5 ವರ್ಷದಲ್ಲಿ ಸ್ಟಾರ್ಟ್‌ಅಪ್‌ಗಳ ಯಶೋಗಾಥೆ ಗುರಿ: ಕ್ಯಾ. ಚೌಟ

KannadaprabhaNewsNetwork |  
Published : Mar 03, 2026, 02:45 AM IST
ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡುತ್ತಿರುವುದು  | Kannada Prabha

ಸಾರಾಂಶ

ಮುಂದಿನ ಐದು ವರ್ಷಗಳಲ್ಲಿ ದ.ಕ. ಜಿಲ್ಲೆ ಕನಿಷ್ಠ 50 ಮಂದಿ ಸ್ಟಾರ್ಟ್‌ಅಪ್‌ಗಳ ಯಶೋಗಾಥೆ ಕಾಣುವ ಉದ್ದೇಶವನ್ನು ಹೊಂದಲಾಗಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಮಂಗಳೂರು: ಮುಂದಿನ ಐದು ವರ್ಷಗಳಲ್ಲಿ ದ.ಕ. ಜಿಲ್ಲೆ ಕನಿಷ್ಠ 50 ಮಂದಿ ಸ್ಟಾರ್ಟ್‌ಅಪ್‌ಗಳ ಯಶೋಗಾಥೆ ಕಾಣುವ ಉದ್ದೇಶವನ್ನು ಹೊಂದಲಾಗಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದ್ದಾರೆ. ಪ್ರಭಾವಶಾಲಿ ಉದ್ಯಮಗಳ ನಿರ್ಮಾಣದ ವೇದಿಕೆ ‘ಬೊಲ್ಪು’ ಸಂಘಟನೆಯ ಆಶ್ರಯದಲ್ಲಿ ಶನಿವಾರ ಮಂಗಳೂರಿನ ಯೆಯ್ಯಾಡಿಯಲ್ಲಿ ಏರ್ಪಡಿಸಿದ 11 ಮಂದಿ ಸ್ಟಾರ್ಟ್‌ಅಪ್‌ ಭಾವಿ ಉದ್ದಿಮೆದಾರರ(ನವೋದ್ಯಮಿ) ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉದ್ಯಮ ಉತ್ಸಾಹಿಗಳನ್ನು ಸೂಕ್ತ ತರಬೇತುಗೊಳಿಸಿ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ನೋಡಿಕೊಳ್ಳಲಾಗುವುದು. ಕೇಂದ್ರ ಸರ್ಕಾರ ಸ್ಟಾರ್ಟ್‌ಅಪ್‌ ಇಂಡಿಯಾ ಆರಂಭಿಸಿ 11 ವರ್ಷ ಆಗಿದ್ದು, ಕರಾವಳಿಯಲ್ಲಿ ಉದ್ದಿಮೆ ಸ್ಥಾಪಿಸಲು 850 ಅರ್ಜಿಗಳ ಪೈಕಿ 11 ಮಂದಿ ಸ್ಟಾರ್ಟ್‌ಅಪ್‌ಗಳನ್ನು ಆಯ್ಕೆ ಮಾಡಿರುವುದು ಸಂತಸದ ವಿಚಾರ. ಉದ್ದಿಮೆದಾರರನ್ನು ಪ್ರೋತ್ಸಾಹಿಸಿ ಸೂಕ್ತ ಅವಕಾಶ ಕಲ್ಪಿಸಲು ಬೊಲ್ಪು ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ. ಕರಾವಳಿ ಎಂಬುದು ಅವಕಾಶಗಳ ಸಾಗರವಾಗಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದರು.ಈಗಾಗಲೇ ಆಯ್ಕೆಯಾದ 11 ಮಂದಿ ವಿವಿಧ ಉದ್ದಿಮೆ ಸ್ಥಾಪಿಸುತ್ತಿದ್ದು, ಭವಿಷ್ಯದ ಜನಾಂಗಕ್ಕೆ ಕರಾವಳಿಯಲ್ಲಿ ಉದ್ಯಮ ಸ್ಥಾಪನೆ ಅತ್ಯಗತ್ಯ. ಅದಕ್ಕಾಗಿ ವಿವಿಧ ಹಂತಗಳಲ್ಲಿ ಸಲಹೆಗಾರರು, ತರಬೇತಿ, ಹಣಕಾಸು ಸೌಲಭ್ಯ, ಮಾರುಕಟ್ಟೆ ವಿಸ್ತರಣೆ ಮುಂತಾದ ನೆರವು ನೀಡಲಾಗುವುದು ಎಂದರು.

2 ಮತ್ತು 3ನೇ ಹಂತದ ನಗರಗಳಲ್ಲಿ ಉದ್ದಿಮೆ ಸ್ಥಾಪಿಸಲು ಶೇ. 60ರಷ್ಟು ಸ್ಟಾರ್ಟ್‌ಅಪ್‌ಗಳು, ಅಲ್ಲದೆ ಶೇ.50ರಷ್ಟು ಮಹಿಳೆಯರು ಕೂಡ ಮುಂದೆ ಬರಬೇಕು. ಉದ್ದಿಮೆ ಸ್ಥಾಪಿಸಿದ ಬಳಿಕ ಅದನ್ನು ಅರ್ಧದಲ್ಲೇ ಕೈಬಿಡಬಾರದು. ಉದ್ದಮದ ಸಾಧನೆ ಹಾಗೂ ಅವನತಿ ಎರಡೂ ನಮ್ಮ ಕೈಯಲ್ಲೇ ಇದೆ, ಮಂಗಳೂರು ಎಲ್ಲ ಸಾಧ್ಯತೆಗಳ ದಿಕ್ಕಿನಲ್ಲಿ ಯೋಚಿಸುತ್ತಿದೆ ಎಂಬುದನ್ನು ಮರೆಯಬಾರದು ಎಂದರು.

11 ಮಂದಿ ಸ್ಟಾರ್ಟ್‌ಅಪ್‌ಗಳು ತಮ್ಮ ಉದ್ದಿಮೆಯ ಕುರಿತಂತೆ ಅನಿಸಿಕೆ ವ್ಯಕ್ತಪಡಿಸಿದರು.

ಬೊಲ್ಪುವಿನ 11 ನವೋದ್ಯಮ ಯೋಜನೆಗಳುಈ ಕಾರ್ಯಕ್ರಮದಡಿ ಆಯ್ಕೆಯಾದ 11 ನವೋದ್ಯಮ ಆಲೋಚನೆಗಳು ಅತ್ಯಂತ ವೈವಿಧ್ಯಮಯವಾಗಿದ್ದು, ಮಂಗಳೂರಿನ ಭವಿಷ್ಯದ ಉದ್ಯಮ ರಂಗಕ್ಕೆ ಹೊಸ ಭರವಸೆ ನೀಡಿವೆ.

ನೀಲ್ ಕೆವಿನ್ ಮಾರ್ಟಿಸ್ ಅವರ ಝಪ್ಪಲ್ ಲ್ಯಾಬ್ಸ್ ಮೂಲಕ ಬ್ಲಾಕ್‌ಚೈನ್ ತಂತ್ರಜ್ಞಾನದ ಐಡಿಯಾ ಹಾಗೂ ಅಭಿನಂದನ ಅವರ ಸತ್ವ ಬೆವರೇಜಸ್ ಮೂಲಕ ಡೈರಿ ಪಾನೀಯಗಳ ಕಲ್ಪನೆ ಆಯ್ಕೆಯಾಗಿದೆ. ಸಂಸ್ಕೃತಿ ಸಂರಕ್ಷಣೆಯ ಹಾದಿಯಲ್ಲಿ ಸಿಂಧೂರ ಟಿ.ಪಿ. ಅವರ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಪರಿಕಲ್ಪನೆ ಗಮನ ಸೆಳೆದಿದ್ದರೆ, ಪ್ರೀತಿ ಮತ್ತು ಗಣೇಶ್ ನಾಯಕ್ ಅವರು ಪ್ರಸ್ತುತಪಡಿಸಿದ ಜೂಸ್ ಬಾಟಲ್ ಐಡಿಯಾವು ಶೇ.85 ಮಹಿಳಾ ಉದ್ಯೋಗಿಗಳ ಸಬಲೀಕರಣದ ಉದ್ದೇಶ ಹೊಂದಿದೆ.ತಂತ್ರಜ್ಞಾನ ಮತ್ತು ಪರಿಸರ ವಿಭಾಗದಲ್ಲಿ ಡಾ. ಚಂದ್ರಿಕಾ ತಂತ್ರಿ ಅವರ ಎಕೋಪೋಲಿ ಬಯೋಟೆಕ್, ಡಾ. ನಿಖಿಲ್ ಎಸ್. ಶೆಟ್ಟಿ ಅವರ ಬಯೋಮೆಡ್ ಇಂಪ್ಲಾಂಟ್ಸ್, ಮತ್ತು ಸಾಕ್ಷತ್ ರೈ ಕೆ. ಹಾಗೂ ದುರ್ಗಾದಾಸ್ ಶೆಟ್ಟಿ ಅವರ ಅನಾಹತಂ. ಐ ಕೃತಕ ಬುದ್ಧಿಮತ್ತೆ ಆಧಾರಿತ ಆರೋಗ್ಯ ಸೇವೆಯ ಆಲೋಚನೆಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿವೆ. ಹಾಗೆಯೇ, ಯುವ ಎಂಜಿನಿಯರ್ ಶೇಷಪ್ರಸಾದ್ ಭಟ್ ಅವರ ವ್ಯಾನಿಕಾ ಇನ್ನೋವೇಶನ್ಸ್, ವಸಂತ್ ಮಾಧವ್ ಕಾಮತ್ ಅವರ ಹೈಡ್ರೋಗ್ರೀನ್ಸ್, ಮಿಥುಲ್ ದಾಸ್ ಅವರ ದಾಸಪೈಲಟ್ (PLUGFLY) ಡ್ರೋನ್ ತಂತ್ರಜ್ಞಾನದ ಕಲ್ಪನೆ ಮತ್ತು ಗೌರವ್ ಗಣೇಶ್ ಶೆಟ್ಟಿ ಅವರ ಕೆನರಾ ಫಾರ್ಮ್ಸ್ ರಾಸಾಯನಿಕ ಮುಕ್ತ ಡೈರಿ ಉತ್ಪನ್ನಗಳ ಐಡಿಯಾಗಳು ಮಂಗಳೂರಿನ ಮುಂದಿನ ಯಶೋಗಾಥೆಯ ಭಾಗವಾಗಲು ಸಜ್ಜಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಲಕ್ಕೆ ಬೇಕಾಗುವ ಚಿಂತನೆ ಮಾಡೋದು ಸಾಹಿತ್ಯದ ಕೆಲಸ; ವೈ.ಎಂ.ಯಾಕೊಳ್ಳಿ
ನಿಡಗುಂದಿಯಲ್ಲಿ ಬೃಹತ್‌ ಶೋಭಾಯಾತ್ರೆ, ಕೇಸರಿಮಯ