ನವ ಮೈಸೂರು ಜಾರಿಗೆ ರಾಜ್ಯ ಸರ್ಕಾರ ಸಿದ್ಧತೆ: ಉನ್ನತಮಟ್ಟದ ಸಭೆ ನಡೆಸಿದ ಸಚಿವ ಬೈರತಿ

KannadaprabhaNewsNetwork |  
Published : Jun 13, 2025, 06:54 AM IST

ಸಾರಾಂಶ

ಬಂಡವಾಳ ಹೂಡಿಕೆಯಲ್ಲಿ ಬೆಂಗಳೂರಿನ ನಂತರದ ಸ್ಥಾನದಲ್ಲಿ ಮೈಸೂರು ನಗರವಿದ್ದು, ಇಲ್ಲಿ ಹೂಡಿಕೆಯಾಗುತ್ತಿರುವ ಬಂಡವಾಳದ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಬಂಡವಾಳ ಹೂಡಿಕೆಗೆ ನೆಚ್ಚಿನ ತಾಣವಾಗಿದ್ದು, ಉದ್ಯಮಿಗಳನ್ನು ಆಕರ್ಷಿಸುವ ದಿಸೆಯಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರುದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸಾಂಸ್ಕೃತಿಕ ನಗರ ಮೈಸೂರನ್ನು ಸುಸಜ್ಜಿತವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ‘ನವ ಮೈಸೂರು ನಿರ್ಮಾಣ’ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ. ಮೈಸೂರಿನ ಸುತ್ತಮುತ್ತಲ ಪ್ರದೇಶಗಳನ್ನು ನಗರ ವ್ಯಾಪ್ತಿಗೆ ತಂದು ಸರ್ವಾಂಗೀಣ ಅಭಿವೃದ್ಧಿಗೆ ಪೂರ್ವ ಸಿದ್ಧತೆ ನಡೆಸಿದೆ.

ಈ ಸಂಬಂಧ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರು ಗುರುವಾರ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಯೋಜನೆ ಬಗ್ಗೆ ಚರ್ಚೆ ನಡೆಸಿದರು. ಈ ಸಮಗ್ರ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಹೀಗಾಗಿ ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ. ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ತಂದು ಸಾಂಸ್ಕೃತಿಕ ನಗರವನ್ನು ಸಮಗ್ರ ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದು ಸಚಿವರು ತಿಳಿಸಿದರು.ಯೋಜನೆ ಕುರಿತು ಸಭೆಯಲ್ಲಿ ವಿವರಿಸಿದ ಸಚಿವರು, ರಾಜಧಾನಿ ಬೆಂಗಳೂರಿನಂತೆಯೇ ಮೈಸೂರು ಸಹ ವೇಗವಾಗಿ ನಡೆಯುತ್ತಿರುವ ನಗರ. ಇಲ್ಲಿ ಐಟಿ, ಬಿಟಿ ಸೇರಿ ಕೈಗಾರಿಕೆಗಳು, ವಸತಿ ಯೋಜನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಗರ ವಿಸ್ತರಣೆಯಾಗುತ್ತಿದ್ದು, ಇದಕ್ಕೆ ಪೂರಕವಾಗಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸುವತ್ತ ಸರ್ಕಾರ ಗಮನಹರಿಸಿದೆ ಎಂದು ತಿಳಿಸಿದರು.

ಯೋಜನೆಯಲ್ಲಿ ಏನಿರಲಿದೆ?:ಪ್ರಮುಖವಾಗಿ ಐದು ಆಧಾರಸ್ತಂಭಗಳನ್ನು ಗುರುತಿಸಲಾಗಿದೆ. ಉದ್ಯಮ ಮೈಸೂರು, ನಿಪುಣ ಮೈಸೂರು, ಸುಖೀವಾಸ ಮೈಸೂರು, ಪ್ರವಾಸೋದ್ಯಮ ಮೈಸೂರು ಮತ್ತು ಸಂಚಾರ ಮೈಸೂರು ಎಂಬ ಐದು ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಉದ್ಯಮ ಮೈಸೂರು ಕ್ಷೇತ್ರದ ಯೋಜನೆಯಲ್ಲಿ ಅತ್ಯಾಧುನಿಕ ಉತ್ಪಾದನಾ ಹಬ್ ಸ್ಥಾಪನೆ ಮಾಡುವುದು. ನಿಪುಣ ಮೈಸೂರು ವಲಯವನ್ನು ಸ್ಥಾಪಿಸಿ ಇದರ ಮೂಲಕ ಕೌಶಲ್ಯ ತರಬೇತಿ ಮತ್ತು ಕೌಶಲ್ಯಾಧಾರಿತ ಉದ್ಯೋಗಗಳಿಗೆ ಆದ್ಯತೆ ನೀಡುವುದು, ಉದ್ಯಮಶೀಲತ್ವ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು. ಸುಖೀವಾಸದಡಿ ಸುಸಜ್ಜಿತವಾದ ಸಮಗ್ರ ಟೆಕ್ ಸಿಟಿ ನಿರ್ಮಾಣ, ಪ್ರವಾಸೋದ್ಯಮ ಮೈಸೂರು ಅಡಿ ಸಮಗ್ರ ಆರೋಗ್ಯ, ಕ್ಷೇಮ ಮತ್ತು ಪುನಶ್ಚೇತನ ಕೇಂದ್ರದ ಆರಂಭ ಮತ್ತು ಸಂಚಾರ ಮೈಸೂರು ಎಂಬ ಹೆಸರಿನ ಯೋಜನೆಯಡಿ ಮೈಸೂರು ರ್‍ಯಾಪಿಡ್‌ ಮೆಟ್ರೋ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಬಂಡವಾಳ ಆಕರ್ಷಣೆಯ ಪ್ರಮುಖ ನಗರ:ಬಂಡವಾಳ ಹೂಡಿಕೆಯಲ್ಲಿ ಬೆಂಗಳೂರಿನ ನಂತರದ ಸ್ಥಾನದಲ್ಲಿ ಮೈಸೂರು ನಗರವಿದ್ದು, ಇಲ್ಲಿ ಹೂಡಿಕೆಯಾಗುತ್ತಿರುವ ಬಂಡವಾಳದ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಬಂಡವಾಳ ಹೂಡಿಕೆಗೆ ನೆಚ್ಚಿನ ತಾಣವಾಗಿದ್ದು, ಉದ್ಯಮಿಗಳನ್ನು ಆಕರ್ಷಿಸುವ ದಿಸೆಯಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.ಯಾವುದೇ ತೊಂದರೆ ಇಲ್ಲದೆ ಉದ್ಯಮ ಸ್ಥಾಪಿಸಲು ಹೂಡಿಕೆದಾರರಿಗೆ ತ್ವರಿತವಾಗಿ ಭೂಮಿ ಹಂಚಿಕೆ, ಆವಿಷ್ಕಾರ ಆಧಾರಿತ ನೀತಿಗಳನ್ನು ರೂಪಿಸುವುದು ಮತ್ತು ಮೂಲಸೌಕರ್ಯ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿದೆ ಎಂದು ಅವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''