ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಬೊಪ್ಪೇಗೌಡನಪುರ(ಬಿಜಿಪುರ) ಗ್ರಾಮದ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಸೇರಿದಂತೆ ಐದು ಪುಣ್ಯ ಕ್ಷೇತ್ರಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಮುಂದಾಗಿರುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಮಠದ ಸದಸ್ಯರು, ನೀಲಿಗಾರರು, ಭಕ್ತಾದಿಗಳು ಒತ್ತಾಯಿಸಿದರು.ತಾಲೂಕಿನ ಬೊಪ್ಪೇಗೌಡನಪುರ(ಬಿಜಿಪುರ)ದ ಮಂಟೇಸ್ವಾಮಿ ಮಠದ ಆವರಣದಲ್ಲಿ ಸರ್ಕಾರದ ನಡೆ ವಿರೋಧಿಸಿ ಮಠದ ಸದಸ್ಯರು, ನೀಲಿಗಾರರು, ಭಕ್ತಾದಿಗಳು ಸಭೆ ನಡೆಸಿ, ಕೂಡಲೇ ಪ್ರಾಧಿಕಾರ ರಚನೆ ನಿರ್ಧಾರ ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಕಳೆದ ಏ.24ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಬೊಪ್ಪೇಗೌಡನಪುರ, ಶ್ರೀಮಂಟೇಸ್ವಾಮಿ, ಮುಟ್ಟನಹಳ್ಳಿ ದೊಡ್ಡಮ್ಮತಾಯಿ, ಕಪ್ಪಡಿಕ್ಷೇತ್ರ ರಾಚಪ್ಪಾಜಿ, ಚಿಕ್ಕಲೂರು ಕ್ಷೇತ್ರ ಕುರುಬನ ಕಟ್ಟೆ ಕ್ಷೇತ್ರ ಮತ್ತು ಮಳವಳ್ಳಿ ತಾಲೂಕಿನ ಹೊನ್ನಾಯಕನ ಬೊಪ್ಪೇಗೌಡನಪುರ ಮಠಗಳನ್ನು ಒಳಗೊಂಡ ಐದು ಪುಣ್ಯಕ್ಷೇತ್ರಗಳನ್ನು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು.ಆ ಬಳಿಕ ಪುಣ್ಯಕ್ಷೇತ್ರಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಮತ್ತು ಕ್ಷೇತ್ರದ ಪ್ರಾಧಿಕಾರವನ್ನು ರಚಿಸಲು ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಮಾಲಾ ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದರು.
ಮಠದ ಭಕ್ತರು ಹಾಗೂ ನೀಲಗಾರರು ಮಾತನಾಡಿ, ಮಠದ ಸದಸ್ಯರ, ನೀಲಿಗಾರರ ಹಾಗೂ ಭಕ್ತರ ಅಭಿಪ್ರಾಯ ಪಡೆಯದೇ ಏಕಾಏಕಿ ಸರ್ಕಾರ ಪ್ರಾಧಿಕಾರ ರಚನೆ ನಿರ್ಣಯವನ್ನು ತೆಗೆದುಕೊಂಡಿರುವುದು ಲಕ್ಷಾಂತರ ಭಕ್ತರ ಸಮೂಹಕ್ಕೆ ನೋವು ಉಂಟು ತಂದಿದೆ.ಚರ್ಚ್ ಮತ್ತು ಮಸೀದಿಗಳ ಬಗ್ಗೆ ಮೊದಲು ಪ್ರಾಧಿಕಾರ ಮಾಡಲಿ, ಅದನ್ನ ಬಿಟ್ಟು ನಮ್ಮ ಪರಂಪರೆ ಇರುವಂತಹ ನೀಲಿಗಾರರ ಮಠ ಹಾಗೂ ದೇವಸ್ಥಾನಗಳನ್ನು ಪ್ರಾಧಿಕಾರ ಮಾಡುವುದು ಬೇಡ. ಅದರ ಬದಲು ಐದು ಪುಣ್ಯ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಅನುದಾನ ನೀಡಲಿ ಎಂದು ಆರ್.ಸಿದ್ದರಾಜು, ಸೋಮಶೇಖರ್, ಪ್ರಕಾಶ್, ಮಹದೇವಸ್ವಾಮಿ, ಮುರಳಿ, ಮಂಟಲಿಂಗಪ್ಪ, ಬಿ.ಕೆ.ನಿಂಗರಾಜು,ಶಾಂತಕುಮಾರ್, ಸಣ್ಣಪ್ಪ, ಮಲ್ಲಪ್ಪ, ಟಿ.ಎಂ.ಪ್ರಕಾಶ್, ಶಿವರಾಜ್ ಸೇರಿದಂತೆ ಹಲವರು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಮಂಟೇಸ್ವಾಮಿ ಮಠದ ಪೀಠಾಧಿಪತಿ ಜ್ಞಾನನಂದ ಚನ್ನರಾಜೇ ಅರಸು, ಎಂ.ಎಸ್.ವರ್ಚಸ್ವೀ ಶ್ರೀಕಂಠ ಸಿದ್ದಲಿಂಗರಾಜೇ ಅರಸು ಮತ್ತು ಬಿ.ಪಿ.ಭರತ್ ರಾಜೇಅರಸು ಅವರ ನೇತೃತ್ವದಲ್ಲಿ ಮೈಸೂರಿನ ಸಂಸದ ಯದುವೀರ್ ಒಡೆಯರ್ ಅವರ ಜೊತೆ ಸಭೆ ನಡೆಸಿ ಬಳಿಕ ಚಿಕ್ಕಲೂರಿನಿಂದ ಕೊಳ್ಳೇಗಾಲ ತಹಸೀಲ್ದಾರ್ ಕಚೇರಿಗೆ ಮನವಿ ಪತ್ರ ಹಾಗೂ ಬಿಜಿಪುರ ಮಂಟೇಸ್ವಾಮಿ ಮಠದಿಂದ ಮಳವಳ್ಳಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ನೀಡಿ, ಮತ್ತೊಂದು ದಿನ ಬೆಂಗಳೂರಿನ ಸ್ವಾತ್ರಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.ಬಿಜಿಪುರ ಮಂಟೇಸ್ವಾಮಿ ಮಠದ ಬಿ.ಪಿ.ಭರತ್ ರಾಜೇ ಅರಸು ಮಾತನಾಡಿ, ಸರ್ಕಾರದ ವತಿಯಿಂದ ನಡೆಯುತ್ತಿರುವ ಪ್ರಾಧಿಕಾರ ರಚನೆ ಕೂಡಲೇ ಕೈಬಿಡಬೇಕು. ಯಾರನ್ನು ಸಂಪರ್ಕಿಸದೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಆರು ಜಿಲ್ಲೆಗಳ 18 ಸಮುದಾಯಗಳ ನೀಲಿಗಾರರು, ಭಕ್ತರಿಗೆ ನೋವುಂಟು ಮಾಡಿದೆ. ಭಕ್ತರ ಪರಂಪರೆ ಉಳಿವಿಗಾಗಿ ಪ್ರಾಧಿಕಾರ ರಚನೆ ನಿರ್ಧಾರದಿಂದ ಹಿಂದೆಸರಿಯಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರಾಧಿಕಾರ ರಚನೆ ವಿರೋಧಿಸಿ ರಾಜ್ಯಪಾಲರಿಗೆ ಅಂಚೆ ಪತ್ರ ಕಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.ಯಜಮಾನರಾದ ಚಿಕ್ಕಲಿಂಗಯ್ಯ, ಪುಟ್ಟಾಳು, ಕರಿಬಂಟೆಯ್ಯ, ಚಂದ್ರು, ಸಿದ್ದು, ಅನಿಲ್ ಅರಸು, ಸೋಮೇಶ್, ಮಂಜು, ಶಿವಲಿಂಗಯ್ಯ, ನಿಜಲಿಂಗಯ್ಯ, ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.