ರೈತರ ಸಂಕಷ್ಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರ: ಬಿವೈವಿ

KannadaprabhaNewsNetwork |  
Published : Oct 25, 2026, 01:30 AM IST
ದೊಡ್ಡಬಳ್ಳಾಪುರದಲ್ಲಿ ರೈತ ಸ್ಪಂದನ ಕಾರ್ಯಕ್ರಮದ ಅಡಿಯಲ್ಲಿ ರೈತರಿಗೆ ಬೆಳೆ ವಿಮೆ ಬಾಂಡ್‌ಗಳನ್ನು ವಿತರಿಸುವ ಸಮಾರಂಭಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಿದರು. | Kannada Prabha

ಸಾರಾಂಶ

ತೀವ್ರ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ರೈತರ ಹಿತವನ್ನು ಕಡೆಗಣಿಸುವ ಮೂಲಕ ರಾಜ್ಯ ಸರ್ಕಾರ ತನ್ನ ರೈತ ವಿರೋಧಿ ಧೋರಣೆಯನ್ನು ಮುಂದುವರಿಸಿರುವುದು ಅಕ್ಷಮ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತೀವ್ರ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ರೈತರ ಹಿತವನ್ನು ಕಡೆಗಣಿಸುವ ಮೂಲಕ ರಾಜ್ಯ ಸರ್ಕಾರ ತನ್ನ ರೈತ ವಿರೋಧಿ ಧೋರಣೆಯನ್ನು ಮುಂದುವರಿಸಿರುವುದು ಅಕ್ಷಮ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ದೊಡ್ಡಬಳ್ಳಾಪುರದ ಬಿಜೆಪಿ ತಾಲೂಕು ಘಟಕದ ನೇತೃತ್ವದಲ್ಲಿ ಶನಿವಾರ ನಡೆದ ರೈತ ಸ್ಪಂದನ ಕಾರ್ಯಕ್ರಮದ ಅಡಿಯಲ್ಲಿ ರೈತರಿಗೆ ಬೆಳೆ ವಿಮೆ ಬಾಂಡ್‌ಗಳನ್ನು ವಿತರಿಸುವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಅನ್ನದಾತ ರೈತರಿಗೆ ಒದಗಿಸಿರುವ ಮಹತ್ವದ ಫಸಲ್‌ ಬಿಮಾ ಯೋಜನೆಯಡಿ ದೊಡ್ಡಬಳ್ಳಾಪುರ ತಾಲೂಕಿನ 4 ಸಾವಿರಕ್ಕೂ ಅಧಿಕ ಕೃಷಿಕರಿಗೆ ಬೆಳೆ ವಿಮೆ ಪ್ರೀಮಿಯಂ ತುಂಬಿರುವ ಸ್ಥಳೀಯ ಶಾಸಕರ ರೈತ ಕಾಳಜಿ ಅನನ್ಯವಾದದ್ದು ಎಂದು ಹೇಳಿದರು.

ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಇಂದು ಸುಮಾರು 4,000 ಅನ್ನದಾತರ ಕೃಷಿ ಭೂಮಿಗೆ ಸಮಗ್ರ ಬೆಳೆ ವಿಮೆ ಸುರಕ್ಷತೆ ಖಚಿತಪಡಿಸುವ ನಿಟ್ಟಿನಲ್ಲಿ ರೈತ ಬಾಂಧವರಿಗೆ ಬೆಳೆ ವಿಮಾ ಪಾಲಿಸಿ ಪ್ರತಿಗಳನ್ನು ವಿತರಿಸಲಾಗುತ್ತಿದೆ. ಸಂಕಷ್ಟ ಎದುರಿಸುತ್ತಿರುವ ತಮ್ಮ ಕ್ಷೇತ್ರದ ರೈತರಿಗೆ ಪರಿಹಾರ ದೊರಕಿಸುವ ಮೂಲಕ ಕ್ಷೇತ್ರದ ಸಣ್ಣ ಮತ್ತು ಅತಿಸಣ್ಣ ರೈತರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಶಾಸಕ ಧೀರಜ್‌ ಮುನಿರಾಜ್‌ ಅವರ ವಿಶೇಷ ಕಾಳಜಿ ಮತ್ತು ಶ್ರಮ ಅಭಿನಂದನೀಯ ಎಂದರು.

ರೈತ ಹಿತ ಕಡೆಗಣಿಸಿರುವ ರಾಜ್ಯ ಸರ್ಕಾರ:

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರೈತರಿಗೆ ಜಾತಿ ಇಲ್ಲ. ಸಮಾಜದಲ್ಲಿ ಇರುವ ಎಲ್ಲ ಜಾತಿಗಳನ್ನು ಕೂಡಿಸಿದರೆ ಅವರು ರೈತರು ಎಂದು ಹೇಳಬಹುದು. ಫಸಲ್‌ ಬಿಮಾ ಯೋಜನೆಗೆ ಎಲ್ಲ ಶಾಸಕ-ಸಂಸದರು ಕೈಜೋಡಿಸಬೇಕು. ಯೋಜನೆ ಕೇಂದ್ರದ್ದೇ ಆದರೂ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸುವ ಹೊಣೆಗಾರಿಕೆ ಇದೆ. ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ರೈತರ ಹಿತಾಸಕ್ತಿಯನ್ನು ರಾಜ್ಯ ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂದು ಆರೋಪಿಸಿದರು.

ರೈತರ ಹಿತರಕ್ಷಣೆ ಪ್ರಧಾನ ಆದ್ಯತೆ: ಧೀರಜ್‌

ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನಲೆ ಅನ್ನದಾತ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ವೇಳೆ ಕೇಂದ್ರ ಸರ್ಕಾರದ ಫಸಲ್‌ ಬಿಮಾ ಯೋಜನೆ ಕೃಷಿಕರಿಗೆ ವರದಾನವಾಗಿದ್ದು, ಬೆಳೆ ನಷ್ಟಕ್ಕೆ ಪೂರಕ ಪರಿಹಾರ ಪಡೆಯಲು ಅನುಕೂಲವಾಗುತ್ತದೆ. ರೈತರ ಹಿತರಕ್ಷಣೆ ಪ್ರಧಾನ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕ್ಷೇತ್ರದ ವ್ಯಾಪ್ತಿಯ ಸುಮಾರು 4 ಸಾವಿರ ರೈತರು ವಿಮಾ ಯೋಜನೆ ಪಡೆಯಲು ಅನುಕೂಲವಾಗುವಂತೆ ಪ್ರೀಮಿಯಂ ಪಾವತಿಸಿ, ವಿಮಾ ಪತ್ರಗಳನ್ನು ವಿತರಿಸಲಾಗುತ್ತದೆ ಎಂದರು.

ಆರ್ಥಿಕ ಭದ್ರತೆಗೆ ಬೆಳೆ ವಿಮೆ ಸಹಕಾರಿ: ಡಾ.ಕೆ.ಸುಧಾಕರ್

ಸಂಸದ ಡಾ.ಕೆ.ಸುಧಾಕರ್‌ ಮಾತನಾಡಿ, ಬರ ಹಾಗೂ ಬೆಳೆ ನಷ್ಟದಂತಹ ಸಂಕಷ್ಟದ ಸಂದರ್ಭಗಳಲ್ಲಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಬೆಳೆ ವಿಮೆ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಶಾಸಕರ ಕಚೇರಿ ಮತ್ತು ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ರೈತರ ಬೆಳೆ ವಿಮೆಯ ಪ್ರೀಮಿಯಂ ಪಾವತಿಸಿರುವುದು ಉತ್ತಮ ಪ್ರಯತ್ನ. ಇಂತಹ ಉಪಕ್ರಮಗಳು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವುದರೊಂದಿಗೆ ಕೃಷಿ ವಲಯದಲ್ಲಿ ಆತ್ಮವಿಶ್ವಾಸ ತುಂಬಲು ಸಹಕಾರಿಯಾಗುತ್ತವೆ ಎಂದರು.

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ, ವಿಭಾಗ ಪ್ರಭಾರಿ ಬ್ಯಾಟರಂಗೇಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ಬಮೂಲ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್, ಮುಖಂಡರಾದ ಪುಷ್ಪ ಶಿವಶಂಕರ್‌, ಟಿ.ವಿ.ಲಕ್ಷ್ಮೀನಾರಾಯಣ್, ಬಂತಿ ವೆಂಕಟೇಶ್, ನಾಗೇಶ್‌, ಮುದ್ದಪ್ಪ, ಜೊ.ನಾ.ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

ಫಸಲ್‌ ಬಿಮಾ; ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಅಶೋಕ ಟೀಕೆ

ರಾಜ್ಯ ಸರ್ಕಾರದಲ್ಲಿ ಆಡಂಬರಕ್ಕೆ ಹಣವಿದೆ, ಅನ್ನದಾತನ ಬೆಳೆ ವಿಮೆ ಕಟ್ಟಲು ಹಣವಿಲ್ಲ. ರೈತರ ಹೆಸರಿನಲ್ಲಿ ಭಾಷಣ ಮಾಡುವುದು ಸುಲಭ. ಆದರೆ ಸಂಕಷ್ಟದಲ್ಲಿರುವ ರೈತನ ಬೆನ್ನಿಗೆ ನಿಲ್ಲಲು ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನಸ್ಸೂ ಇಲ್ಲ, ಯೋಗ್ಯತೆಯೂ ಇಲ್ಲ. ರಾಜ್ಯದ ಖಜಾನೆಯನ್ನು ಬರಿದು ಮಾಡಿ, ಈಗ ಅನ್ನದಾತನ ಬೆಳೆ ವಿಮೆಗೂ ಹಣ ನೀಡದೆ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದು ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಆರೋಪಿಸಿದರು.ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೇಂದ್ರ ಸರ್ಕಾರ ತನ್ನ ಪಾಲಿನ ₹1,342 ಕೋಟಿ ಪ್ರೀಮಿಯಂ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ₹1,680 ಕೋಟಿ ಪಾವತಿಸದೆ ವಿಳಂಬ ಮಾಡುತ್ತಿದೆ. ರಾಜ್ಯದ ಪಾಲಿನ ಹಣ ಪಾವತಿಯಾಗದ ಕಾರಣ ವಿಮಾ ಪ್ರಕ್ರಿಯೆಗೆ ಅಡ್ಡಿಯಾಗಿದ್ದು, ರೈತರಿಗೆ ಸಿಗಬೇಕಾದ ಶೇ.25 ಮಧ್ಯಂತರ ಪರಿಹಾರವೂ ವಿಳಂಬವಾಗುತ್ತಿದೆ.ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಬೇಕಾದ ಸರ್ಕಾರವೇ ಅವರ ಹಕ್ಕಿನ ಹಣಕ್ಕೆ ಅಡ್ಡಿಯಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇದು ಕೇವಲ ಹಣ ಪಾವತಿಯ ವಿಳಂಬವಲ್ಲ; ಸಂಕಷ್ಟದಲ್ಲಿರುವ ಅನ್ನದಾತನಿಗೆ ಮಾಡಿದ ಅನ್ಯಾಯ ಎಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಯ ಸಿಂಚನ ನಡುವೆಯೂ ಧಮ್ಮ ನಡಿಗೆ
ಶಿಕ್ಷಣದ ಮೂಲಕವೇ ಸಮುದಾಯ ಪರಿವರ್ತನೆ ಸಾಧ್ಯ