ಕಾಂಗ್ರೆಸ್ ಶಾಸಕರು ಯಾವುದೇ ಅಧ್ಯಯನ ಮಾಡುವುದಕ್ಕೆ ವಿದೇಶಕ್ಕೆ ಹೋಗಿಲ್ಲ. ತಮ್ಮ ಬಳಿ ಎಷ್ಟು ಶಾಸಕರ ಬಲವಿದೆ ಎಂದು ತೋರಿಸಲು ಹೋಗಿದ್ದಾರೆ. ಸರ್ಕಾರ ಪತನವಾಗುವ ಹಂತಕ್ಕೆ ಬಂದಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಉಡುಪಿ: ಕಾಂಗ್ರೆಸ್ ಶಾಸಕರು ಯಾವುದೇ ಅಧ್ಯಯನ ಮಾಡುವುದಕ್ಕೆ ವಿದೇಶಕ್ಕೆ ಹೋಗಿಲ್ಲ. ತಮ್ಮ ಬಳಿ ಎಷ್ಟು ಶಾಸಕರ ಬಲವಿದೆ ಎಂದು ತೋರಿಸಲು ಹೋಗಿದ್ದಾರೆ. ಸರ್ಕಾರ ಪತನವಾಗುವ ಹಂತಕ್ಕೆ ಬಂದಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.ಶುಕ್ರವಾರ ಕುಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಯಾವುದೇ ರೀತಿಯಲ್ಲಾದರೂ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಎರಡು ಮೂರು ದಿನಗಳಿಂದ ದೆಹಲಿಯಲ್ಲಿರುವ ಅವರು ತಾನು ರಾಜಕೀಯ ಮಾಡುವುದಕ್ಕೆ ಬಂದಿದ್ದೇನೆ. ದೆಹಲಿಗೆ ಗಾಳಿ, ಬಿಸಿಲು ನೋಡಲು ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನು ಗಮನಿಸುವಾಗ ರಾಜ್ಯ ಸರ್ಕಾರ ಪತನವಾದರೂ ಆಶ್ಚರ್ಯ ಇಲ್ಲ ಎಂದರು.ಕಾಂಗ್ರೆಸ್ ಶಾಸಕರು ವಿದೇಶಕ್ಕೆ ಹೋಗಿ ಏನು ಅಧ್ಯಯನ ಮಾಡುತ್ತಾರೆ. ನಮ್ಮ ಪಾರ್ಲಿಮೆಂಟರಿ ವ್ಯವಸ್ಥೆಯೇ ಬೇರೆ ವಿದೇಶಗಳ ವ್ಯವಸ್ಥೆಯೇ ಬೇರೆ. ಆದ್ದರಿಂದ ಅದನ್ನು ಬಿಟ್ಟು ಭ್ರಷ್ಟಾಚಾರ ಹೇಗೆ ಕಡಿಮೆ ಮಾಡಬೇಕು ಎಂದು ಅಧ್ಯಯನ ಮಾಡಲಿ ಎಂದು ಯತ್ನಾಳ್ ಸಲಹೆ ಮಾಡಿದರು.
ಈ ಬಾರಿಯ ರಾಜ್ಯ ವಿಧಾನಸಭೆ ಅದಿವೇಶನ ಬಹಳ ಅರ್ಥಹೀನವಾಗಿ ನಡೆಯಿತು. ಜನರು ತೆರಿಗೆ ಹಣ ಪೋಲಾಯಿತು. ಅಬಕಾರಿ ಇಲಾಖೆ ಭ್ರಷ್ಟಾಚಾರವನ್ನು ಪ್ರತಿಪಕ್ಷ ಸರಿಯಾಗಿ ನಿರ್ವಹಿಸಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ವಿಧಾನಸಭೆಯಲ್ಲೂ ಮಾತನಾಡಲಿಲ್ಲ. ಬಹಿರಂಗವಾಗಿಯೂ ಮಾತನಾಡುತ್ತಿಲ್ಲ. ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಮೂಡಿಸಿದ ತಪ್ಪು ಅಭಿಪ್ರಾಯವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಸರಿಪಡಿಸಿಲ್ಲ. ಅವರಿಗೆ ಡಿ.ಕೆ. ಶಿವಕುಮಾರ್ ತನ್ನ ಫೈಲ್‌ಗಳನ್ನು ತೆಗೆದಿಡುತ್ತಾರೆ ಅನ್ನೋ ಭಯ ಎಂದು ಯತ್ನಾಳ್ ಆರೋಪಿಸಿದರು.ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ತಮಗೇನೂ ಗೊತ್ತಿಲ್ಲ. ಅನಂತ್ ಕುಮಾರ್ ಹೆಗಡೆ ವೈಯಕ್ತಿಕವಾಗಿ ಎಲ್ಲೂ ಪ್ರತಿಕ್ರಿಯೆ ಕೊಟ್ಟಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದೆಹಲಿಗೆ ಬುಲಾವ್ ಎಂದು ಹೇಳುತ್ತಿದ್ದಾರೆ. ರಾಜ್ಯ ರಾಜಕಾರಣಕ್ಕೆ ಬರಲು ಅವರಿಗೆ ಮನಸ್ಸಿದೆಯೋ ಅವರೇ ಹೇಳಬೇಕು. ಬಿಜೆಪಿಯಲ್ಲಿ ಒಳ್ಳೆಯ ನಾಯಕರನ್ನು ತಂದೆ ಮಕ್ಕಳು ಮುಗಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ವರ್ಗಾವಣೆ ಭ್ರಷ್ಟಾಚಾರದ ಕೂಪ: ಸಿಎಂ ಸಿದ್ದರಾಮಯ್ಯ ತನಗೆ ಬೇಕಾದಂತೆ ಅಧಿಕಾರಿಗಳನ್ನು ಮೈಸೂರಿನಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ. ವರ್ಗಾವಣೆ ಎನ್ನುವುದು ದೊಡ್ಡ ಭ್ರಷ್ಟಾಚಾರದ ಕೂಪ, ನೇರವಾಗಿ ಸಿದ್ದರಾಮಯ್ಯ ಪುತ್ರ ಹಾಗೂ ಬೈರತಿ ಸುರೇಶ್ ಇದರಲ್ಲಿ ಭಾಗಿಯಾಗಿದ್ದಾರೆ, ಕರ್ನಾಟಕದ ಅತಿ ಹೆಚ್ಚು ಅವಧಿಯ ಮುಖ್ಯಮಂತ್ರಿ ನಿಜ, ಆದರೆ ಅತಿ ಭ್ರಷ್ಟ ಮುಖ್ಯಮಂತ್ರಿಯಾಗಿ ನಿವೃತ್ತರಾಗುತ್ತಾರೆ ಎಂದು ಹೇಳಿದರು.
ಲವ್ ಜಿಹಾದ್ ವಿರುದ್ಧ ಕಾನೂನು ಬೇಕು: ಕರಾವಳಿ ಭಾಗದಲ್ಲಿ ಲವ್ ಜಿಹಾದ್ ಹೆಚ್ಚುತ್ತಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಅಪಾಯ ಖಂಡಿತ. ರಾಜ್ಯದಲ್ಲಿ ಈ ಸರಕಾರ ಅಂತೂ ಏನೂ ಮಾಡಲ್ಲ. ಈ ಬಗ್ಗೆ ಕಠಿಣ ಕಾನೂನು ಜಾರಿಗೆ ತರುವ ಸರ್ಕಾರ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಯತ್ನಾಳ್ ಹೇಳಿದರು. ಲವ್ ಜಿಹಾದ್ ಎನ್ನುವುದು ದೊಡ್ಡ ಜಾಗತಿಕ ಜಾಲ. ಈಗಿನ ಕಾನೂನಿನಲ್ಲಿ ಮಕ್ಕಳಿಗೆ 18 ವರ್ಷ ಪ್ರಾಯವಾದರೆ ಕಾನೂನಾತ್ಮಕವಾಗಿ ಏನು ಮಾಡಲು ಬರುವುದಿಲ್ಲ, ಆದ್ದರಿಂದ ಮೊದಲು ಹಿಂದೂಗಳು ಜಾಗೃತರಾಗಬೇಕು. ತಮ್ಮ ಮಕ್ಕಳನ್ನು ಸರಿಯಾಗಿ ಗಮನಿಸಬೇಕು. ತಂದೆ ತಾಯಿ ಒಪ್ಪಿಗೆ ಇಲ್ಲದೆ ಇಂತಹ ಮದುವೆಗಳಿಗೆ ಅವಕಾಶ ಇಲ್ಲ ಎನ್ನುವ ಕಾನೂನು ಜಾರಿಗೆ ಬರಬೇಕು. ಈ ಕಾನೂನು ಜಾರಿ ಮಾಡುವ ಸರ್ಕಾರ ಬರಬೇಕು. ಅದು ಕಾಂಗ್ರೆಸ್ ನಿಂದ ಆಗಲ್ಲ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.