ರಟ್ಟೀಹಳ್ಳಿ: ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿ, ದೇಶವನ್ನು ಅಭದ್ರತೆಗೆ ತಳ್ಳಿದೆ. ದೇಶದಲ್ಲಿ ಕಾಂಗ್ರೆಸ್ ವಿಸರ್ಜನೆ ಮಾಡಿ ಜಿರಳೆ ಪಕ್ಷದೊಂದಿಗೆ ವಿಲೀನ ಮಾಡಿಕೊಳ್ಳುವ ದುಸ್ಥಿತಿಗೆ ಬಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಇದು ದೇಶ ಹಾಗೂ ರಾಜ್ಯದಲ್ಲಿನ ಕಾಂಗ್ರೆಸ್ನ ಅವನತಿಯ ಚುನಾವಣೆಯಾಗಿದ್ದು, ಪಕ್ಷದ ಅಭ್ಯರ್ಥಿ ಎಸ್.ವಿ. ಸಂಕನೂರ ಅವರಿಗೆ ಮತ ಹಾಕುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸೋಣ ಎಂದರು.
ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಬಿಜೆಪಿ ಆಡಳಿತಾವಧಿಯಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಎರಡು ಪಟ್ಟು ಪರಿಹಾರ ನೀಡಿದ್ದೇವೆ. ಕೇಂದ್ರ ಸರ್ಕಾರದಿಂದ ₹6500 ಕೋಟಿ, ರಾಜ್ಯ ಸರ್ಕಾರದಿಂದ ₹13 ಸಾವಿರ ಕೋಟಿ ಕೊಟ್ಟಿದ್ದೇವೆ, ನೀರಾವರಿಗೆ ₹25 ಸಾವಿರ, ತೋಟಗಾರಿಕೆ ಬೆಳೆಗಳಿಗೆ ₹28 ಸಾವಿರ ನೀಡಿ ರೈತರನ್ನು ಆರ್ಥಿಕವಾಗಿ ಸುಭದ್ರವಾಗಿಡಲು ಪ್ರಯತ್ನ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ರೈತರಿಗೆ ಭಿಕ್ಷೆ ಹಾಕುವಂತೆ ಕೇವಲ ₹2500 ಘೋಷಣೆ ಮಾಡಿ ಕೈಕಟ್ಟಿ ಕುಳಿತಿದೆ. ಅದು ಇದೂವರೆಗೂ ಬಿಡಿಗಾಸು ರೈತರ ಖಾತೆಗೆ ಜಮಾ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗಳು 2028ರ ಚುನಾವಣೆಗೆ ದಿಕ್ಸೂಚಿಯಾಗಬೇಕು. ಪ್ರತಿ ಒಬ್ಬ ಕಾರ್ಯಕರ್ತರು ಕನಿಷ್ಠ 10 ಮತದಾರರನ್ನು ಗುರುತು ಮಾಡಿ ಅವರನ್ನು ಸಂಪರ್ಕ ಮಾಡಿ ಮತಗಟ್ಟೆಗೆ ಕರೆ ತಂದು ಓಟು ಹಾಕಿಸಬೇಕು. ಆಗ ಮಾತ್ರ ಸಂಕನೂರ ಅವರು ಭಾರಿ ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಗುವುದು ಎಂದರು.
ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಪಪಂ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಶಿವರಾಜ ಸಜ್ಜನ್, ಸಿದ್ದರಾಜ ಕಲಕೋಟಿ, ಮಂಡಲ ಅಧ್ಯಕ್ಷ ದೇವರಾಜ ನಾಗಣ್ಣನವರ, ಶಿವಕುಮಾರ ತಿಪ್ಪಶೆಟ್ಟಿ, ದೊಡ್ಡಗೌಡ ಪಾಟೀಲ್, ಭರತ್ ಬೊಮ್ಮಾಯಿ, ಭೋಜರಾಜ ಕರೂದಿ, ಜೆಪಿ ಪ್ರಕಾಶ, ಆರ್.ಎನ್. ಗಂಗೋಳ, ಶಂಭಣ್ಣ ಗೂಳಪ್ಪನವರ, ಬಿ.ಡಿ. ಪಾಟೀಲ್, ಬಸಮ್ಮ ಅಬಲೂರ, ಎಸ್.ಸಿ. ಮೋರ್ಚಾ ಅಧ್ಯಕ್ಷ ಹನುಮಂತ ಗಾಜೇರ ಇದ್ದರು.