ಬೆಳೆ ನಷ್ಟ ಪರಿಹಾರಕ್ಕೆ ರಾಜ್ಯ ರೈತ ಸಂಘ ಆಗ್ರಹ

KannadaprabhaNewsNetwork |  
Published : Aug 06, 2024, 12:32 AM IST
5ಎಚ್ಎಸ್ಎನ್15: ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು  ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಅರಣ್ಯ ಇಲಾಖೆಯವರು ಈಗ ತಗಾದೆ ತೆಗೆದು ಈ ಮರಗಳು ನಮಗೆ ಸೇರಿದ್ದು, ಈ ಜಾಗವೂ ನಮಗೆ ಸೇರಿದ್ದು ಎಂದು ಹೇಳಿದ್ದಾರೆ. ಇದರಿಂದ ಈ ಭೂಮಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ತುಂಬಾ ತೊಂದರೆಯಾಗಲಿದೆ.

ಕನ್ನಡಪ್ರಭ ವಾರ್ತೆ ಹಾಸನ

ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸೋಮವಾರ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ತೋಟಗಾರಿಕಾ ಬೆಳೆಗಳು, ವಾಣಿಜ್ಯ ಬೆಳೆಗಳು ಸಂಪೂರ್ಣ ನಾಶವಾಗಿವೆ. ತುಂಬಾ ಹಳೆಯ ವಾಸದ ಮನೆಗಳು ಅಲ್ಲಲ್ಲಿ ಬಿದ್ದು ಹೋಗಿವೆ. ಆಲೂರು- ಸಕಲೇಶಪುರ ತಾಲೂಕಿನಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಕುಡಿಯುವ ನೀರಿಗೆ ಹಾಹಾಕಾರವಾಗಿದೆ. ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯನ್ನು ಅರೆಮಲೆನಾಡು ಎಂದು ಸೂಚಿಸಿಲ್ಲ. ಅರಸೀಕೆರೆ ತಾಲೂಕಿನಲ್ಲಿ ಹೆಚ್ಚು ತೆಂಗನ್ನು ನೆಚ್ಚಿಕೊಂಡಿದ್ದ ರೈತರು, ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಕೂಡಲೇ ರೈತರಿಗೆ ಕ್ವಿಂಟಲ್ ಕೊಬ್ಬರಿಗೆ ೨೫ ಸಾವಿರ ರು. ನಿಗದಿ ಮಾಡಬೇಕು. ಜಿಲ್ಲೆಯ ತೆಂಗು ಬೆಳೆಯುವ ಪ್ರದೇಶಗಳಲ್ಲಿ ನುಸಿ ರೋಗ (ಸೋರುವ ರೋಗ) ಕಾಣಿಸಿಕೊಳ್ಳುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಚನ್ನರಾಯಪಟ್ಟಣ, ಕಾಚೇನಹಳ್ಳಿ ಏತ ನೀರಾವರಿಯಿಂದ ಕೆರೆಗಳಿಗೆ ನೀರು ಹರಿಸುತ್ತಿಲ್ಲ. ಎಲ್ಲಾ ಕೆರೆಗಳಿಗೆ ತಕ್ಷಣವೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆ, ಹೊಳೆನರಸೀಪುರ ತಾಲೂಕು, ಕಸಬಾ ಹೋಬಳಿ, ಶ್ರೀಮಠದ ಗ್ರಾಮದ ಸರ್ವೇ ನಂ.೧ರಲ್ಲಿ ಮತ್ತು ಚೌಡಳ್ಳಿ ಗ್ರಾಮದ ಸರ್ವೇ ನಂ.೭೦, ೭೧, ೭೪, ಗಾಳಿಪುರ ಗ್ರಾಮದ ಸರ್ವೇ ನಂ.೧ರಲ್ಲಿ ನೂರಾರು ರೈತರಿಗೆ ೨ ಎಕರೆಯಂತೆ ೨೦೦೭ರಲ್ಲಿ ಕಂದಾಯ ಇಲಾಖೆಯವರು ಮಂಜೂರು ಮಾಡಿಕೊಟ್ಟಿರುತ್ತಾರೆ. ಅದರಂತೆ ಎಲ್ಲಾ ರೈತರೂ ಸ್ವಾಧೀನಾನುಭವ ಹೊಂದಿದ್ದು, ಇಲ್ಲಿಯವರೆಗೂ ಕಂದಾಯ ವಗೈರೆ ಕಟ್ಟಿಕೊಂಡು ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಅರಣ್ಯ ಇಲಾಖೆಯವರು ೨೦೦೯-೧೦ರಲ್ಲಿ ಹಿರಿಯ ರೈತರನ್ನು ಭೇಟಿ ಮಾಡಿ ಅರಣ್ಯ ಕೃಷಿ ಮಾಡಲು ನಿಮಗೆ ಸಸಿಗಳನ್ನು ವಿತರಿಸುತ್ತೇವೆ. ಅವುಗಳನ್ನು ಪೋಷಣೆ ಮಾಡಿದ ನಂತರ ನೀವೇ ಕಟಾವು ಮಾಡಿಕೊಳ್ಳಿ ಎಂದು ಹೇಳಿರುತ್ತಾರೆ. ಅದರಂತೆ ನಾವು ಪೋಷಣೆ ಮಾಡಿದ ಮರಗಳು ಈಗ ಕಟಾವಿಗೆ ಸಿದ್ಧವಾಗಿರುತ್ತವೆ ಎಂದರು.

ಅರಣ್ಯ ಇಲಾಖೆಯವರು ಈಗ ತಗಾದೆ ತೆಗೆದು ಈ ಮರಗಳು ನಮಗೆ ಸೇರಿದ್ದು, ಈ ಜಾಗವೂ ನಮಗೆ ಸೇರಿದ್ದು ಎಂದು ಹೇಳಿದ್ದಾರೆ. ಇದರಿಂದ ಈ ಭೂಮಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ತುಂಬಾ ತೊಂದರೆಯಾಗಲಿದೆ. ಅರಸೀಕೆರೆ ತಾಲೂಕು, ಜಾವಗಲ್ಲು ಹೋಬಳಿ, ಹಂದ್ರಾಳು ಲಿಂಗಾಪುರ ನೀಲಗಿರಿ ಕಾವಲಿನ ೪೪೮೦ ಎಕರೆಯಲ್ಲಿ ಕಾಳಯ್ಯನಕೊಪ್ಪಲು ಕೆರೆಕೋಡಿಹಳ್ಳಿ, ನಲ್ಲಲಿಗೆ, ಕೋಳಗುಂದ, ತಿರುಪತಿಹಳ್ಳಿ, ಮಾವತನಹಳ್ಳಿ, ನೀಲಗಿರಿ ಕಾವಲು, ಬೋವಿಕಾವಲು, ಸಿದ್ದರಹಟ್ಟಿ, ತಿಮ್ಮನಹಳ್ಳಿ ಹೀಗೆ ೨೫ ಹಳ್ಳಿಗಳಿಗೂ ಹೆಚ್ಚು ಸುಮಾರು ೮೦ ವರ್ಷದಿಂದ ಸ್ವಾಧೀನಾನುಭವದಲ್ಲಿರುತ್ತಾರೆ. ಈ ತುಂಡು ಭೂಮಿಯನ್ನು ಬಿಟ್ಟರೆ ಇನ್ನಾವುದೇ ಭೂಮಿ ಇರುವುದಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಇದ್ದು, ಬ್ಯಾಂಕಿನವರು ಬೆಳೆ ಸಾಲಕ್ಕೆ ನೋಟಿಸ್ ಕೊಡುವುದನ್ನು ತಕ್ಷಣ ನಿಲ್ಲಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ (ಕೊಳವೆ ಬಾವಿ) ಆಧಾರ್ ಸಂಖ್ಯೆ ಜೋಡಣೆ ಮಾಡುವುದಕ್ಕೆ ಆದೇಶ ನೀಡಿದ್ದಾರೆ. ಕೂಡಲೇ ಇದನ್ನು ಹಿಂಪಡೆಯಬೇಕು. ಇದರಿಂದ ರೈತರಿಗೆ ತುಂಬಾ ತೊಂದರೆಯಾಗಲಿದ್ದು, ಮುಂದುವರಿದರೆ ರೈತರು ಸಿಡಿದೇಳುತ್ತಾರೆ. ಆದುದರಿಂದ ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ರಾಜ್ಯ ಸಂಚಾಲಕ ಮಹಮದ್ ಸಾದಿಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಂ, ಶಿವರಾಮೇಗೌಡ ಇತರರು ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...