ಹುಬ್ಬಳ್ಳಿ:
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆಗೆ ಗ್ರೇಡ್ ನೀಡುವ ಶಿಕ್ಷಣ ಇಲಾಖೆಯ ದಿಢೀರ್ ನಿರ್ಧಾರ ಖಂಡನಾರ್ಹ. ಹಿಂದಿ ಭಾಷೆ ಅಲ್ಲದೇ ಕೆಲವೆಡೆ ತೃತೀಯ ಭಾಷೆಯಾಗಿ ಕನ್ನಡ, ಸಂಸ್ಕೃತ, ಉರ್ದು, ಇಂಗ್ಲಿಷ್, ಮರಾಠಿ ಭಾಷೆಗಳಿವೆ. ಈ ನೀತಿಯಿಂದಾಗಿ ಈ ಎಲ್ಲ ಭಾಷೆಗಳಿಗೂ ಹೊಡೆತ ಬೀಳಲಿದೆ. ಈಗಾಗಲೇ ಶಿಕ್ಷಕರು ಒಂದು ವರ್ಷ ಮಕ್ಕಳಿಗೆ ಹಿಂದಿ ವಿಷಯದಲ್ಲಿ ಪಾಠ ಮಾಡಿದ್ದಾರೆ. ಈಗ ಮಕ್ಕಳ ಪರೀಕ್ಷಾ ಸಮಯದಲ್ಲೇ ತರಾತುರಿಯಲ್ಲಿ ತಜ್ಞರೊಂದಿಗೆ ಚರ್ಚಿಸದೇ ಈ ನಿರ್ಧಾರ ತಗೆದುಕೊಂಡರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದ್ವಿಭಾಷಾ ನೀತಿ ಸರಿಯಲ್ಲ:ಮಕ್ಕಳ ಕಲಿಕೆಯ ವಿಷಯದಲ್ಲಿ ದ್ವಿಭಾಷಾ ನೀತಿ ಸರಿಯಲ್ಲ. ಆಡಳಿತ ಭಾಷೆ ಮಾಡುವಂತೆ ನಾನು ಒತ್ತಾಯಿಸುವುದಿಲ್ಲ. ಆದರೆ, ಶಾಲಾ-ಕಾಲೇಜುಗಳಲ್ಲಿ ಕಲಿಯುವ ವಿಷಯದಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ಈಗ ಹಿಂದಿ ಭಾಷೆಗೆ ಅಂಕ ತೆಗೆದು ಗ್ರೇಡ್ ನೀಡಿದ್ದಾರೆ. ಮುಂದೆ ಎಲ್ಲ ಭಾಷೆಗಳಿಗೂ ಗ್ರೇಡ್ ಕೇಳುತ್ತಾರೆ. ನೀಡಲು ಆಗುತ್ತದೆಯೇ ಎಂದು ಹೊರಟ್ಟಿ ಪ್ರಶ್ನಿಸಿದರು.
ಪತ್ರದಲ್ಲೇನಿದೆ?:ಈ ಕುರಿತು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, ದೇಶದಲ್ಲಿ ಬಹು ಭಾಷೆಗಳ ಕಲಿಕೆ ಉತ್ತೇಜಿಸುವ ಉದ್ದೇಶದಿಂದ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲಾಗಿದೆ. ಭಾಷೆಗಳ ಕಲಿಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವೇ ಹೊರತು ಅನಾನುಕೂಲವೇನಿಲ್ಲ. ಗ್ರೇಡಿಂಗ್ ಪದ್ಧತಿಯಿಂದ ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 15 ಸಾವಿರಕ್ಕೂ ಹೆಚ್ಚು ಶಿಕ್ಷಕರ ಗತಿ ಏನು? ಹಿಂದಿ ಭಾಷಾ ಶಿಕ್ಷಕರಾಗಬೇಕೆಂದು ಕನಸು ಕಾಣುತ್ತಾ ಬಿಎಡ್ ಪದವಿ ಮಾಡಿರುವ ಅನೇಕ ಭಾವಿ ಶಿಕ್ಷಕರು ನಿರುದ್ಯೋಗಿಗಳಾಗುತ್ತಾರೆ. ಪ್ರಸ್ತುತ ಕೆಲವರು ಹಿಂದಿಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, ಎಲ್ಲ ವಿಷಯಗಳಿಗಿಂತ ಹಿಂದಿಯಲ್ಲಿಯೇ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಲ್ಲದೇ, ಹಿಂದಿ ವಿಷಯದ ಅಂಕಗಳಿಂದಲೇ ಒಟ್ಟಾರೆ ಫಲಿತಾಂಶ ಹೆಚ್ಚಳಕ್ಕೆ ಕಾರಣವಾಗಿದೆ. ಆದ್ದರಿಂದ ಈ ಮನವಿಯನ್ನು ಪುರಸ್ಕರಿಸಿ ತ್ರಿಭಾಷಾ ಸೂತ್ರ ಮುಂದುವರಿಕೆಗೆ ಕ್ರಮ ವಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ.