ಕನ್ನಡಪ್ರಭ ವಾರ್ತೆ ಸಾಗರ
ರಾಜ್ಯ ಸರ್ಕಾರ ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರ ಪ್ರಾರಂಭಿಸಿ ರೈತರ ಹಿತ ಕಾಯುವುದನ್ನು ಬಿಟ್ಟು ಶಾಸಕರ ಖರೀದಿ ಕೇಂದ್ರ ಪ್ರಾರಂಭಿಸಿದೆ ಎಂದು ಮಾಚಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹೆಚ್.ಹಾಲಪ್ಪ ಲೇವಡಿ ಮಾಡಿದ್ದಾರೆ.ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಉಪಮುಖ್ಯಮಂತ್ರಿಗಳು ಅಧಿಕಾರ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ನಡುವೆ ರೈತರ ಹಿತ ಇವರಿಗೆ ಬೇಕಾಗಿಲ್ಲ ಎಂದು ಟೀಕಿಸಿದರು.
ಕಳೆದ ತಿಂಗಳು ಕಬ್ಬು ಬೆಳೆಗಾರರು ಬೆಲೆ ನಿಗಧಿಗೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಹೆಕ್ಟೇರಿಗೆ ೩೩೦೦ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇದುವೆರೆಗೆ ಯಾವ ಸಕ್ಕರೆ ಕಾರ್ಖಾನೆಗಳು ಸರ್ಕಾರ ಭರವಸೆ ನೀಡಿರುವ ಹಣವನ್ನು ನೀಡಿಲ್ಲ. ಇದರಿಂದ ಮುಖ್ಯಮಂತ್ರಿಗಳಿಗೆ ಮುಜುಗರವಾಗುತ್ತಿದೆ. ಕಾನೂನನ್ನು ಮುಂದಿಟ್ಟುಕೊಂಡು ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಫಸಲು ನಾಶವಾಗುತ್ತಿದ್ದರೂ ಈ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ. ನೆರೆ ಪರಿಹಾರ ಇನ್ನೂ ಕೊಟ್ಟಿಲ್ಲ. ಮಳೆಯಿಂದ ಮನೆ ಕಳೆದುಕೊಂಡವರಿಗೆ ಕೇವಲ ಒಂದು ಲಕ್ಷ ರು. ಮಾತ್ರ ನೀಡಲಾಗುತ್ತಿದೆ. ಹಿಂದೆ ಯಡಿಯೂರಪ್ಪನವರು ೫ ಲಕ್ಷ ರು. ಪರಿಹಾರ ನೀಡಿದ್ದರು. ಹಾಗಾಗಿ ರಾಜ್ಯ ಸರ್ಕಾರ ರೈತವಿರೋಧಿ ಹಾಗೂ ಜನವಿರೋಧಿಯಾಗಿದೆ ಎಂದರು.ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಲು ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಗಿದೆ. ಈತನಕ ಖರೀದಿ ಕೇಂದ್ರ ಪ್ರಾರಂಭ ಮಾಡಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಸಹ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಪ್ರಾರಂಭ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮೌನವಾಗಿದ್ದಾರೆ. ಸಾಗರ ತಾಲೂಕಿನಲ್ಲಿ ಬಗರ್‌ಹುಕುಂ ರೈತರಿಗೆ ಒಕ್ಕಲೆಬ್ಬಿಸಲು ನೋಟಿಸ್ ನೀಡಲಾಗುತ್ತಿದೆ. ಕೂಡಲೆ ರೈತರಿಗೆ ನೀಡುತ್ತಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು ಹಾಗೂ ಕೂಡಲೆ ಭತ್ತ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಗಿರೀಶ್ ಹೆಗಡೆ, ಪ್ರಮುಖರಾದ ಗಣೇಶ್ ಪ್ರಸಾದ್, ಟಿ.ಡಿ.ಮೇಘರಾಜ್, ರಮೇಶ್ ಹಾರೆಗೊಪ್ಪ, ಗಿರೀಶ್ ಗೌಡ, ಕೊಟ್ರಪ್ಪ, ರವೀಂದ್ರ, ನಾರಾಯಣಪ್ಪ, ಸುಜಯ್, ಜಿ.ಕೆ.ಭೈರಪ್ಪ, ಹರೀಶ್, ಗುರು ಇನ್ನಿತರರು ಉಪಸ್ಥಿತರಿದ್ದರು.ಆನೆಹಾವಳಿ ನಿಯಂತ್ರಣಕ್ಕೆ ಆಗ್ರಹ: ಇಂದು ಪ್ರತಿಭಟನೆ
ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯಲ್ಲಿ ಮತ್ತೆ ಆನೆಹಾವಳಿ ಪ್ರಾರಂಭವಾಗಿದೆ. ರೈತರ ಫಸಲು ನಾಶ ಮಾಡುತ್ತಿರುವ ಆನೆಹಾವಳಿಯನ್ನು ನಿಯಂತ್ರಿಸಲು ಒತ್ತಾಯಿಸಿ ಬಿಜೆಪಿ ವತಿಯಿಂದ ಶಿವಮೊಗ್ಗ ಗ್ರಾಮಾಂತರ ಮತ್ತು ಹೊಸನಗರ ತಾಲೂಕಿನ ರೈತರೊಂದಿಗೆ ಗುರುವಾರ ಅರಸಾಳು ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹಾಗೆಯೇ ತಾಲೂಕಿನಲ್ಲಿ ರೈತರಿಗೆ ಯಾವುದೇ ಸೌಲಭ್ಯ ಸಿಗದಿರುವುದು ಮತ್ತು ರೈತ ವಿರೋಧಿ ನೀತಿಯನ್ನು ಖಂಡಿಸಿ ನವೆಂಬರ್ ೨೯ರಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತ ಬಾಂಧವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹಾಲಪ್ಪ ಮನವಿ ಮಾಡಿದರು.