ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ರಸಗೊಬ್ಬರದ ಬೆಲೆಯನ್ನು 50 ಕೆಜಿ ಮೂಟೆಗೆ 800 ರು. ನಿಂದ 1000 ರು. ಗೆ ಏರಿಸಿದೆ. ಇದೇ ಬೆಳೆ ಕಬ್ಬಿನ ಇಳುವರಿಯನ್ನು ಶೇಕಡ 9.5 ರಿಂದ 10.25ಕ್ಕೆ ಹೆಚ್ಚಿಸಿರುವುದು ಕಾರ್ಖಾನೆಗಳಿಗೆ ಲಾಭ ಮಾಡಿಕೊಳ್ಳುವ ಹುನ್ನಾರವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೃಷಿ ಉತ್ಪಾದನಾ ವೆಚ್ಚ, ದಿನನಿತ್ಯದ ಸಾಮಗ್ರಿಗಳ ವೆಚ್ಚ ಹೆಚ್ಚಾಗಿ ರೈತರ ಜೀವನ ಮಟ್ಟ ಕುಸಿದಿದೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ರಸಗೊಬ್ಬರಕ್ಕೆ ನೀಡುತ್ತಿರುವ ಸಬ್ಸಿಡಿಯನ್ನು ಪರಿಷ್ಕರಣೆ ಮಾಡಿ ಬೆಲೆಯನ್ನು ಇಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಎಥೆನಾಲ್ ಉತ್ಪಾದನೆಗೆ ಅವಕಾಶ ನೀಡಿ ಉತ್ಪಾದನೆಯಾಗುವ ಎಥೆನಾಲ್ ಅನ್ನು ಸಂಪೂರ್ಣ ಖರೀದಿ ಮಾಡಬೇಕು. ಕಳೆದ ಸಾಲಿನಲ್ಲಿ ಕಾರ್ಖಾನೆಗಳಿಂದ ಬರಬೇಕಿರುವ 50 ರು. ಪ್ರೋತ್ಸಾಹ ಧನವನ್ನು ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಇತ್ಯರ್ಥ ಗೊಳಿಸಿ ಕಾರ್ಖಾನೆಯವರು ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡುವಂತೆ ಮಾಡಬೇಕು ಎಂದು ಆಗ್ರಹಪಡಿಸಿದರು.
ಪ್ರಸ್ತುತ ಬರಗಾಲ ಇರುವುದರಿಂದ ಪ್ರಸಕ್ತ ಸಾಲಿಗೆ ರೈತರು ಹೊಸ ಬೆಳೆ ಬೆಳೆಯದಂತೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ. ಹಾಗಾಗಿ ಸರ್ಕಾರ ರೈತರಿಗೆ ಪ್ರತಿ ಎಕರೆಗೆ 50,000 ಪರಿಹಾರ ಬಿಡುಗಡೆ ಮಾಡಬೇಕು ಮತ್ತು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಭತ್ತ ನಾಟಿ, ಕಬ್ಬು ಕಟಾವನ್ನು ನರೇಗಾ ವ್ಯಾಪ್ತಿಗೆ ತರಲು ಕೇಂದ್ರಕ್ಕೆ ಮನವಿ: ಮಹೇಂದ್ರ
ಭತ್ತ ನಾಟಿ, ಕಬ್ಬು ಕಟಾವನ್ನು ನರೇಗಾ ವ್ಯಾಪ್ತಿಗೆ ಒಳಪಡಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿರುವುದಾಗಿ ಎಂದು ರೈತ ಮುಖಂಡ ಅಣ್ಣೂರು ಮಹೇಂದ್ರ ತಿಳಿಸಿದರು.
ಕಬ್ಬು ಕಟಾವು ಮಾಡುವುದಕ್ಕೆ ಉತ್ತರ ಕರ್ನಾಟಕ ಮತ್ತು ಹೊರ ರಾಜ್ಯದ ಕೂಲಿ ಆಳುಗಳನ್ನು ಪ್ರಧಾನವಾಗಿ ಆಶ್ರಯಿಸಿದ್ದೇವೆ. ಇದರಿಂದ ದುಬಾರಿ ವೆಚ್ಚ ರೈತರ ಮೇಲೆ ಬೀಳುತ್ತಿದೆ. ಭತ್ತ ನಾಟಿಗೂ ರೈತರು ಆಳುಗಳು ಸಿಗದೇ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಬತ್ತ ನಾಟಿ ಮತ್ತು ಕಬ್ಬು ಕಟಾವನ್ನು ನರೇಗಾ ವ್ಯಾಪ್ತಿಗೆ ತರುವುದು ಸೂಕ್ತ ಎಂದು ತಿಳಿಸಿರುವುದಾಗಿ ಹೇಳಿದರು.