ಹಿರೇಬೆಣಕಲ್ ಮೊರೇರ ತಟ್ಟೆ ಅಭಿವೃದ್ಧಿಗೆ ಮುಂದಾದ ರಾಜ್ಯ ಸರ್ಕಾರ

KannadaprabhaNewsNetwork |  
Published : Jun 17, 2025, 12:22 AM IST
45454 | Kannada Prabha

ಸಾರಾಂಶ

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಐತಿಹಾಸಿಕ ಪ್ರವಾಸಿತಾಣಗಳ ಅಭಿವೃದ್ಧಿಗೆ ರೂಪಿಸಿರುವ ದತ್ತು ಯೋಜನೆಯಡಿ ರಾಜ್ಯ ಸರ್ಕಾರ ಹಿರೇಬೆಣಕಲ್ ಶಿಲಾಸಮಾಧಿಗಳು ಇರುವ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಮುಂದಾಗಿ, ಯೋಜನೆ ರೂಪಿಸಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮತ್ತು ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣನ್ಯೂಸ್ ಆಯ್ಕೆ ಮಾಡಿದ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದಾಗಿರುವ ಹಾಗೂ ವಿಶ್ವದ ಪ್ರಾಗೈತಿಕ ಇತಿಹಾಸವನ್ನು ಗಟ್ಟಿಯಾಗಿ ಇಂದಿಗೂ ಹಿಡಿದುಕೊಂಡಿರುವ ಹಿರೇಬೆಣಕಲ್ ಮೊರೇರ ತಟ್ಟೆಗಳು (ಶಿಲಾ ಸಮಾಧಿಗಳಿರುವ) ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಐತಿಹಾಸಿಕ ಪ್ರವಾಸಿತಾಣಗಳ ಅಭಿವೃದ್ಧಿಗೆ ರೂಪಿಸಿರುವ ದತ್ತು ಯೋಜನೆಯಡಿ ರಾಜ್ಯ ಸರ್ಕಾರ ಹಿರೇಬೆಣಕಲ್ ಶಿಲಾಸಮಾಧಿಗಳು ಇರುವ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಮುಂದಾಗಿ, ಯೋಜನೆ ರೂಪಿಸಿದೆ. ಇದಕ್ಕೆ ಪೂರಕವಾಗಿಯೇ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಅವರು ಜೂ. 17ರಂದು ಹಿರೇಬೆಣಕಲ್‌ನಲ್ಲಿಯೇ ಇಡೀ ದಿನ ಅಭಿವೃದ್ಧಿಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ಸ್ಥಳೀಯವಾಗಿಯೇ ಇದ್ದುಕೊಂಡು, ಮಾಡಬಹುದಾದ ಅಭಿವೃದ್ಧಿಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಮತ್ತು ಸ್ಥಳೀಯರಿಂದಲೂ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಪ್ರವಾಸೋದ್ಯಮ ಸಚಿವರೊಬ್ಬರು ಹಿರೇಬೆಣಕಲ್ ಶಿಲಾಸಮಾಧಿಗಳು ವಿಶ್ವದಲ್ಲಿಯೇ ವಿಶಿಷ್ಟ ಎಂದು ಹೇಳಿರುವುದು ಹಾಗೂ ಇವುಗಳನ್ನು ನಾಡಿಗೆ ಪರಿಚಯಿಸುವ ಮತ್ತು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಹೇಳಿ, ಅಭಿವೃದ್ಧಿಗೆ ಮುಂದಾಗಿದ್ದಾರೆ.

ಶಿಲಾ ಸಮಾಧಿಗಳು ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದಲ್ಲಿ ಮತ್ತು ವಿಶ್ವದಲ್ಲಿಯೇ ವಿಶೇಷ ಮಹತ್ವ ಪಡೆದಿವೆ. ಈ ಕಾರಣಕ್ಕಾಗಿಯೇ ಈಗಾಗಲೇ ವಿಶ್ವಪರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಸರ್ಕಾರದ ನಿರ್ಲಕ್ಷ್ಯ:

ಇಂಥ ಮಹತ್ವದ ಸ್ಥಳಗಳನ್ನು ಪರಿಚಯಿಸುವ ಮತ್ತು ಅಭಿವೃದ್ಧಿಪಡಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಹಿರೇಬೆಣಕಲ್ ಸುತ್ತಮುತ್ತಲ ಜನರೇ ಇವುಗಳ ಸಂರಕ್ಷಣೆ ಮಾಡುತ್ತಿದ್ದಾರೆ ಮತ್ತು ಇವುಗಳ ಅಭಿವೃದ್ಧಿಗೆ ಅನೇಕ ಹೋರಾಟಗಳನ್ನೇ ಮಾಡಿದ್ದಾರೆಯಾದರೂ ರಾಜ್ಯ ಸರ್ಕಾರ ಕಣ್ಣು ತೆರೆದಿರಲಿಲ್ಲ. ಈಗ ಎಚ್ಚೆತ್ತು, ಅಭಿವೃದ್ಧಿಗೆ ಮುಂದಾಗಿರುವುದು ಸ್ಥಳೀಯರಲ್ಲಿ ಸಮಾಧಾನ ತಂದಿದೆ.

ಮಹತ್ವ:

ಮೊರೇರ ತಟ್ಟೆಗಳು ಎಂದು ಕರೆಯಲ್ಪಡುವ ಶಿಲಾ ಸಮಾಧಿಗಳು ಭಾರತದ ಕೆಲವೇ ಬೃಹತ್ ಶಿಲಾ ತಾಣಗಳಲ್ಲಿ ಒಂದಾಗಿವೆ. ಕ್ರಿ.ಪೂ. 800ರಿಂದ 200ರಲ್ಲಿ ನಿರ್ಮಾಣವಾಗಿವೆ ಎಂದು ಹೇಳಲಾಗುತ್ತಿದ್ದು, 3000 ವರ್ಷಗಳಷ್ಚು ಹಳೆಯದಾದ ಜೀವನ ನಿರ್ವಹಣೆಗೆ ಇಂದಿಗೂ ಸಾಕ್ಷಿಯಂತೆ ನಿಂತಿವೆ. ಈಗಾಗಲೇ ಹಿರೇಬೆಣಕಲ್ ಮೊರೇರ ತಟ್ಟೆಗಳನ್ನು ವಿಶ್ವಪಾರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

7 ಅದ್ಭುತಗಳಲ್ಲೊಂದು:

ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್ ಜಂಟಿಯಾಗಿ ಕರ್ನಾಟಕದ ಏಳು ಅದ್ಭುತಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಮೊರೇರ ತಟ್ಟೆಗಳು ಅಥವಾ ಶಿಲಾ ಸಮಾಧಿಗಳು ಸ್ಥಾನ ಪಡೆದಿರುವುದು ವಿಶೇಷ.

ಎಲ್ಲಿ ಬರುತ್ತವೆ:

ಗಂಗಾವತಿ ನಗರದಿಂದ 10 ಕಿಲೋ ಮೀಟರ್ ದೂರದಲ್ಲಿ ಮತ್ತು ಜಿಲ್ಲಾ ಕೇಂದ್ರ ಕೊಪ್ಪಳದಿಂದ 50 ಕಿಲೋ ಮೀಟರ್ ದೂರದಲ್ಲಿ ಇರುವ ಹಿರೇಬೆಣಕಲ್ ಗ್ರಾಮದ ಬಳಿಯಿಂದ ಸುಮಾರು ಮೂರು ಕಿಲೋ ಮೀಟರ್‌ ಬೆಟ್ಟವನ್ನು ಏರಿದರೆ ಈ ಶಿಲಾಸಮಾಧಿಗಳನ್ನು ನೋಡಬಹುದಾಗಿದೆ. 400ಕ್ಕೂ ಹೆಚ್ಚು ಶಿಲಾ ಗೋರಿಗಳು ಇದ್ದು, ಅನೇಕವು ನಶಿಸಿ ಹೋಗಿ, ಇಷ್ಟು ಉಳಿದುಕೊಂಡಿವೆ. ಇವುಗಳು ಜಗತ್ತಿನಲ್ಲಿಯೇ ಅತ್ಯಂತ ಪ್ರಾಗೈತಿಹಾಸವನ್ನು ಇಂದಿಗೂ ಸಾರುವ ಮಹತ್ವದ ಸಾಕ್ಷ್ಯಗಳಂತಿವೆ.ಆಗಬೇಕಾಗಿರುವುದು ಏನೇನು?

ವಿಶ್ವದಲ್ಲಿಯೇ ಪ್ರಾಗೈತಿಕ ಹಿರಿಮೆಯನ್ನು ಹಿಡಿದಿಟ್ಟುಕೊಂಡಿರುವ ಶಿಲಾ ಸಮಾಧಿಗಳನ್ನು ಹಾಳಾಗದಂತೆ ಸಂರಕ್ಷಣೆ ಮಾಡಬೇಕಾಗಿದೆ. ಸುತ್ತಲೂ ಬೇಲಿ ಹಾಕಬೇಕಾಗಿದೆ. ಅವುಗಳನ್ನು ನಿರಂತರವಾಗಿ ಹಗಲು, ರಾತ್ರಿ ಕಾಯುವ ಮೂಲಕ ನಿಧಿಗಳ್ಳರಿಂದ ರಕ್ಷಿಸಬೇಕಾಗಿದೆ. ಇಲ್ಲಿಗೆ ಸುಲಭವಾಗಿ ತೆರಳಲು ರಸ್ತೆ ನಿರ್ಮಾಣ, ಅವುಗಳ ಮಹತ್ವ ಸಾರುವ ಫಲಕ ಅಳವಡಿಕೆ ಹಾಗೂ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿವೆ.ಹಿರೇಬೆಣಕಲ್ ಶಿಲಾಸಮಾಧಿಗಳು ಕೇವಲ ರಾಜ್ಯವಲ್ಲದೆ ದೇಶದಲ್ಲಿಯೇ ವಿಶೇಷವಾಗಿವೆ. ಇವುಗಳ ಅಭಿವೃದ್ಧಿ ಅಗತ್ಯವಿದ್ದು ನಾಡಿಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.ಹಿರೇಬೆಣಕಲ್ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ತೆರಳುವ ಮಾರ್ಗ ಅತಿಕ್ರಮಣವಾಗಿದ್ದು ತೆರವಾಗಬೇಕು. ಯಾತ್ರಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಾಣ, ಗುಡ್ಡದ ಮೇಲೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು ಎಂದು ಸಂಶೋಧಕ ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ