ಹುಬ್ಬಳ್ಳಿ: ಒಳಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಮಹಾಮೋಸ, ಅಸ್ಪೃಶ್ಯ ಜನಾಂಗಕ್ಕೆ ಮಹಾ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ಸಂವಿಧಾನ ತಿದ್ದುಪಡಿ ಮಾಡುವ ಅಗತ್ಯವಿಲ್ಲ ಎಂದು ಈಗಾಗಲೇ ಅಂದರೆ 2020ರಲ್ಲೇ ಸುಪ್ರೀಂಕೋರ್ಟ್ ನ್ಯಾ.ಅರುಣಕುಮಾರ್ ಮಿಶ್ರಾ ಅವರು ಆದೇಶ ಮಾಡಿದ್ದಾರೆ. ಅದರ ಅನುಗುಣವಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ ಮತ್ತು ಎಸ್ಟಿ ಜನಾಂಗದ ಮೀಸಲಾತಿ ಹೆಚ್ಚಿಸಿ ಎಸ್ಸಿ ಮೀಸಲಾತಿ 15ರಿಂದ 17, ಎಸ್ಟಿ ಮೀಸಲಾತಿ 3ರಿಂದ 7ಕ್ಕೆ ಹೆಚ್ಚಿಸಿ ಕಳೆದ ವರ್ಷವೇ ಆದೇಶ ಮಾಡಿತ್ತು. 2022ರ ನವೆಂಬರ್ 1ರಿಂದ ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ಆದೇಶ ಜಾರಿಗೆ ಬಂದಿದೆ. ಅನುಷ್ಠಾನ ಕೂಡ ಆಗಿದೆ ಎಂದಿದ್ದಾರೆ.
2012ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ನಾವು ಒಳ ಮೀಸಲಾತಿಗೆ ಸಂವಿಧಾನ ತಿದ್ದುಪಡಿಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವು. ಕೇಂದ್ರದಲ್ಲಿ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆಮೇಲೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ಬದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆಗ ಒಳಮೀಸಲಾತಿ ಬಗ್ಗೆ ಯಾವುದೇ ಪ್ರಯತ್ನ ಮಾಡದೇ ಈಗ ಚುನಾವಣೆಗಾಗಿ ಕಪಟ ನಾಟಕ ಮಾಡುತ್ತಿದ್ದಾರೆ.ಒಳ ಮೀಸಲಾತಿಯನ್ನೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಮಾಡಿದೆ. ಮಾದಿಗ ಜನಾಂಗಕ್ಕೆ ಶೇ. 6, ಛಲವಾದಿ ಜನಾಂಗಕ್ಕೆ ಶೇ.5.5, ಲಂಬಾಣಿ, ಬೋವಿ, ಕೊರಮ, ಕೊರಚ ಜನಾಂಗಕ್ಕೆ ಶೇ.4.5 ಹಾಗೂ ಎಸ್ಸಿ ಅಲೆಮಾರಿ ಜನಾಂಗಕ್ಕೆ ಶೇ.1 ನೀಡಿದೆ. ಶೇ.17 ಮೀಸಲಾತಿ ಎಸ್ಸಿ ಜನಾಂಗಕ್ಕೆ ಹಂಚಿಕೆ ಮಾಡಲಾಗಿದೆ.