ಕಾಲ್ತುಳಿತ ಎಫೆಕ್ಟ್‌: ಜನಸಂದಣಿ ವಿಧೇಯಕ ಸದನಕ್ಕೆ

KannadaprabhaNewsNetwork |  
Published : Aug 22, 2025, 01:00 AM ISTUpdated : Aug 22, 2025, 10:20 AM IST
Karnataka Crowd Control Bill 2025 Strict Law After RCB Victory Stampede Tragedy

ಸಾರಾಂಶ

‘ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕದಲ್ಲಿ’ ಸ್ಪಷ್ಟತೆ ಕೊರತೆಯಿದೆ ಎಂದು ಪ್ರತಿಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪರಿಣಾಮ ವಿಧೇಯಕವನ್ನು ವಿಧಾನಸಭೆಯ ಸದನ ಸಮಿತಿಗೆ ಒಪ್ಪಿಸಲು ತೀರ್ಮಾನಿಸಲಾಯಿತು.

 ವಿಧಾನಸಭೆ :  ರಾಜ್ಯದಲ್ಲಿ ಜನ ಗುಂಪುಗೂಡುವ ಅಥವಾ ಜನಸಂದಣಿಗೆ ಕಾರಣವಾಗುವ ಯಾವುದೇ ಸಾರ್ವಜನಿಕ ಕಾರ್ಯಕ್ರಮ, ಸಮಾರಂಭಗಳಿಗೆ ಅನುಮತಿ ಪಡೆಯದಿದ್ದರೆ ಏಳು ವರ್ಷದವರೆಗೆ ಜೈಲುಶಿಕ್ಷೆ ಹಾಗೂ ಒಂದು ಕೋಟಿ ರು.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕದಲ್ಲಿ’ ಸ್ಪಷ್ಟತೆ ಕೊರತೆಯಿದೆ ಎಂದು ಪ್ರತಿಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪರಿಣಾಮ ವಿಧೇಯಕವನ್ನು ವಿಧಾನಸಭೆಯ ಸದನ ಸಮಿತಿಗೆ ಒಪ್ಪಿಸಲು ತೀರ್ಮಾನಿಸಲಾಯಿತು.

ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಅವರು 2025 ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿರ್ವಹಣೆ) ವಿಧೇಯಕ ಪರ್ಯಾಲೋಚನೆಗೆ ಮಂಡಿಸಿದ ವೇಳೆ ಪ್ರತಿಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನೀವು ಮಾಡುತ್ತಿರುವ ನಿಯಮಗಳು ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಆಚರಣೆಗೂ ಅಡ್ಡಿ ಹಾಗೂ ದುರ್ಬಳಕೆಯಾಗುವ ಸಾಧ್ಯತೆಯಿದೆ. ಪೊಲೀಸ್‌ ಅಧಿಕಾರಿಗಳ ಕೈಗೆ ಅಧಿಕಾರ ನೀಡುತ್ತಿದ್ದು, ಅನುಮತಿ ಪಡೆಯದೆ ಜನ ಸೇರಿದರೆ ಜೀವಾವಧಿ ಶಿಕ್ಷೆ ಎಂದರೆ ಹೇಗೆ? ಎಂದು ಆತಂಕ ಹಾಗೂ ಆಕ್ಷೇಪ ವ್ಯಕ್ತಪಡಿಸಿದರು.

ಈ ಬಗ್ಗೆ ಪರಮೇಶ್ವರ್‌ ಅವರು ಕೆಲ ನಿಯಮಗಳ ತಿದ್ದುಪಡಿ ಮಾಡುವುದಾಗಿ ವಿವರಣೆ ನೀಡಲು ಮುಂದಾದರೂ ಒಪ್ಪದ ಹಿನ್ನೆಲೆಯಲ್ಲಿ ವಿಧಾನಸಭೆಯ ಜಂಟಿ ಸದನ ಸಮಿತಿಗೆ ವಹಿಸಲು ತೀರ್ಮಾನಿಸಲಾಯಿತು.

ಗುರುವಾರ ವಿಧೇಯಕವನ್ನು ಪರ್ಯಾಲೋಚನೆಗೆ ಕೋರಿ ಮಾಹಿತಿ ನೀಡಿದ ಪರಮೇಶ್ವರ್‌, ‘ಕಾಲ್ತುಳಿತ ಘಟನೆ ಎಚ್ಚರಿಕೆ ಗಂಟೆಯಾಗಿದೆ. ಹೀಗಾಗಿ 7000ಕ್ಕಿಂತ ಕಡಿಮೆ ಜನ ಸೇರುವ ಕಾರ್ಯಕ್ರಮಗಳಿಗೆ ಪೊಲೀಸ್‌ ಠಾಣೆ ಮಟ್ಟದಲ್ಲೇ ಅನುಮತಿ ಪಡೆಯುವುದು. ₹7000-50,000 ವರೆಗೆ ಜನ ಸೇರುವ ಕಾರ್ಯಕ್ರಮಗಳಿಗೆ ಡಿವೈಎಸ್‌ಪಿ/ಎಸಿಪಿ ಹಾಗೂ 50,000ಕ್ಕಿಂತ ಹೆಚ್ಚು ಜನಸಂದಣಿಗೆ ಎಸ್‌ಪಿ/ ನಗರ ಆಯುಕ್ತರಿಂದ ಅನುಮತಿ ಪಡೆಯುವುದು ಕಡ್ಡಾಯ. 10 ದಿನ ಮುಂಚಿತವಾಗಿ ಅನುಮತಿಗೆ ಸಲ್ಲಿಸುವ ಅರ್ಜಿಯಲ್ಲಿಸಂಪೂರ್ಣ ವಿವರವಿರಬೇಕೆಂಬ ಅಂಶವಿದೆ ಎಂದು ಹೇಳಿದರು.

ಅನುಮತಿ ಪಡೆಯದೆ ಕಾರ್ಯಕ್ರಮ ಆಯೋಜಿಸಿದರೆ 7 ವರ್ಷದವರೆಗೆ ಜೈಲು, ₹1 ಕೋಟಿ ದಂಡ ಹಾಗೂ ಎರಡನ್ನೂ ವಿಧಿಸಬಹುದು. ಜನಸಂದಣಿಗೆ ಅಪಾಯಕ್ಕೆ ಕಾರಣರಾದವರಿಗೆ 7 ವರ್ಷದವರೆಗೆ ಜೈಲು ಹಾಗೂ ಪ್ರಾಣ ಹಾನಿ ಪ್ರಕರಣದಲ್ಲಿ 10 ವರ್ಷದಿಂದ ಜೀವಾವಧಿ ಶಿಕ್ಷೆಗೆ ಗುರಿಪಡಿಸುವುದು. ಸಾರ್ವಜನಿಕ- ಖಾಸಗಿ ಸ್ವತ್ತಿಗೆ ಹಾನಿ, ನಷ್ಟ ಸಂಭವಿಸಿದರೆ ಆಯೋಜಕರೇ ನಷ್ಟ ಸರಿದೂಗಿಸಬೇಕು ಎಂಬ ಅಂಶವಿದೆ ಎಂದರು.

ಇನ್ನು ಖಾಸಗಿ ಆವರಣದೊಳಗೆ ಆಚರಿಸುವ, ನಡೆಯುವ ಕೌಟುಂಬಿಕ ಸಮಾರಂಭ, ಕಾರ್ಯಕ್ರಮ, ಮದುವೆ ಇತರೆ ಚಟುವಟಿಕೆಗೆ ವಿನಾಯಿತಿ ಇದೆ. ಖಾಸಗಿ ಆವರಣ ಎಂದರೆ ಭೋಗ್ಯ, ಬಾಡಿಗೆಗೆ, ಗುತ್ತಿಗೆ ಪಡೆದ ಆವರಣವೆಂದು ಪರಿಗಣಿಸಲಾಗುತ್ತದೆ ಎಂದು ಗೃಹ ಸಚಿವರು ವಿವರಿಸಿದರು.

ಆತಂಕಕಾರಿ ಕಾನೂನು:

ಇದಕ್ಕೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ‘ರಾಜಕೀಯ ಸಮಾವೇಶಗಳಲ್ಲಿ ಅನಾಹುತ ಸಂಭವಿಸಿದರೆ ಆಯೋಜಕರು ಜೈಲು ಸೇರಬೇಕಾಗುವುದು ಆತಂಕಕಾರಿ. ಇದು ಪೊಲೀಸರಿಗೆ ಹೊಸ ಅಸ್ತ್ರವಾಗಬಾರದು. ವಾಣಿಜ್ಯ ಹಾಗೂ ವಾಣಿಜ್ಯೇತರ ಕಾರ್ಯಕ್ರಮವೆಂದು ವರ್ಗೀಕರಿಸುವುದು ಸೂಕ್ತ. ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳಿಗೆ ಮಾತ್ರ ಈ ನಿಯಮ ಅನ್ವಯ ಮಾಡಿ. ಇಲ್ಲದಿದ್ದರೆ ರೈತರು, ಪ್ರತಿಭಟನಾಕಾರರ ಹೋರಾಟ ಹತ್ತಿಕ್ಕಲು ಸರ್ಕಾರ ಇದನ್ನು ಬಳಸಿಕೊಂಡಂತಾಲಿದೆ’ ಎಂದು ಹೇಳಿದರು.

ಬಸನಗೌಡ ಪಾಟೀಲ್‌ ಯತ್ನಾಳ್‌, ವಿಧೇಯಕದ ಮೂಲಕ ಪೊಲೀಸರಿಗೆ ಹೆಚ್ಚಿನ ಅಧಿಕಾರ ಸಿಗಲಿದ್ದು, ಜನರಪರ ಹೋರಾಟವನ್ನು ಸರ್ಕಾರ ಹತ್ತಿಕ್ಕುವಂತಾಗಲಿದೆ. ವಿನಾಕಾರಣ ಅನುಮತಿ ಪಡೆದಿಲ್ಲ ಎಂದು ಪೊಲೀಸ್‌ ಕೇಸು ಹಾಕಿದರೆ ಜೀವಾವಧಿ ಶಿಕ್ಷೆ ಎಂದರೆ ಹೇಗೆ? ಈ ವಿಧೇಯಕಕ್ಕೆ ಸಹಮತವಿಲ್ಲ. ಇದನ್ನು ಸದನ ಸಮಿತಿಗೆ ಒಪ್ಪಿಸಿ ಎಂದು ಆಗ್ರಹಿಸಿದರು.

ಬಿಜೆಪಿಯ ವಿ.ಸುನೀಲ್‌ ಕುಮಾರ್‌, ಹೋರಾಟದ ಸಂದರ್ಭದಲ್ಲಿ 10 ದಿನ ಮೊದಲು ಪೂರ್ವಾನುಮತಿ ಪಡೆಯಲು ಹೇಗೆ ಸಾಧ್ಯ? ಜಾತ್ರೆ, ಹಬ್ಬ, ಧಾರ್ಮಿಕ ಆಚರಣೆಗೆ 1 ಕೋಟಿ ರು. ಮೊತ್ತದ ಬಾಂಡ್‌ ನೀಡುವಷ್ಟು ದೇವಸ್ಥಾನಗಳು ಸಶಕ್ತವಾಗಿರುತ್ತವೆಯೇ? ಎಂದು ಪ್ರಶ್ನಿಸಿದರು.

ಬಿಜೆಪಿಯ ಎಸ್.ಸುರೇಶ್ ಕುಮಾರ್, ಉಮಾನಾಥ ಕೋಟ್ಯಾನ್‌, ಹರೀಶ್‌ ಪೂಂಜಾ, ಎಸ್‌.ಎಸ್‌.ಚನ್ನಬಸಪ್ಪ, ಜೆಡಿಎಸ್‌ನ ಶರಣುಗೌಡ ಕಂದಕೂರ ಇತರರು ಜನಪರ, ಸಾಮಾಜಿಕ ಕಳಕಳಿಯ ಹೋರಾಟ ಹತ್ತಿಕ್ಕಿದಂತಾಗಲಿದೆ ಎಂದು ದನಿಗೂಡಿಸಿದರು.

ಜಾತ್ರೆ-ಹಬ್ಬಕ್ಕೆ ವಿನಾಯಿತಿ:

ಬಳಿಕ ಮಾತನಾಡಿದ ಪರಮೇಶ್ವರ್‌, ಕಾರ್ಯಕ್ರಮ ಆಯೋಜನೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು 10 ದಿನಕ್ಕೆ ಬದಲಾಗಿ 5 ದಿನಕ್ಕೆ ಇಳಿಸಲಾಗುವುದು. ಜಾತ್ರೆ, ಹಬ್ಬ ಆಚರಣೆ, ಸರ್ಕಾರಿ ಕಾರ್ಯಕ್ರಮಕ್ಕೆ ಅನ್ವಯವಾಗುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ನಷ್ಟ ಭರ್ತಿ ಬಾಂಡ್‌ ಅನ್ನು ₹1 ಕೋಟಿಯಿಂದ ₹50 ಲಕ್ಷದವರೆಗೆ ಇಳಿಸಲಾಗುವುದು. ರಾಜಕೀಯ ಕಾರ್ಯಕ್ರಮಗಳಿಗೆ ಅನ್ವಯ ಎಂದರೆ ನಮ್ಮ ಪಕ್ಷಕ್ಕೂ ಅನ್ವಯವಾಗಲಿದೆ ಎಂದು ವಿವರಣೆ ನೀಡಲು ಮುಂದಾದರು.

ಆದರೂ, ವಿಧೇಯಕದಲ್ಲಿ ಗೊಂದಲಗಳಿವೆ ಎಂದು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಮೇಶ್ವರ್‌ ಅವರೇ ಸದನ ಸಮಿತಿಗೆ ಒಪ್ಪಿಸಲು ಒಪ್ಪಿಗೆ ಸೂಚಿಸಿದರು. ಬಳಿಕ ಯು.ಟಿ. ಖಾದರ್‌ ಇದನ್ನು ಪ್ರಕಟಿಸಿದರು.

ಹಿಂದೂ ಆಚರಣೆಗಳ ವಿರುದ್ಧ ಕಾನೂನು: ಯತ್ನಾಳ್

ನಿಮ್ಮ ಕಾನೂನು ಒಂದು ಧರ್ಮದ ಆಚರಣೆಗಳ ವಿರುದ್ಧ ಇದೆ. ಗಣೇಶೋತ್ಸವ ಡಿಜೆಗೆ ವಿರುದ್ಧವಾಗಿ ಕಾನೂನು ಮಾಡ್ತೀರಿ. ಹಿಂದೂ ಧರ್ಮದ ಆಚರಣೆಗಳ ವಿರುದ್ಧ ಶೋಷಣೆ ಮಾಡುತ್ತೀರಿ. ಒಂದು ಕೋಮಿನವರು ಐದು ಬಾರಿ ಕೂಗುತ್ತಾರೆ. ಅದರ ಬಗ್ಗೆ ಕ್ರಮವೇನು? ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಶ್ನಿಸಿದರು.

PREV
Read more Articles on

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ