಂಗಳಿಗೆ ಹಣ ತುಂಬಿಸುವ ವೇಳೆ ದಾಖಲು ಮಾಡುವಂತಹ ವಿಧಾನದಲ್ಲಿ (5 ಲಕ್ಷ ರು.ಹಾಕಿ 10 ಲಕ್ಷ ಎಂದು ದಾಖಲು ಮಾಡುವಂತದ್ದು) ಅಕ್ರಮ ನಡೆದಿರಬಹುದು ಎಂಬ ಶಂಕೆ ಇದೆ.
ಎಟಿಎಂ ಯಂತ್ರ ತೆರೆಯುವ ಅಧಿಕಾರವೂ ಇವರಿಬ್ಬರಲ್ಲೇ ಇದ್ದುದರಿಂದ, ಇವರ ಮೇಲೆಯೇ ಅನುಮಾನ ಇದೆ. ಎಟಿಎಂಗಳಲ್ಲಿ ತುಂಬಿಸಿದ ಮೊತ್ತ ಹಾಗೂ ಗ್ರಾಹಕರು ಡ್ರಾ ಮಾಡಿದ ಮೊತ್ತವನ್ನು ಹೋಲಿಕೆ ಮಾಡಿದಾಗಷ್ಟೇ ಇಂಥ ಅಕ್ರಮ ಬಯಲಾಗುತ್ತೆ ಎಂದು ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.ಸಿಎಂಎಸ್ ಬ್ರ್ಯಾಂಚ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.