ಜನರಿಗೆ ರಕ್ಷಣೆ ಕೊಡಬೇಕಾದ ಸರ್ಕಾರ ಅಪರಾಧಿಗಳ ಮುಂದೆ ಮಂಡಿಯೂರಿ, ಅಪರಾಧಿಗಳಿಗೇ ರಕ್ಷಣೆ ಕೊಡುವ ಕೆಲಸ ಮಾಡುತ್ತಿದೆ
ಶಿರಸಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಹೆಚ್ಚಾಗಿದೆ. ಜನರಿಗೆ ರಕ್ಷಣೆ ಕೊಡಬೇಕಾದ ಸರ್ಕಾರ ಅಪರಾಧಿಗಳ ಮುಂದೆ ಮಂಡಿಯೂರಿ, ಅಪರಾಧಿಗಳಿಗೇ ರಕ್ಷಣೆ ಕೊಡುವ ಕೆಲಸ ಮಾಡುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಅವರು ಸೋಮವಾರ ಶಿರಸಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ. ಪ್ರಶ್ನಾತೀತವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮರ್ಥರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಲವಾರು ಜನರ ಕೊಲೆ ನಡೆಯಿತು. ಅದರಲ್ಲಿ ಮಂಗಳೂರು ಸುಹಾಸ್ ಹತ್ಯೆ ಕೂಡ ಒಂದು. ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರು ತಲೆ ತಗ್ಗಿಸುವ, ಜನರು ರೋಸಿ ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ಅಭಿವೃದ್ಧಿ ಇಲ್ಲ, ಬೆಲೆ ಏರಿಕೆಯನ್ನು ನಿತ್ಯವೂ ನೋಡುವಂತಾಗಿದೆ. ಆಡಳಿತಾತ್ಮಕ ನಿರ್ಧಾರ ಮಾಡಿ ಈ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮಾಡಲಿ, ರಾಜ್ಯದಲ್ಲಿ ನುಸುಳುಕೋರರಿಗೆ ವಾತಾವರಣ ಪೂರಕವಾಗಿರುವುದರಿಂದ ಅವುಗಳ ನಿಯಂತ್ರಣಕ್ಕೆ ಕಷ್ಟವಾಗುತ್ತದೆ. ಕಾಂಗ್ರೆಸ್‌ನವರು ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿಯವರನ್ನು ದೂರುವುದೇ ಕೆಲಸ ಮಾಡುತ್ತಿದೆ. ಅವರ ಎಲ್ಲ ದೌರ್ಬಲ್ಯ, ಭ್ರಷ್ಟಾಚಾರ ಅಸಮರ್ಥತೆಯ ತುತ್ತತುದಿಯ ಆಡಳಿತದ ಮಿತಿಯನ್ನು ಮುಚ್ಚಿಕೊಳ್ಳಲು ಕೇಂದ್ರದಲ್ಲಿ ನರೇಂದ್ರ ಮೋದಿ, ಆರ್‌ಎಸ್‌ಎಸ್, ಬಿಜೆಪಿಗೆ ಬೈಯುವುದು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಹೊರದೇಶದ ಜನ ಕೆಲಸ ಮಾಡುವ ಕುರಿತು ಮಾಹಿತಿ ದೊರೆತಿದೆ. ಜಿಲ್ಲಾಡಳಿತಕ್ಕೆ ಮಾತನಾಡಿದಾಗ ನಿಯಮ ಬಾಹಿರವಾಗಿ ಯಾರು ಇಲ್ಲ ಅಂತ ಹೇಳಿದ್ದಾರೆ. ನುಸುಳುಕೋರರು ಯಾವ ದೇಶದಿಂದ ಬಂದಿರಬಹುದು ಎಂದು ಗುಪ್ತಚರ ಇಲಾಖೆ ಮೂಲಕ ಸಂಬಂಧಪಟ್ಟವರಿಂದ ಮಾಹಿತಿ ಪಡೆಯಲಿ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.