ಕನ್ನಡಪ್ರಭ ವಾರ್ತೆ ಕಾರ್ಕಳ
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ಬಂದಾಗ ಕಾಂಗ್ರೆಸ್ ಸರ್ಕಾರ ಕಂತಿನ ಹಣ ಹಾಕುತ್ತಿದೆ. ರಾಜ್ಯದ ಹತ್ತೂವರೆ ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮೀ ಹಣವೇ ಬಂದಿಲ್ಲ. ರಾಜ್ಯದಲ್ಲಿ 25 ಲಕ್ಷ ಜನ 70ರ ವಯಸ್ಸು ಮೀರಿದವರು ಆಯುಷ್ಮಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಕಾರ್ಡ್ ಅನುಷ್ಠಾನಕ್ಕೆ ಬಿಡುತ್ತಿಲ್ಲ ಎಂದು ಆರೋಪಿಸಿದರು.
ಬಡಜನರು ಸಾಲಗಾರರ ಕಾಟ, ಮೈಕ್ರೋ ಫೈನಾನ್ಸ್‌ಗೆ ಬೆದರಿ ಗ್ರಾಮ ಬಿಟ್ಟಿದ್ದಾರೆ. ಇದು ನಾಚಿಕೆಗೇಡಿನ ವಿಷಯ. ಕಾಂಗ್ರೆಸ್ ಸರ್ಕಾರ ಹತ್ತು ಕೆ.ಜಿ. ಅಕ್ಕಿ ಕೊಡ್ತೇವೆ ಎಂದು ಹೇಳಿ ಒಂದು ಕಾಳು ಕೊಟ್ರಾ? ಕೇಂದ್ರದಿಂದ 5 ಕೆ.ಜಿ. ಅಕ್ಕಿ ನೀಡುತಿದ್ದಾರೆ ಎಂದರು.ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಮಾತನಾಡಿ, ಎರಡು ವರ್ಷಗಳಿಂದ ಎಲ್ಲ ಇಲಾಖೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಗ್ರಾಮ ಪಂಚಾಯಿತಿಗಳ ಅನುದಾನಗಳಿಗೂ ಕತ್ತರಿ ಹಾಕಲಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಪ್ರತಿ ಗ್ರಾಮಗಳಿಗ 12 ಕೋಟಿ ರು. ಅನುದಾನ ಹಂಚಿಕೆ ಮಾಡಿತ್ತು. ಆದರೆ ಕಾಂಗ್ರೆಸ್ ಅಧಿಕಾರದಲ್ಲಿ ಎರಡು ವರ್ಷದಲ್ಲಿ ತಾಲೂಕಿಗೆ ಒಟ್ಟು 12 ಕೋಟಿ ನೀಡಿದ್ದಾರೆ ಎಂದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಬಿಜೆಪಿ ಮುಖಂಡರಾದ ಬೋಳ ಪ್ರಭಾಕರ್ ಕಾಮತ್, ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ರಾಘವೇಂದ್ರ, ಮಣಿರಾಜ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಲಕ್ಷ್ಮೀನಾರಾಯಣ ಕನ್ಯಾನ, ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಮುಟ್ಲುಪಾಡಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಬಿಜೆಪಿ ಮಹಿಳಾ ಮೋರ್ಚಾ, ಸರ್ಕಾರದ ಜನವಿರೋಧಿ ನೀತಿಯ ವಿರುದ್ಧದ ಹಾಡನ್ನು ಹಾಡಿ ಘೋಷಣೆ ಕೂಗಿದರು.ಕಾರ್ಕಳ ತಾ.ಪಂ. ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್, ಕುಕ್ಕುಂದೂರು ರವೀಂದ್ರ ಮಡಿವಾಳ ಹಾಗೂ ಸುಹಾಸ್ ಶೆಟ್ಟಿ ಮುಟ್ಲುಪಾಡಿ ನಿರೂಪಿಸಿದರು.
----------------ಮಾಂಕಾಳು ವೈದ್ಯರನ್ನು ಅಭಿನಂದಿಸಿದ ಕೋಟಗೋಹತ್ಯೆ ಮಾಡಿದರೆ ಸರ್ಕಲ್‌ನಲ್ಲಿ ಗುಂಡಿಕ್ಕುವುದಾಗಿ ಹೇಳಿದ ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯರನ್ನು ಗೃಹ ಸಚಿವ ಮಾಡಬೇಕೆಂದು ಉಡುಪಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಹತ್ಯಾ ನಿಷೇಧ ಕಾನೂನನ್ನು ಕಾಂಗ್ರೆಸ್ ಧರಣಿಯ ನಡುವೆಯೂ ಜಾರಿಗೆ ತಂದೆವು. ಸಿದ್ದರಾಮಯ್ಯ ಸರ್ಕಾರ ಗೋಹತ್ಯೆಗೆ ಬೆಂಬಲಕೊಡುತ್ತಿದೆ. ಆದರೆ ಮಾಂಕಾಳು ವೈದ್ಯ ಉತ್ತಮ ಹೇಳಿಕೆ ನೀಡಿದ್ದಾರೆ. ಅವರನ್ನು ಪಕ್ಷಭೇದ ಮರೆತು ಅಭಿನಂದಿಸುವೆ ಎಂದರು.