ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಹಾಶಕ್ತಿ ಮಂಚದ ಕಾಳಿಕಾಂಬ, ವಿಜಯನಗರೇಶ್ವರಿ, ಹಿರಿಯ ಮಂಚದ ಕಾಳಿಕಾಂಬ, ಮನೆಯಮ್ಮ(ಲಕ್ಷ್ಮಿದೇವಿ), ಬೆಟ್ಟದ ಅರಸಮ್ಮ, ಕನ್ನಕಡ್ಡಯ್ಯ, ಮುಖದ ದೇವರು, ಮೂಗದೇವಮ್ಮ, ಪಟ್ಟಲದಮ್ಮ ಎಂಬ ದೇವರನ್ನು ಗ್ರಾಮಸ್ಥರು ಪೂಜಿಸಿಕೊಂಡು ಬಂದಿದ್ದಾರೆ.
ಸಪ್ತ ಮಾತೃಕೆಯರು ಶಕ್ತಿದೇವತೆಗಳ ಎಂಬ ನಂಬಿಕೆಯಿಂದ ಅನಾಧಿ ಕಾಲದಿಂದಲೂ ದೊಡ್ಡಹಬ್ಬವನ್ನು ಕಲ್ಕುಣಿ, ದೊಡ್ಡಗೌಡನ ಕೊಪ್ಪಲು, ಚಿಕ್ಕಮಾಳಿಗೆಕೊಪ್ಪಲು, ಪುಟ್ಟೇಗೌಡನಕೊಪ್ಪಲು, ಚಿಕ್ಕಕಲ್ಕುಣ ಸೇರಿದಂತೆ ಹಲವು ಗ್ರಾಮಗಳ ಜನರು ಆಚರಣೆ ಮಾಡಿಕೊಂಡು ಬಂದಿದ್ದು, ಪ್ರತಿ ಐದು ವರ್ಷಗಳೊಮ್ಮೆ ನಡೆಯುತ್ತಿದ್ದ ಹಬ್ಬವು ಕೋವಿಂಡ್ ನಿಂದ 11 ವರ್ಷಗಳ ನಂತರ ನಡೆಯುತ್ತಿದೆ.ಈ ಸಂಬಂಧ ಗ್ರಾಮದಲ್ಲಿ ಮಂಚದ ಕಾಳಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎನ್.ನಂಜೇಗೌಡ ಮಾತನಾಡಿ, ಕಲ್ಕುಣಿ ಗ್ರಾಮವು ಸಾಕಷ್ಟು ಇತಿಹಾಸ ಹೊಂದಿದೆ. ಮೈಸೂರು ರಾಜ ಮನೆತನದ ರಾಜಗುರುಗಳ ವಂಶಸ್ಥರು ನೆಲೆಸಿದ್ದ ಸೇರಿದಂತೆ ಅನೇಕ ಐತಿಹಾಸಿಕ ಸಾಕ್ಷಿಗಳ ಕುರುಹುಗಳನ್ನು ಇಲ್ಲಿ ಕಾಣಬಹುದು. ಈ ಸಂಬಂಧ ಹಬ್ಬದ ಆಚರಣೆ ವೇಳೆ ಪುಸ್ತಕ ಬಿಡುಗಡೆಯಾಗಲಿದೆ. ಹಬ್ಬದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ. ಅಲ್ಲದೇ ಕಲ್ಕುಣಿಯು ಪರಮೇಶ್ವರನು ವಿವಿಧ ನಾಮಗಳಿಂದ ನೆಲೆಗೊಂಡಿರುವ ಪುಣ್ಯ ಭೂಮಿ ಎಂದೇ ಪ್ರಸಿದ್ಧಿಗೊಂಡಿದೆ ಎಂದು ವಿವರಿಸಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ಮಾದನಾಯಕ್, ಸದಸ್ಯ ಪರಮೇಶ್, ಕಾರ್ಯದರ್ಶಿ ಮಲ್ಲಯ್ಯ, ಮುಖಂಡರಾದ ಸೋಮಶೇಖರ್, ಚಂದನ್, ಮಹದೇವು ಪಾಲ್ಗೊಂಡಿದ್ದರು.
ತಾಲೂಕಿನ ಕಲ್ಕುಣಿ ಸೇರಿದಂತೆ ಅಕ್ಕಪಕ್ಕದ ಏಳು ಗ್ರಾಮಗಳಲ್ಲಿ ಆಚರಿಸುವ ಹಬ್ಬದಲ್ಲಿ ಜ.15ರ ಗುರುವಾರ ಗ್ರಾಮದ ರಂಗ ಆವರಣದಲ್ಲಿ ಚಿಕ್ಕಮ್ಮತಾಯಿ, ದೊಡ್ಡಮ್ಮತಾಯಿ ಪ್ರತಿಷ್ಥಾಪಿಸಿ ಕಲ್ಲಿನ ಬಳಿ ಧೂಳು ಮರಿ ಒಡೆದು ರಸಮುದ್ದೆ ತಯಾರಿಸಿ ಮನೆಯಮ್ಮ, ಲಕ್ಷ್ಮಿದೇವಿ ಬಲಿ ದೇವರ ಗುಡ್ಡಪ್ಪ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಪೂಜೆ ಸಲ್ಲಿಸುವ ಮೂಲಕ ದೊಡ್ಡಕೆರೆಯಿಂದ ವಿಜಯ ನಗರೇಶ್ವರಿ ದೇವರನ್ನು ಕೇಲು ತರುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.
ಜ.19ರಂದು ವಿವಿಧ ಜಾನಪದ ಕಲಾತಂಡಗಳೊಂದಿಗೆ ದೇವರ ಉತ್ಸವಮೂರ್ತಿಗಳ ಮೆರವಣಿಗೆ, ಜಯ20ರಂದು ಹೂವಿನ ಕೋಲು ಉತ್ಸವ, ದೇವರ ಕುಣಿಯುವುದು, ಒಕ್ಕಣೆ ಹೇಳುವುದು ನಡೆಯಲಿದೆ. ಜ.21ರಂದು ಕನ್ನಕಡ್ಡಯ್ಯ, ಮನೆಯಮ್ಮ, ಲಕ್ಷ್ಮಿದೇವರ ಬಲಿದೇವರ ಗುಡ್ಡಪ್ಪರವರೊಂದಿಗೆ ವಿಶೇಷ ಪೂಜಾ ಕೈಕಂರ್ಯಗಳು ಜರುಗಲಿವೆ.
ಜ.23ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೊಡ್ಡೇಗೌಡನಕೊಪ್ಪಲು ಹಾಗೂ ಚಿಕ್ಕಮಾಳಿಗೆಕೊಪ್ಪಲು ಗ್ರಾಮಸ್ಥರಿಂದ ರಾವಳೇಶ್ವರ(ಊರಮುಂದಲಯ್ಯ) ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಅಲ್ಲದೇ ದೇವರ ಉತ್ಸವಮೂರ್ತಿಯನ್ನು ತಲೆಯ ಮೇಲೆ ಹೊತ್ತು ಮಂಚದ ಕಾಳಿಕಾಂಬ ದೇವಸ್ಥಾನಕ್ಕೆ ಸೇರಿಸುವುದು ನಡೆಯಲಿದೆ.