ಸವಣೂರು: ಸಾಮಾಜಿಕ ನ್ಯಾಯ, ಸಮಾನತೆಯನ್ನು ಸಾಧಿಸಲು ಭ್ರಷ್ಟಾಚಾರ ನಿಲ್ಲಬೇಕು. ಸಾಮಾಜಿಕ ನ್ಯಾಯದ ದೊಡ್ಡ ಶತ್ರು ಭ್ರಷ್ಟಾಚಾರ. ಶಿಗ್ಗಾಂವಿಯಲ್ಲಿ ನನ್ನನ್ನು ಗೆಲ್ಲಿಸಿದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರವಿಕೃಷ್ಣ ರೆಡ್ಡಿ ಭರವಸೆ ನೀಡಿದ್ದಾರೆ. ಸವಣೂರಿನ ಕಾರಡಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜನ ಸಂವಾದಲ್ಲಿ ಮಾತನಾಡಿದ ಅವರು, ಕರ್ನಾಟಕ ಅತಿ ಭ್ರಷ್ಟ ರಾಜ್ಯಗಳಲ್ಲಿ ಒಂದಾಗಿದ್ದು, ಇದಕ್ಕೆ ಕಳೆದ ಎರಡು ದಶಕಗಳಲ್ಲಿ ನಡೆದಿರುವ ಹಗರಣಗಳೇ ಸಾಕ್ಷಿ. ಮುಡಾ, ವಾಲ್ಮೀಕಿ ನಿಗಮ, ಗಣಿ ಹಗರಣಗಳು, ಕೋವಿಡ್ ಹಗರಣ ಪ್ರಮುಖವಾಗಿವೆ. ಇದರ ಜತೆಗೆ ತಾಲೂಕು ಕಚೇರಿ, ಸಬ್ ರಿಜಿಸ್ಟ್ರಾರ್, ಪೊಲೀಸ್ ಠಾಣೆಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಜನರನ್ನು ಅವ್ಯಾಹತವಾಗಿ ಸುಲಿಗೆ ಮಾಡಲಾಗುತ್ತಿದೆ. ಈಗಾಗಲೇ ಶಿಗ್ಗಾಂವಿ ಮತ್ತು ಸವಣೂರಿನಲ್ಲಿ ಸರ್ಕಾರಿ ಕಚೇರಿಗಳನ್ನು ಸ್ವಚ್ಛ ಮಾಡುವ ಕೆಲಸವನ್ನು ಕೆಆರ್‌ಎಸ್ ಪಕ್ಷದ ವತಿಯಿಂದ ಆರಂಭಿಸಲಾಗಿದೆ. ಇದು ಮತ್ತಷ್ಟು ಪರಿಣಾಮಕಾರಿ ಜಾರಿಯಾಗಿ, ಜನರು ನೆಮ್ಮದಿಯ ಜೀವನ ನಡೆಸಬೇಕೆಂದರೆ ಕೆಆರ್‌ಎಸ್ ಪಕ್ಷಕ್ಕೆ ಅಧಿಕಾರ ನೀಡಬೇಕು, ಅದು ಶಿಗ್ಗಾಂವಿ ಸವಣೂರಿನ ಜನರಿಂದ ಆರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇಡೀ ರಾಜ್ಯಕ್ಕೆ ಬೆಳಕು ಕೊಡುವ ಶಕ್ತಿ ಈಗ ಬಂದಿದೆ. ಸರ್ಕಾರ ನಮ್ಮದು, ಹಣಕಾಸು ನಮ್ಮದು, ದುಡಿಮೆ ನಮ್ಮದು. ಆದರೆ, ಉತ್ತಮ ಆರೋಗ್ಯ, ಶಿಕ್ಷಣ, ರಸ್ತೆಗಳು ಇಲ್ಲ. ನಮಗೆ ಸಿಗಬೇಕಾದ ಹಕ್ಕುಗಳು ಸಿಗುತ್ತಿಲ್ಲ. 3ಲಕ್ಷಕ್ಕಿಂತ ಅಧಿಕ ಸರ್ಕಾರಿ ಹುದ್ದೆ ಖಾಲಿ ಇವೆ. ಮಾಜಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ, ಇವತ್ತಿನ ಸಿದ್ದರಾಮಯ್ಯ ಈ ಹುದ್ದೆಗಳನ್ನು ತುಂಬಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಸರ್ಕಾರಗಳು ಯುವ ಜನರ ಸಾಮರ್ಥ್ಯವನ್ನು ಬಳಕೆ ಮಾಡುವಲ್ಲಿ ವಿಫಲವಾಗಿವೆ, ಇವನ್ನು ಸರಿಪಡಿಸಬೇಕೆಂದರೆ, ವಿದ್ಯಾವಂತ ಯುವಜನರು ಕೆಆರ್‌ಎಸ್ ಪಕ್ಷಕ್ಕೆ ಬರಬೇಕು ಎಂದು ಕರೆ ನೀಡಿದರು.
ರವಿ ಕೃಷ್ಣರೆಡ್ಡಿ ಅವರು ಗ್ರಾಮ ವಾಸ್ತವ್ಯ ಆರಂಭಿಸಿದ್ದು, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತದಾರರ ಮನೆಗಳಲ್ಲಿ ವಾಸ್ತವ್ಯ ಮಾಡಿ, ಅಲ್ಲಿನ ಸಮಸ್ಯೆಗಳನ್ನು ಅರಿತುಕೊಳ್ಳುವ ಕೆಲಸ ಸಹ ಮಾಡುತ್ತಿದ್ದಾರೆ. ಆನಂತರ ಮುಂಜಾನೆಯೇ ಹಳ್ಳಿಗಳಲ್ಲಿ “ಪ್ರಭಾತ್ ಫೇರಿ” ಮೂಲಕ ಪ್ರಚಾರ ಆರಂಭಿಸುತ್ತಿದ್ದಾರೆ. ಗ್ರಾಮ ವಾಸ್ತವ್ಯದ ಭಾಗವಾಗಿ ನಿನ್ನೆ ತಡಸ ಬಳಿಯ ಮುತ್ತಳ್ಳಿಯಲ್ಲಿ ವಸತಿ ಮಾಡಿ, ಮುಂಜಾನೆ ತಡಸ ಗ್ರಾಮದಲ್ಲಿ ಪ್ರಭಾತ್ ಪೇರಿ ಮಾಡಲಾಯಿತು.ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ, ಮುಖಂಡರಾದ ಸೋಮಸುಂದರ್, ರಘುಪತಿ ಭಟ್, ಜನನಿ ವತ್ಸಲ, ಚಂದ್ರಶೇಖರ ಮಠದ, ಧರ್ಮರಾಜ್ ಬಿಂದಲಗಿ ಮತ್ತಿತರರು ಉಪಸ್ಥಿತರಿದ್ದರು.