ಸೋಮರಡ್ಡಿ ಅಳವಂಡಿ
ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ನೀರು ತಳಸೇರಿದೆ. ಕಳೆದ ಹತ್ತು ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ತಲುಪಿದೆ. ಪರಿಣಾಮ ಜಲಾಶಯದಲ್ಲಿರುವ ಜಲಚರಗಳು ಸಾಯಲಾರಂಭಿಸಿವೆ.ಹೌದು, ತುಂಗಭದ್ರಾ ಜಲಾಶಯದಲ್ಲಿ ಮೇ 10ರಂದು ಕೇವಲ 3.44 ಟಿಎಂಸಿ ನೀರು ಮಾತ್ರ ಇದೆ. ಕಳೆದ ಹತ್ತು ವರ್ಷಗಳ ಸರಾಸರಿ ಈ ದಿನ 3.66 ಟಿಎಂಸಿ ಇದೆ. ಹತ್ತು ವರ್ಷಗಳ ಸರಾಸರಿಗಿಂತಲೂ ಕಡಿಮೆಯಾಗಿದೆ.
ಸಾಯುತ್ತಿರುವ ಜಲಚರಗಳು: ತುಂಗಭದ್ರಾ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಈಗಾಗಲೇ ಲಕ್ಷಾಂತರ ಮೀನುಗಳು ನೀರಿನ ಕೊರತೆಯಿಂದ ಸತ್ತಿವೆ. ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಸುತ್ತಾಡಿದರೆ ಸತ್ತ ಮೀನುಗಳು ಕಾಣುತ್ತವೆ. ಸತ್ತ ಜಲಚರಗಳನ್ನು ತಿನ್ನುವುದಕ್ಕಾಗಿ ಇಲ್ಲಿಗೆ ಪಕ್ಷಿಗಳು, ನಾಯಿಗಳು ಲಗ್ಗೆ ಇಡುತ್ತಿವೆ.
ಮುಂಗಾರು ಪೂರ್ವ ಮಳೆಯಿಲ್ಲ: ಪ್ರತಿ ಬಾರಿಯೂ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆಯಾಗಿ ಜಲಾಶಯಕ್ಕೆ ಒಂದಿಷ್ಟು ನೀರು ಹರಿದು ಬರುತ್ತಿತ್ತು. ಆದರೆ, ಈ ವರ್ಷ ಆ ಮಳೆಯೇ ಆಗಲಿಲ್ಲ. ಹೀಗಾಗಿ, ಜಲಾಶಯಕ್ಕೆ ಇದುವರೆಗೂ ಒಳಹರಿವು ಒಮ್ಮೆಯೂ ಬಂದಿಲ್ಲ. ಹೀಗಾಗಿ, ಜಲಾಶಯದಲ್ಲಿ ನೀರು ಬತ್ತುತ್ತಲೇ ಇದೆ.ಆವಿಯಾಗುವ ಪ್ರಮಾಣ ಅಧಿಕ: ಜಲಾಶಯದಲ್ಲಿ ನೀರಿನ ಪ್ರಮಾಣ ಅಧಿಕ ಇದ್ದಷ್ಟು ಆವಿಯಾಗುವ ಪ್ರಮಾಣ ಕಡಿಮೆ ಇರುತ್ತದೆ. ಆದರೆ, ಈಗ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಆವಿಯಾಗುವ ಪ್ರಮಾಣ ಅಧಿಕವಾಗಿರುತ್ತದೆ. ಇದು ಸಹ ಜಲಾಶಯದಲ್ಲಿ ನೀರು ದಿನೇ ದಿನೇ ಕಡಿಮೆಯಾಗುವುದಕ್ಕೆ ಕಾರಣವಾಗಿದೆ.
ಕುಡಿಯುವ ನೀರಿಗೂ ಅಭಾವ: ತುಂಗಭದ್ರಾ ಜಲಾಶಯದಲ್ಲಿನ ನೀರು ನೆಚ್ಚಿಕೊಂಡೇ ಸುಮಾರು ಮೂರು ಜಿಲ್ಲೆಗಳು ಇವೆ. ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಕೊಪ್ಪಳ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಅಲ್ಲೆಲ್ಲ ಈಗ ನೀರಿಲ್ಲದೆ ಸಮಸ್ಯೆಯಾಗಿದೆ. ನೂರಾರು ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಪಂಪ್‌ಸೆಟ್‌ಗಳಿಗೆ ನೀರಿಲ್ಲದಂತೆ ಆಗಿದೆ.ಇನ್ನು ತುಂಗಭದ್ರಾ ಜಲಾಶಯದಿಂದ ಕೆಳಭಾಗದಲ್ಲಿ ಇರುವ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳು ಇದೇ ನೀರನ್ನು ನೆಚ್ಚಿಕೊಂಡಿವೆ. ನೀರಿನ ಅಭಾವ ಆದಾಗಲೆಲ್ಲ ಕಾಲುವೆಯ ಮೂಲಕ ನೀರು ಹರಿಸಿ, ಕೆರೆಗಳನ್ನು ನೀರು ಭರ್ತಿ ಮಾಡಿ, ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಈಗ ಜಲಾಶಯದಲ್ಲಿ ನೀರು ಇಲ್ಲದೆ ಇರುವುದರಿಂದ ಇಲ್ಲಿಯೂ ಸಮಸ್ಯೆಯಾಗುತ್ತದೆ. ಸದ್ಯಕ್ಕೆ ಹೇಗೋ ನಿಭಾಯಿಸಲಾಗುತ್ತಿದೆ. ವಾರದೊಳಗೆ ಮಳೆಯಾಗದಿದ್ದರೆ ಪರಿಣಾಮ ಗಂಭೀರವಾಗಲಿದೆ.