ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿನಿತ್ಯ 12 ಸಾವಿರ ಕ್ಯುಸೆಕ್‌ನಂತೆ 15 ದಿನಗಳ ಕಾಲ ನೀರು ಹರಿಸುವಂತೆ ಸಿಡಬ್ಲ್ಯೂಸಿ ಹಾಗೂ ಸಿಡಬ್ಲ್ಯೂಆರ್‌ಎ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿತ್ತು. ಆದರೆ, ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳ ಹರಿವಿನ ಪ್ರಮಾಣ ಇಳಿಮುಖವಾದ ಕಾರಣ ಕೆ.ಆರ್.ಎಸ್.ಜಲಾಶಯದಿಂದಲೇ ನೀರು ಬಿಡಲಾಗುತ್ತಿದೆ.
ಶುಕ್ರವಾರ ರಾತ್ರಿ 9 ಗಂಟೆಯ ನಂತರ +80 ಮಟ್ಟದ ಏಳೆಂಟು ಗೇಟ್‌ಗಳ ಮೂಲಕ ನದಿಗೆ ಮತ್ತು ನಾಲೆಗಳಿಗೆ 6 ಸಾವಿರಕ್ಕೂ ಹೆಚ್ಚು ನೀರು ಹರಿಸಲಾಗಿದೆ.ಸದ್ಯ ಜಲಾಶಯದಲ್ಲಿ 109.75 ಅಡಿ ನೀರಿನ ಸಂಗ್ರಹವಿದ್ದು, ಒಳ ಹರಿವು 2274 ಕ್ಯುಸೆಕ್ ಇದೆ. ಶುಕ್ರವಾರ ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿ ಬೆಳಗಿನ ಹೊತ್ತಿಗೆ ಹೊರ ಹರಿವು 2699ಕ್ಕೆ ಸೀಮಿತಗೊಳಿಸಲಾಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿಲ್ಲ. ಬೆಳೆಗಳಿಗಾಗಿ ನದಿ ಮತ್ತು ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುಕ್ರವಾರ ರಾತ್ರಿ ಹರಿಯುತ್ತಿದ್ದುದ್ದನ್ನು ಗಮನಿಸಿದ್ದ ರೈತರು ನದಿಗೆ ಬಿಟ್ಟಿರುವ ನೀರು ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರ ಆದೇಶ ನೀಡಿರುವಂತೆ ರಾಜ್ಯ ಸರ್ಕಾರ ರೈತರು ಮತ್ತು ಸಂಘಟನೆಗಳ ವಿರೋಧದ ನಡುವೆಯೂ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ.