ಒಳ ಮೀಸಲಾತಿ ಜಾರಿ ವಿರೋಧಿಸಲು ರಾಜ್ಯ ಸಮಾವೇಶ

KannadaprabhaNewsNetwork |  
Published : Nov 11, 2024, 12:50 AM ISTUpdated : Nov 11, 2024, 12:51 AM IST
ಗಜೇಂದ್ರಗಡ ಸೇವಾಲಾಲ್ ಬಡಾವಣೆಯಲ್ಲಿ ಒಳಮೀಸಲಾತಿ ವಿರೋಧಿ ಹೋರಾಟ ಸಮಿತಿಯಿಂದ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ಬೇರೆ ಸಮುದಾಯಗಳಿಗಿಂತ ಹೆಚ್ಚು ಶೋಷಣೆಗೆ ಒಳಪಟ್ಟಿರುವುದು ನಮ್ಮ ಸಮುದಾಯ ಎಂಬುದನ್ನು ಸರ್ಕಾರ ಪರಿಗಣಿಸಬೇಕು

ಗಜೇಂದ್ರಗಡ: ಒಳ ಮೀಸಲಾತಿ ಜಾರಿ ವಿರೋಧಿಸಲು ರಾಜ್ಯಮಟ್ಟದ ಸಮಾವೇಶ, ಜಿಲ್ಲಾ ಮಟ್ಟದ ಹೋರಾಟ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಅನಿದೀಷ್ಟಾವಧಿ ಧರಣಿಗೆ ತೆರಳಲು ತಾಲೂಕಿನ ಪ್ರತಿ ಗ್ರಾಮ, ತಾಂಡಾಗಳಲ್ಲಿ ಸಭೆ ನಡೆಸಿ ನಮಗೆ ನ್ಯಾಯ ಸಿಗುವರೆಗೆ ಹೋರಾಟ ನಡೆಸುತ್ತೇವೆ ಎಂದು ಪಟ್ಟಣದ ಬಂಜಾರ ಸಮಾಜದ ಮುಖಂಡರು ನಿರ್ಧರಿಸಿದರು.

ಇಲ್ಲಿನ ಸೇವಾಲಾಲ್ ಬಡಾವಣೆಯಲ್ಲಿ ಭಾನುವಾರ ಒಳಮೀಸಲಾತಿ ವಿರೋಧಿ ಹೋರಾಟ ಸಮಿತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ನ. ೨೦ ರಂದು ಸಮುದಾಯದ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆಯುವ ರಾಜ್ಯ ಮಟ್ಟದ ಸಮಾವೇಶ, ನ. ೨೨ರಂದು ಜಿಲ್ಲೆಯ ಸಚಿವರ ಮನೆ ಎದುರು ಜಿಲ್ಲಾಮಟ್ಟದ ಹೋರಾಟ ಹಾಗೂ ಬೆಳಗಾವಿಯಲ್ಲಿ ನಡೆಯುವ ಅನಿದೀಷ್ಟಾವಧಿ ಹೋರಾಟ ಕುರಿತು ಚರ್ಚಿಸಿದ ಮುಖಂಡರು, ನಾವು ವಲಸೆ ಹೋಗುತ್ತೇವೆ, ಸರಿಯಾದ ಶಿಕ್ಷಣವಿಲ್ಲ, ಕಬ್ಬಿನ ತೋಟ, ಕಾಫಿ ತೋಟ ಸೇರಿದಂತೆ ಗೋವಾ, ಮಂಗಳೂರು ಹಾಗೂ ಹೊರರಾಜ್ಯಗಳಿಗೆ ದುಡಿಯಲು ಹೋದವರು ಜೀವಂತ ಬರುತ್ತಾರೆ ಎಂಬ ಗ್ಯಾರಂಟಿ ಇಲ್ಲದ ಜತೆಗೆ ನಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಬೇರೆ ಸಮುದಾಯಗಳಿಗಿಂತ ಹೆಚ್ಚು ಶೋಷಣೆಗೆ ಒಳಪಟ್ಟಿರುವುದು ನಮ್ಮ ಸಮುದಾಯ ಎಂಬುದನ್ನು ಸರ್ಕಾರ ಪರಿಗಣಿಸಬೇಕು ಎಂದರು.

ಸರ್ಕಾರಗಳು ನಿಗಮಗಳನ್ನು ಮಾಡಿದ್ದು ಮೀಸಲಾತಿಯನ್ನು ವರ್ಗೀಕರಣ ಮಾಡಲು. ಸರ್ಕಾರ ನಮ್ಮ ಸಮುದಾಯದ ಡಾಟಾ ಸರಿಯಾಗಿ ಸಂಗ್ರಹ ಮಾಡಿಲ್ಲ. ೪೦ ರಿಂದ ೪೫ ಲಕ್ಷ ಜನರಿದ್ದೇವೆ. ಹೀಗಾಗಿ ಮತ್ತೊಮ್ಮೆ ಡಾಟಾ ಸಂಗ್ರಹಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದ ಮುಖಂಡರು, ನಮಗೆ ಸರಿಯಾದ ರೀತಿ ಮೀಸಲಾತಿ ಸಿಗದಿದ್ದರೆ ಹೋರಾಟ ಬಿಡುವ ಮಾತಿಲ್ಲ. ನಮ್ಮನ್ನು ಹಗುರವಾಗಿ ತಗೆದುಕೊಳ್ಳಬೇಡಿ. ಈ ಹಿಂದೆ ನಾವು ಹೋರಾಟ ಮಾಡಿದ ವೇಳೆ ನಿಮಗೆ ಎಸ್ಸಿ ಪಟ್ಟಿಯಿಂದ ತಗೆಯಲ್ಲ, ವರ್ಗೀಕರಣದೊಳಗೆ ೪. ೫ ಪ್ರತಿಶತ ೩ಪ್ರತಿಶತ ಕೊಡುತ್ತೀರಿ ಎಂಬುದು ಅತೀ ಅನ್ಯಾಯ. ೯೯ ಸಮುದಾಯಗಳು ಮೀಸಲಾತಿ ತಗೆದುಕೊಳ್ಳಬೇಕು ಎಂದರೆ ೯೯ ಸಮುದಾಯಗಳು ಎಲ್ಲಿವೆ ಎಂದು ಪ್ರಶ್ನಿಸುತ್ತೇವೆ. ಹೀಗಾಗಿ ನ್ಯಾಯಸಮ್ಮತ ಮೀಸಲಾತಿಗಾಗಿ ಇಲ್ಲಿಂದ ದಿಲ್ಲಿಯವರೆಗೆ ಹೋರಾಟ ಮಾಡಲು ಅಣಿಯಾಗಿದ್ದೇವೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಎಚ್ಚರಿಕೆ ನೀಡಬೇಕಿದೆ. ಹೀಗಾಗಿ ಒಳ ಮೀಸಲಾತಿ ವರ್ಗೀಕರಣದಿಂದ ಸಮುದಾಯದ ಮೇಲೆ ಬೀರುವ ಪರಿಣಾಮ ತಾಲೂಕಿನ ತಾಂಡಾಗಳಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಚರ್ಚಿಸಿ ಹೋರಾಟದಲ್ಲಿ ಭಾಗವಹಿಸೋಣ ಎಂದು ಕರೆ ನೀಡಿದರು.

ಈ ವೇಳೆ ಸಮಾಜದ ಅಧ್ಯಕ್ಷ ರಾಮಚಂದ್ರಪ್ಪ ಮಾಳೊತ್ತರ, ಪುರಸಭೆ ಸದಸ್ಯ ರೂಪಲೇಶ ರಾಠೋಡ, ಲಾಲಪ್ಪ ರಾಠೋಡ, ಗಣೇಶಪ್ಪ ಮಾಳೊತ್ತರ, ಪ್ರಶಾಂತ ರಾಠೋಡ, ತಾರಾಸಿಂಗ್ ರಾಠೋಡ, ಈಶಪ್ಪ ರಾಠೋಡ, ನೂರಪ್ಪ ರಾಠೋಡ, ಪೀರು ರಾಠೋಡ, ಬಾಲು ರಾಠೋಡ, ದಾನು ರಾಠೋಡ, ಪರಶುರಾಮ ಗುಗಲೋತ್ತರ, ಶಿವು ಚವ್ಹಾಣ, ಕುಬೇರ ರಾಠೋಡ, ವಿಠ್ಠಲ ರಾಠೋಡ, ಶಂಕ್ರಪ್ಪ ಮಾಳೊತ್ತರ, ಯಮನಪ್ಪ ನಾಯಕ, ಮನ್ನು ನಾಯಕ ಸೇರಿ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ