ಗ್ರಾಮೀಣ ಕ್ರೀಡೆ ನಶಿಸದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ: ಎಸ್.ಎಂ.ಚಂಗಪ್ಪ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆಒಕ್ಕಲಿಗರ ಯುವ ವೇದಿಕೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಹೊನಲುಬೆಳಕಿನ ೫ನೇ ವರ್ಷದ ‘ಒಕ್ಕಲಿಗರ ಕಪ್’ ಮ್ಯಾಟ್ ಕಬಡ್ಡಿ ಪಂದ್ಯಾಟಕ್ಕೆ ಜಿಲ್ಲಾ ಒಕ್ಕಲಿಗರ ಸಂಘ ಅಧ್ಯಕ್ಷ ಎಸ್.ಎಂ.ಚಂಗಪ್ಪ ಶುಕ್ರವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಕೋವಿಡ್ ಸಂದರ್ಭ ಹೊರತುಪಡಿಸಿ, ಸತತ ೪ ವರ್ಷಗಳಿಂದಲೂ ವ್ಯವಸ್ಥಿತವಾಗಿ ಕಬಡ್ಡಿ ಪಂದ್ಯಾಟಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಗ್ರಾಮೀಣ ಕ್ರೀಡೆಗಳು ನಶಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೂ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.ಸೋಮವಾರಪೇಟೆಯಲ್ಲಿ ಒಳಾಂಗಣ ಕ್ರೀಡಾಂಗಣ ಅವಶ್ಯಕತೆಯಿದೆ. ಸೌಲಭ್ಯಗಳ ಕೊರತೆಯಿಂದ ಗ್ರಾಮೀಣ ಪ್ರತಿಭೆಗಳಿಗೆ ಹಿನ್ನೆಡೆಯಾಗುತ್ತಿದೆ. ಒಕ್ಕಲಿಗರ ಯುವವೇದಿಕೆ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಶ್ರಮಪಡಬೇಕು. ಖಂಡಿತವಾಗಿಯೂ ಜನಪ್ರತಿನಿಧಿಗಳು ಮತ್ತು ಸರ್ಕಾರ ನಿಮಗೆ ಸಹಕಾರ ನೀಡಲಿದೆ ಎಂದು ಹೇಳಿದರು.ತಾಲೂಕು ಒಕ್ಕಲಿಗರ ಸಂಘ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಯುವವೇದಿಕೆಯೊಂದಿಗೆ ಕೈಜೋಡಿಸಲಾಗುವುದು ಎಂದು ಭರವಸೆ ನೀಡಿದರು.ವೇದಿಕೆಯಲ್ಲಿ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್, ಗೌರವಾಧ್ಯಕ್ಷ ಬಿ.ಜೆ.ದೀಪಕ್, ಚೌಡ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನತೀಶ್ ಮಂದಣ್ಣ, ಪಿಡಿಒ ರವಿ ನಾಯರ್, ಜಿಪಂ ಮಾಜಿ ಸದಸ್ಯೆ ಪೂರ್ಣಿಮಾ ಗೋಪಾಲ್, ತಾಪಂ ಮಾಜಿ ಸದಸ್ಯರಾದ ತಂಗಮ್ಮ ಪ್ರಮುಖರಾದ ಪಿ.ಕೆ.ರವಿ, ಮಂಜೂರು ತಮ್ಮಣ್ಣಿ, ರಮೇಶ್, ಗೌಡಳ್ಳಿ ಪೃಥ್ವಿ ಮತ್ತಿತರರು ಇದ್ದರು.ಜೆಬಿಎಸ್ಸಿ ಮಡಿಲಿಗೆ ಪ್ರಶಸ್ತಿ:
ಮಧ್ಯಾಹ್ನ ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರ ಜೆಬಿಎಸ್‌ಸಿ ತಂಡ ಪ್ರಥಮ ಸ್ಥಾನ ಪಡೆದಿದೆ. ಸಿದ್ದಾಪುರ ಚೆಟ್ಟಳ್ಳಿಯ ಜೆಡ್‌ಎಕ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಸೋಮವಾರಪೇಟೆ ರಾಮಧೂತ ಸ್ಪೋರ್ಟ್ಸ್ ಕ್ಲಬ್ ತೃತೀಯ, ಪ್ರತಾಪ್ ಫ್ರೆಂಡ್ಸ್ ಯಡೂರು ಚತುರ್ಥ ಬಹುಮಾನ ಪಡೆಯಿತು.