ಹಾವೇರಿ: ಕಬ್ಬು ಬೆಳೆಗಾರರು ಎತ್ತಿರುವ ಬೇಡಿಕೆಗಳು ಸಮಂಜಸವಾಗಿದ್ದು, ಅವರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದತ್ತ ಬೆರಳು ತೋರಿಸದೆ ಸ್ಪಂದಿಸುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕೂ ಇದೆ. ಈ ವಿಷಯದಲ್ಲಿ ಯಾವುದೇ ಕ್ರಮಕೈಗೊಳ್ಳದೆ ಮೌನವಾಗಿರುವುದು ಸರಿಯಲ್ಲ. ಕಬ್ಬಿನ ನ್ಯಾಯಯುತ ದರ ನಿಗದಿ, ರಿಕವರಿ ಪ್ರಮಾಣದಲ್ಲಿನ ಗೊಂದಲ ಹಾಗೂ ತೂಕದಲ್ಲಿನ ಅನ್ಯಾಯ ಸರಿಪಡಿಸಲು ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಕಬ್ಬಿನ ರಿಕವರಿ ಪ್ರಮಾಣವನ್ನು ಕಡಿಮೆ ತೋರಿಸಲಾಗುತ್ತಿದೆ ಎಂಬ ಆರೋಪಗಳಿವೆ. ಈ ಕುರಿತು ರೈತರಿಗೆ ಅನುಮಾನ ಉಳಿಯದಂತೆ, ಅವರ ಸಮ್ಮುಖದಲ್ಲಿಯೇ ರಿಕವರಿ ಪ್ರಮಾಣ ನಿರ್ಧರಿಸುವ ವ್ಯವಸ್ಥೆ ರೂಪಿಸಬೇಕು. ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಒಟ್ಟಾಗಿ ಚರ್ಚಿಸಿ ತೀರ್ಮಾನ ಕೈಗೊಂಡರೆ ಸಮಸ್ಯೆ ಬಗೆಹರಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಎಸ್ಎಪಿ ದರ ನಿಗದಿಪಡಿಸುವುದು, ಎಂಎಸ್ಪಿ ಪರಿಷ್ಕರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಚಿವರು ರೈತರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದಾರೆ. ಕಳೆದ 10 ವರ್ಷ ಎಂಎಸ್ಪಿ ಪರಿಷ್ಕರಣೆ ಆಗದ್ದರಿಂದ ಈಗ ಸಮಸ್ಯೆ ಉದ್ಭವಿಸಿದೆ. ದರ ನಿಗದಿ ಕುರಿತು ಆದಷ್ಟು ಬೇಗ ಸಮಿತಿ ರಚನೆಯಾಗಿ ಕಾರ್ಯಾಚರಣೆ ನಡೆಸಲಿ. ಕಬ್ಬಿನ ತೂಕದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸುವುದು ಹಾಗೂ ರಿಕವರಿ ಕುರಿತ ಗೊಂದಲ ನಿವಾರಿಸುವುದು ರಾಜ್ಯ ಸರ್ಕಾರದ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುತ್ತೇನೆ. ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದರು.ಉತ್ತರ ಕರ್ನಾಟಕಕ್ಕೆ ಸೇರಿಸಿ: ಹಾವೇರಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳನ್ನು ದಕ್ಷಿಣ ಕರ್ನಾಟಕದ ವ್ಯಾಪ್ತಿಗೆ ಸೇರಿಸಿರುವುದರಿಂದ ಅನ್ಯಾಯವಾಗುತ್ತಿದೆ. ಜಿಲ್ಲೆಯ ಎಲ್ಲ ಕಾರ್ಖಾನೆಗಳು ಕೃಷ್ಣ ಜಲಾನಯನ ಪ್ರದೇಶಕ್ಕೆ ಸಂಬಂಧಿಸಿರುವುದರಿಂದ ಅವುಗಳನ್ನು ಉತ್ತರ ಕರ್ನಾಟಕದ ವ್ಯಾಪ್ತಿಗೆ ಸೇರಿಸಬೇಕು. ಈ ಕುರಿತು ಕೇಂದ್ರದಲ್ಲಿ ರಚಿಸಿರುವ ಸಮಿತಿಯು ಕಾರ್ಯನಿರ್ವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಸುಪ್ರೀಂಕೋರ್ಟ್ಗೆ ಹೋಗಲಿ: ಮೀಸಲಾತಿ ಪ್ರಮಾಣ ಹೆಚ್ಚಳದ ನಿರ್ಧಾರವನ್ನು ಹೈಕೋರ್ಟ್ ರದ್ದುಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಶೇ.50ರ ಮಿತಿಯೊಳಗೆ ಮೀಸಲಾತಿ ಕಲ್ಪಿಸುವಂತೆ ನ್ಯಾಯಾಲಯ ಹೇಳಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ನಿಲುವನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಬೇಕು. ಈ ವಿಚಾರದಲ್ಲಿ ಸರ್ಕಾರಕ್ಕೆ ಅಗತ್ಯ ಸಲಹೆ ನೀಡಲು ನಾವು ಸಿದ್ಧರಿದ್ದೇವೆ ಎಂದರು.