₹1.40 ಕೋಟಿ ವೆಚ್ಚದ ಜೆಜೆಎಂ ಕಾಮಗಾರಿಗೆ ಚಾಲನೆ

KannadaprabhaNewsNetwork | Published : Jun 24, 2024 1:35 AM

ಸಾರಾಂಶ

ಅನೇಕ ಗ್ರಾಮಸ್ಥರಲ್ಲಿ ನೀರು ಪೂರೈಕೆಗೆ ಮೀಟರ್ ಅಳವಡಿಸಿ ಬಿಲ್ ನೀಡಲಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಮೀಟರ್ ಅಳವಡಿಸುತ್ತಿರುವುದು ಎಷ್ಟು ನೀರನ್ನು ಬಳಸುತ್ತಾರೆ ಎಂಬುದನ್ನು ತಿಳಿಯಲು ಮಾತ್ರ, ಆದ್ದರಿಂದ ಯಾರೂ ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಯರಲಕ್ಕೇನಹಳ್ಳಿ, ದೊಡ್ಡನಂಚರ್ಲು ಹಾಗೂ ಜಯಂತಿ ಗ್ರಾಮದಲ್ಲಿ ಸುಮಾರು 1.40 ಕೋಟಿ ವೆಚ್ಚ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ಪ್ರತಿ ಮನೆ ಮನೆಗೂ ಶುದ್ದ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜೆ.ಜೆ.ಎಂ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆಯ ಮೂಲಕ ನನ್ನ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಗ್ರಾಮದ ಪ್ರತಿಯೊಂದು ಮನೆಗೂ ಕೊಳಾಯಿ ಮೂಲಕ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ ಎಂದರು.

ಮೀಟರ್‌ ಅಳವಡಿಕೆ:

ಈಗಾಗಲೇ ತಾಲೂಕಿನ ಅನೇಕ ಗ್ರಾಮಗಳಲ್ಲಿ ಈ ಯೋಜನೆಯಡಿ ನೀರು ಪೊರೈಕೆ ಮಾಡಲಾಗುತ್ತಿದೆ. ಜನರು ನೀರನ್ನು ವ್ಯರ್ಥ ಮಾಡದೇ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅನೇಕ ಗ್ರಾಮಸ್ಥರಲ್ಲಿ ನೀರು ಪೂರೈಕೆಗೆ ಮೀಟರ್ ಅಳವಡಿಸಿ ಬಿಲ್ ನೀಡಲಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಮೀಟರ್ ಅಳವಡಿಸುತ್ತಿರುವುದು ಎಷ್ಟು ನೀರನ್ನು ಬಳಸುತ್ತಾರೆ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ. ಆದ್ದರಿಂದ ಯಾರೂ ಈ ಮೀಟರ್ ಅಳವಡಿಕೆಯ ಬಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದರು.

ಇನ್ನೂ ಈ ಕಾಮಗಾರಿಯನ್ನು ಕೈಗೊಳ್ಳುವ ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸಬೇಕು. ಕೆಲವೊಂದು ಕಡೆ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ದೂರುಗಳು ಬಂದಿವೆ. ಒಂದು ವೇಳೆ ಕಾಮಗಾರಿ ಕಳಪೆ ಮಾಡಿದಲ್ಲಿ ಕೂಡಲೇ ಕಾಮಗಾರಿ ನಿಲ್ಲಿಸಿ ನನ್ನ ಗಮನಕ್ಕೆ ತನ್ನಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡುತ್ತೇನೆ ಎಂದರು.

ಕಾಮಗಾರಿಗೆ ಚಾಲನೆ:

ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಯರಲಕ್ಕೇನಹಳ್ಳಿ ಗ್ರಾಮದಲ್ಲಿ 75 ಲಕ್ಷ, ದೊಡ್ಡನಂಚರ್ಲು ಗ್ರಾಮದಲ್ಲಿ 30 ಲಕ್ಷ ಹಾಗೂ ಜಯಂತಿ ಗ್ರಾಮದಲ್ಲಿ 35 ಲಕ್ಷ ವೆಚ್ಚದ ಜೆಜೆಎಂ ಯೋಜನೆಯಡಿ ಮನೆ ಮನೆಗೆ ಕೊಳಾಯಿ ಮೂಲಕ ನೀರು ಪೂರೈಕೆ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ವೇಳೆ ತಿರುಮಣಿ ಗ್ರಾ.ಪಂ ವ್ಯಾಪ್ತಿಯ ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವರು ಇದ್ದರು.

Share this article