ಮಕ್ಕಳಿಗಾಗಿ ರಂಗಶಾಲೆ ಆರಂಭಿಸಿ: ಬಾದಲ್‌ ನಂಜುಂಡಸ್ವಾಮಿ

KannadaprabhaNewsNetwork | Published : Nov 11, 2024 11:52 PM

ಸಾರಾಂಶ

ನನ್ನ ಮತ್ತು ರಂಗಾಯಣದ ಸಂಬಂಧ ಭಾವನಾತ್ಮಕವಾದದ್ದು. ನಮ್ಮ ಮನೆಯಿಂದ ರಂಗಾಯಣ ಕಟ್ಟಡ ನೋಡಿದರೆ ಕೌತುಕ, ಅಚ್ಚರಿಯಾಗುತ್ತದೆ. ಆದ್ದರಿಂದ ನನಗೂ ರಂಗಾಯಣಕ್ಕೂ ಅವಿನಾಭಾವ ಸಂಬಂಧವಿದೆ. ನಾನು ಅನೇಕ ನಿರ್ದೇಶಕರ ಜತೆ ಕೆಲಸ ಮಾಡುವ ಅವಕಾಶವನ್ನು ರಂಗಾಯಣ ನನಗೆ ನೀಡಿದೆ. ಇಲ್ಲಿನ ಒಬ್ಬೊಬ್ಬ ಕಲಾವಿದರೂ ಒಂದೊಂದು ವಿಶ್ವಕೋಶದಂತೆ ಕಾಣುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಸರ್ಕಾರವು ಮಕ್ಕಳಿಗಾಗಿ ರಂಗಶಾಲೆ ತೆರೆದು ರಂಗಾಯಣದ ನಿವೃತ್ತ ಕಲಾವಿದರನ್ನು ತರಬೇತಿಗಾಗಿ ಬಳಸಿಕೊಳ್ಳಬೇಕು ಎಂದು ಚಿತ್ರ ಕಲಾವಿದ ಬಾದಲ್‌ ನಂಜುಂಡಸ್ವಾಮಿ ಕಿವಿಮಾತು ಹೇಳಿದರು.

ರಂಗಾಯಣದ ಭೂಮಿಗೀತದಲ್ಲಿ ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು ರಂಗೋತ್ಸವ- 2024 ಕಾರ್ಯಕ್ರಮವನ್ನು ಆಲದ ಮರದ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನನ್ನ ಮತ್ತು ರಂಗಾಯಣದ ಸಂಬಂಧ ಭಾವನಾತ್ಮಕವಾದದ್ದು. ನಮ್ಮ ಮನೆಯಿಂದ ರಂಗಾಯಣ ಕಟ್ಟಡ ನೋಡಿದರೆ ಕೌತುಕ, ಅಚ್ಚರಿಯಾಗುತ್ತದೆ. ಆದ್ದರಿಂದ ನನಗೂ ರಂಗಾಯಣಕ್ಕೂ ಅವಿನಾಭಾವ ಸಂಬಂಧವಿದೆ. ನಾನು ಅನೇಕ ನಿರ್ದೇಶಕರ ಜತೆ ಕೆಲಸ ಮಾಡುವ ಅವಕಾಶವನ್ನು ರಂಗಾಯಣ ನನಗೆ ನೀಡಿದೆ. ಇಲ್ಲಿನ ಒಬ್ಬೊಬ್ಬ ಕಲಾವಿದರೂ ಒಂದೊಂದು ವಿಶ್ವಕೋಶದಂತೆ ಕಾಣುತ್ತಾರೆ ಎಂದರು.

ಆದರೆ ಸರ್ಕಾರ ಮಾತ್ರ ಕಲಾವಿದರನ್ನು ಬಸ್‌ ಸೀಟಿಗಾಗಿ ಟವಲ್‌ ಹಾಕುವವರಂತೆ ನಡೆಸಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ರಂಗಾಯಣದಲ್ಲಿ ಕಾರಂತರ ಹೆಸರಿನಲ್ಲಿ ಸಾರ್ಥಕ ಕೆಲಸ ನಡೆಯುತ್ತಿದೆ. ಕಾರಂತರ ಹೆಸರಿನಿಂದಲೇ ಮೈಸೂರು ರಂಗಭೂಮಿ ಸಂಪನ್ನವಾಗಿದೆ. ಸಾವಿರಾರು ಯುವ ವಿದ್ಯಾರ್ಥಿಗಳು ಕಲಾವಿದರಾಗಿ ರೂಪುಗೊಂಡಿದ್ದಾರೆ ಎಂದರು.

ರಂಗಭೂಮಿ ಕಲಾವಿದೆ ಸುಷ್ಮಾ ನಾಣಯ್ಯ ಮಾತನಾಡಿ, ನನ್ನ ಅಭಿವಯ ಆರಂಭವಾಗಿದ್ದು, ಕಾಲೇಜು ರಂಗೋತ್ಸವದಿಂದ. ಅಲ್ಲಿಯವರೆಗೆ ನಾಟಕದ ಬಗ್ಗೆ ಏನೂ ಗೊತ್ತಿರಲಿಲ್ಲ. ‘ಬದುಕಲು ಕಲಿಯಿರಿ’ ನಾನು ಮಾಡಿದ ಮೊದಲ ನಾಟಕ. ಬಳಿಕ ರಂಗವಲ್ಲಿ, ಜಿಪಿಐಆರ್ ತಂಡದೊಂದಿಗೂ ಕೆಲಸ ಮಾಡಿದೆ. ರಂಗಾಯಣ ನನ್ನ ತವರುಮನೆ. ಹವ್ಯಾಸಿ ಕಲಾವಿದರಾಗಲು ಯಾವುದೇ ಕೀಳರಿಮೆ ಬೇಡ. ವೃತ್ತಿಪರರಾಗಿಯೂ ಬೆಳೆಯಲು ಅವಕಾಶವಿದೆ. ಓದಿನ ಜೊತೆಗೆ ರಂಗಭೂಮಿಯಲ್ಲಿ ಮುಂದುವರಿಯಿರಿ ಎಂದು ಸಲಹೆ ನೀಡಿದರು.

ರಂಗಸಮಾಜದ ಸದಸ್ಯ ಡಾ. ರಾಜಪ್ಪ ದಳವಾಯಿ, ರಂಗಕರ್ಮಿ ಎಚ್.ಎಸ್. ಸುರೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕಾಲೇಜು ರಂಗೋತ್ಸವ ಸಂಚಾಲಕ ಕೆ.ಆರ್. ನಂದಿನಿ, ರಂಗಾಯಣ ಉಪ ನಿರ್ದೇಶಕ ಎಂ.ಡಿ. ಸುದರ್ಶನ್ ಇದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ನಗರದ ಎಸ್‌.ಬಿ.ಆರ್‌.ಆರ್‌. ಮಹಾಜನ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ವಸಂತಯಾಮಿನೀ ಸ್ವಪ್ನ ಚಮತ್ಕಾರ ನಾಟಕವನ್ನು ಪ್ರಸ್ತುತಪಡಿಸಿದರು. ಶೇಕ್ಸ್‌ ಪೀಯರ್‌ನ ಎ ಮಿಡ್‌ಸಮ್ಮರ್‌ನೈಟ್ಸ್‌ಡ್ರೀಮ್‌ ಆಧಾರಿತ ಈ ನಾಟಕವನ್ನು ಕೆರೂರು ವಾಸುದೇವಾಚಾರ್ಯ ಅವರು ರಚಿಸಿದ್ದು, ವಿ. ರಂಗನಾಥ್‌ ನಿರ್ದೇಶಿಸಿದ್ದರು.

Share this article