ರಾಜ್ಯ ಸರ್ಕಾರ ಪೆಟ್ರೋಲ್‌ ಮೇಲಿನ ತೆರಿಗೆ ಇಳಿಸಲಿ

KannadaprabhaNewsNetwork |  
Published : Oct 22, 2026, 02:00 AM IST
ಅರವಿಂದ ಬೆಲ್ಲದ | Kannada Prabha

ಸಾರಾಂಶ

ಪೆಟ್ರೋಲ್ ಬೆಲೆ ಲೀಟರ್‌ಗೆ ₹110.71 ಇದ್ದು, ಇದರಲ್ಲಿ ರಾಜ್ಯದ ವ್ಯಾಟ್ ₹25.44 ಇದೆ. ಕೇಂದ್ರದ ಅಬಕಾರಿ ಸುಂಕ ₹11.90 ಆಗಿದೆ. ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಯಲ್ಲಿಲ್ಲದ ಕಾರಣ ರಾಜ್ಯ ಸರ್ಕಾರ ತೆರಿಗೆ ಇಳಿಸಬೇಕು.

ಹುಬ್ಬಳ್ಳಿ:

ಎಥೆನಾಲ್ ಕುರಿತು ಸಚಿವ ಸಂತೋಷ ಲಾಡ್ ಸಂಪೂರ್ಣ ಮಾಹಿತಿ ಪಡೆದು ಮಾತನಾಡಬೇಕು. ಪೆಟ್ರೋಲ್ ಮೇಲಿನ ರಾಜ್ಯದ ತೆರಿಗೆ ಇಳಿಸಿ ಜನರಿಗೆ ಹೊರೆ ಕಡಿಮೆ ಮಾಡಬೇಕು ಅಥವಾ ತೆರಿಗೆ ಆದಾಯವನ್ನು ರೈತರಿಗೆ ಅನುಕೂಲವಾಗುವಂತೆ ಬಳಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಲಾಡ್‌ಗೆ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್ ಬೆಲೆ ಲೀಟರ್‌ಗೆ ₹110.71 ಇದ್ದು, ಇದರಲ್ಲಿ ರಾಜ್ಯದ ವ್ಯಾಟ್ ₹25.44 ಇದೆ. ಕೇಂದ್ರದ ಅಬಕಾರಿ ಸುಂಕ ₹11.90 ಆಗಿದೆ. ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಯಲ್ಲಿಲ್ಲದ ಕಾರಣ ರಾಜ್ಯ ಸರ್ಕಾರ ತೆರಿಗೆ ಇಳಿಸುವಂತೆ ಒತ್ತಾಯಿಸಿದರು.

ಎಥೆನಾಲ್ ದರದಲ್ಲಿ ವ್ಯತ್ಯಾಸ:

ಮೆಕ್ಕೆಜೋಳದ ಎಥೆನಾಲ್‌ಗೆ ಲೀಟರ್‌ಗೆ ₹71.84, ಸಕ್ಕರೆ ಆಧಾರಿತ ಎಥೆನಾಲ್‌ಗೆ ₹65.61, ಬಿ-ಹೆವಿ ಮೊಲಾಸಸ್‌ಗೆ ₹65.70 ಹಾಗೂ ಸಿ-ಹೆವಿ ಮೊಲಾಸಸ್‌ಗೆ ₹50.90 ದರವಿದೆ. ಉತ್ಪಾದನೆಯ ಮೂಲಕ್ಕೆ ಅನುಗುಣವಾಗಿ ದರ ಬದಲಾಗುವುದರಿಂದ ಎಥೆನಾಲ್ ಖರೀದಿ ದರವನ್ನು ಪೆಟ್ರೋಲ್ ಮಾರಾಟದ ಬೆಲೆಯೊಂದಿಗೆ ನೇರವಾಗಿ ಹೋಲಿಸುವುದು ಸರಿಯಲ್ಲ ಎಂದರು.

2013ರಲ್ಲಿ ಯುಪಿಎ ಸರ್ಕಾರ 82 ಕೋಟಿ ಲೀಟರ್ ಎಥೆನಾಲ್ ಖರೀದಿಸಲು ಜಾಗತಿಕ ಟೆಂಡರ್ ಕರೆದಿತ್ತು. ಎನ್‌ಡಿಎ ಸರ್ಕಾರ ಪೆಟ್ರೋಲ್ ಮಿಶ್ರಣಕ್ಕಾಗಿ ವಿದೇಶದಿಂದ ಎಥೆನಾಲ್ ಖರೀದಿಸುವುದನ್ನು ನಿರ್ಬಂಧಿಸಿದೆ. ಪೆಟ್ರೋಲ್‌ನಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣದಿಂದ ಸಕ್ಕರೆ ಕಾರ್ಖಾನೆಗಳಿಗೆ ಉತ್ತೇಜನ, ರೈತರ ಬಾಕಿ ಪಾವತಿಗೆ ನೆರವು ಹಾಗೂ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಳ್ಳಬೇಕು. ನೀರಿನ ಶುಲ್ಕ ಸೇರಿದಂತೆ ಇತರ ಹೊರೆ ಕಡಿಮೆ ಮಾಡಿ ಕಾರ್ಖಾನೆಗಳಿಗೆ ನೆರವಾಗಬೇಕು. ಪಂಜಾಬ್, ಉತ್ತರ ಪ್ರದೇಶದ ಕಬ್ಬಿನ ದರ ಪರಿಶೀಲಿಸಿ ಕರ್ನಾಟಕದ ರೈತರಿಗೂ ಅನುಕೂಲವಾಗುವ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ರಾಜ್ಯ ಮಾಧ್ಯಮ ಪ್ರಮುಖ ಪ್ರಮೋದ್ ಕಾರಕೂನ್ ಹಾಗೂ ರಾಜು ಕೊರ್ಯಾಣಮಠ ಇದ್ದರು.ಯತ್ನಾಳ ಸೇರಿ ಎಲ್ಲರಿಗೂ ಬಿಜೆಪಿಗೆ ಆಹ್ವಾನ

ಬಿಜೆಪಿ ತತ್ವ-ಸಿದ್ಧಾಂತಗಳಲ್ಲಿ ನಂಬಿಕೆಯಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಎಲ್ಲ ನಾಯಕರಿಗೂ ಪಕ್ಷದ ಬಾಗಿಲು ತೆರೆದಿದೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಎಲ್ಲರನ್ನೂ ಒಗ್ಗೂಡಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಅರವಿಂದ ಬೆಲ್ಲದ ಹೇಳಿದರು.ನಗರದಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಯತ್ನಾಳ ಅವರನ್ನು ಇತ್ತೀಚೆಗೆ ಭೇಟಿಯಾದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ತತ್ವ-ಸಿದ್ಧಾಂತದಲ್ಲಿ ನಂಬಿಕೆ ಇದ್ದ ಯಾರಾರು ಪಕ್ಷಕ್ಕೆ ಬರಬಹುದು ಎಂದು ಹೇಳಿದರು.

ಪಕ್ಷದಿಂದ ಹೊರಹೋದವರನ್ನು ಮರಳಿ ಪಕ್ಷಕ್ಕೆ ಕರೆತರುವ ಕುರಿತು ಮಾತುಕತೆ ನಡೆದಿರುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಯಾರು ಪಕ್ಷಕ್ಕೆ ಬರಬೇಕು ಅಥವಾ ಬೇಡ ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಯುವಕ ನಾಪತ್ತೆ
ಕಾರಟಗಿಯಲ್ಲಿ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ರಥೋತ್ಸವ ಸಂಭ್ರಮ