ಕಾಲ್ತುಳಿತ ಪ್ರಕರಣ: ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Jun 07, 2025, 12:20 AM IST
ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ಆರ್‌ಸಿಬಿ ತಂಡದ ವಿಜಯೋತ್ಸವವನ್ನು ಸರ್ಕಾರ ಬೇಜವಾಬ್ದಾರಿಯಿಂದ ಮಾಡಿದೆ. ಲಕ್ಷಾಂತರ ಅಭಿಮಾನಿಗಳು ಸೇರುವ ಕಾರ್ಯಕ್ರಮಕ್ಕೆ ಯಾವುದೇ ಸಿದ್ಧತೆ ಮಾಡಿಕೊಳ್ಳದೆ ಕಡೆಗಣಿಸಿದ್ದು 11 ಮಂದಿ ಸಾವಿನ ದುರಂತಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಪ್ರಕರಣದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮುಖಂಡರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಮುಖಂಡರು, ಕಾಂಗ್ರೆಸ್ ಸರ್ಕಾರ ಅಮಾಯಕರನ್ನು ಬಲಿ ಪಡೆಯಿತು ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಆರ್‌ಸಿಬಿ ಕಪ್‌ ಗೆದ್ದ ಸಂಭ್ರಮವನ್ನು ವಿಜಯೋತ್ಸವ ಆಚರಿಸಿ ಪ್ರಚಾರ ಪಡೆಯುವ ಪ್ರಯತ್ನ ನಡೆಸಿದ ಸರ್ಕಾರ, ಕಾರ್ಯಕ್ರಮದ ಪೂರ್ವ ಸಿದ್ಧತೆ, ಭದ್ರತೆ ಮಾಡುವಲ್ಲಿ ನಿರ್ಲಕ್ಷ್ಯ ಮಾಡಿ ೧೧ ಮಂದಿ ಅಮಾಯಕ ಅಭಿಮಾನಿಗಳ ಸಾವಿಗೆ ಕಾರಣವಾಗಿದೆ. ತರಾತುರಿಯಲ್ಲಿ ಕಾರ್ಯಕ್ರಮದ ಆಯೋಜನೆ ಬೇಡ ಎಂದು ಪೊಲೀಸ್ ಇಲಾಖೆ ಹೇಳಿದರೂ ಅವರ ಅಭಿಪ್ರಾಯವನ್ನು ಧಿಕ್ಕರಿಸಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ಪ್ರತಿಷ್ಠೆಗೆ ಕಾರ್ಯಕ್ರಮ ಮಾಡಿ ಸಾವಿಗೆ ಕಾರಣರಾಗಿರುವುದು ಖಂಡನೀಯ ಎಂದರು.

ಪ್ರಕರಣದ ಹೊಣೆಯನ್ನು ಪೊಲೀಸರ ಮೇಲೆ ಹೊರಿಸಿ, ಹೊಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿ ಪೊಲೀಸರನ್ನು ಅಮಾನತು ಮಾಡಿರುವ ಸರ್ಕಾರಕ್ಕೆ ರಾಜ್ಯದ ಜನ ಛೀಮಾರಿ ಹಾಕುತ್ತಿದ್ದಾರೆ. ಈ ದುರಂತಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಪರಮೇಶ್ವರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಆರ್‌ಸಿಬಿ ತಂಡದ ವಿಜಯೋತ್ಸವವನ್ನು ಸರ್ಕಾರ ಬೇಜವಾಬ್ದಾರಿಯಿಂದ ಮಾಡಿದೆ. ಲಕ್ಷಾಂತರ ಅಭಿಮಾನಿಗಳು ಸೇರುವ ಕಾರ್ಯಕ್ರಮಕ್ಕೆ ಯಾವುದೇ ಸಿದ್ಧತೆ ಮಾಡಿಕೊಳ್ಳದೆ ಕಡೆಗಣಿಸಿದ್ದು 11 ಮಂದಿ ಸಾವಿನ ದುರಂತಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸರ್ಕಾರವೇ ಹೊಣೆ ಎಂದರು.

ಡಾ.ಜಿ.ಪರಮೇಶ್ವರ್‌ ಅವರಿಗೆ ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಿಸುವ ಸಾಮರ್ಥ್ಯ ಇಲ್ಲ. ಇಂತಹ ಮಂತ್ರಿ ಇರುವುದು ರಾಜ್ಯದ ಜನರ ದೌರ್ಭಾಗ್ಯ. ಡಾ.ಪರಮೇಶ್ವರ್‌ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ ವೈ.ಎಚ್.ಹುಚ್ಚಯ್ಯ, ಮೃತರ ಕುಟುಂಬಕ್ಕೆ ಸರ್ಕಾರ ಘೋಷಿಸಿರುವ 10 ಲಕ್ಷ ರು. ಪರಿಹಾರ ಸಾಕಾಗುವುದಿಲ್ಲ, 25 ಲಕ್ಷ ರು. ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ನಗರ ಅಧ್ಯಕ್ಷ ಧನುಷ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಮುಖಂಡರಾದ ಟಿ.ಎಚ್.ಹನುಮಂತರಾಜು, ಸತ್ಯಮಂಗಲ ಜಗದೀಶ್, ಗೂಳೂರು ಶಿವಕುಮಾರ್, ಬನಶಂಕರಿ ಬಾಬು, ಗಣೇಶ್‌ಪ್ರಸಾದ್, ನಗರಪಾಲಿಕೆ ಮಾಜಿ ಸದಸ್ಯರಾದ ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ವಿಷ್ಣುವರ್ಧನ್, ಪುಟ್ಟರಾಜು, ಮಹೇಶ್, ಮನೋಹರಗೌಡ, ಗ್ರಾಮಾಂತರ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಶಿವಕುಮಾರ್, ಪ್ರತಾಪ್, ಸಿದ್ದೇಗೌಡ, ಹನುಮಂತರಾಯಪ್ಪ, ವೆಂಕಟೇಶಾಚಾರ್, ಗಂಗಾಧರ್, ಸಿದ್ಧಗಂಗಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!