ರಾಜ್ಯದಲ್ಲಿ ಹೊರಗುತ್ತಿಗೆಗೂ ಮೀಸಲು

KannadaprabhaNewsNetwork |  
Published : May 21, 2024, 12:36 AM ISTUpdated : May 21, 2024, 06:40 AM IST
ವಿಧಾನ ಸೌಧ | Kannada Prabha

ಸಾರಾಂಶ

ಸರ್ಕಾರದ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನಡೆಯುವ ನೇಮಕಾತಿ ವೇಳೆ ಮೀಸಲಾತಿಗೆ 2023ರ ಡಿ.12ರಂದು ಸಂಪುಟ ಸಭೆ ನಿರ್ಧಾರ ಮಾಡಿದೆ.  

 ಬೆಂಗಳೂರು :  ರಾಜ್ಯ ಸರ್ಕಾರದ ಎಲ್ಲಾ ಇಲಾಖೆ, ಸ್ವಾಯತ್ತ ಸಂಸ್ಥೆಗಳು, ನಿಗಮ-ಮಂಡಳಿ, ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವಂತೆ ಹೊರ ಗುತ್ತಿಗೆ ಆಧಾರದ ಮೇಲೆ ಮಾಡಿಕೊಳ್ಳುವ ನೇಮಕಾತಿಯಲ್ಲೂ ಕಡ್ಡಾಯವಾಗಿ ಮೀಸಲಾತಿ ನಿಯಮ ಪಾಲಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸರ್ಕಾರದ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವಾಗ ಮೀಸಲಾತಿ ಜಾರಿ ಮಾಡುವ ಮಹತ್ವದ ತೀರ್ಮಾನವನ್ನು ಕಳೆದ ವರ್ಷದ ಡಿ.12ರಂದು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು.

ಅದೇ ಸಚಿವ ಸಂಪುಟ ಸಭೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅವಶ್ಯವಿರುವ 347 ಗ್ರೂಪ್‌ ಡಿ ನೌಕರರು ಮತ್ತು 102 ಡೇಟಾ ಆಪರೇಟರ್‌ ಸೇರಿ ಒಟ್ಟು 449 ಹುದ್ದೆಗಳಿಗೆ ಮೀಸಲಾತಿ ಅನ್ವಯ ಹೊರಗುತ್ತಿಗೆ ಅಡಿ ನೇಮಕ ಮಾಡಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು.

ಇದೀಗ ಮೇ 20ರಂದು ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿ ಹೊರಗುತ್ತಿಗೆ ನೇಮಕದಲ್ಲಿ ಪಾಲಿಸಬೇಕಾದ ಮೀಸಲಾತಿ ನಿಯಮಗಳನ್ನು ಪ್ರಕಟಿಸಿದೆ.

ಹೊರಗುತ್ತಿಗೆ ಮೀಸಲಾತಿ ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿ ಹಾಗೂ 20ಕ್ಕಿಂತ ಕಡಿಮೆ ಮಂದಿಯನ್ನು ನೇಮಿಸುವಾಗ ಅನ್ವಯವಾಗುವುದಿಲ್ಲ.

ಉಳಿದಂತೆ ಪ್ರತಿ ವರ್ಷ ಹೊರ ಸಂಪನ್ಮೂಲ ಏಜೆನ್ಸಿಗಳಿಂದ ಕೆಟಿಪಿಪಿ ಅಧಿನಿಯಮ 1999ರಂತೆ ಟೆಂಡರ್‌ ಕರೆಯುವಾಗ ಕಡ್ಡಾಯವಾಗಿ ಮೀಸಲಾತಿಯಂತೆ ಸಿಬ್ಬಂದಿಗಳನ್ನು ಪಡೆಯಲು ಷರತ್ತುಗಳನ್ನು ನಮೂದಿಸಬೇಕು. ಹೊರಗುತ್ತಿಗೆ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ಮೀಸಲಾತಿ ಜಾರಿ ಮಾಡಬೇಕು. ಜತೆಗೆ ಈ ಮೀಸಲಾತಿಯಲ್ಲಿ ಕನಿಷ್ಠ ಶೇ.33ರಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಟೆಂಡರ್‌ ಅಂಗೀಕರಿಸುವ ಪ್ರಾಧಿಕಾರವು ಕಡ್ಡಾಯವಾಗಿ ಮೀಸಲಾತಿಯಂತೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಜಾತಿ ಪ್ರಮಾಣಪತ್ರ ಮತ್ತು ಇತರೆ ದಾಖಲೆಗಳನ್ನು ಹೊರ ಸಂಪನ್ಮೂಲ ಏಜೆನ್ಸಿಯೇ ನಿರ್ವಹಣೆ ಮಾಡಬೇಕು. ಟೆಂಡರ್‌ ಅಂಗೀಕರಿಸುವ ಪ್ರಾಧಿಕಾರವು ಈ ಬಗ್ಗೆ ಪರಿಶೀಲಿಸಿ ಕಾರ್ಯಾದೇಶ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಒಂದು ವೇಳೆ ನೇಮಕಾತಿಗೊಂಡ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದೆ ಇದ್ದರೆ ಅದೇ ಪ್ರವರ್ಗದ ಅಭ್ಯರ್ಥಿಗಳನ್ನು ನೇಮಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಅಭ್ಯರ್ಥಿಯ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 60 ವರ್ಷ ಆಗಿರಬೇಕು. 

ಇನ್ನು ಈ ಮೀಸಲಾತಿಯು ಯಾವುದೇ ಕಾರಣಕ್ಕೂ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಲು ಪರಿಗಣಿಸುವುದಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಡಿ. ರಂದೀಪ್‌ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.ಮೀಸಲು ಜಾರಿ ಹೇಗೆ?ಹೊರಗುತ್ತಿಗೆ ಸೇವೆ ನೀಡುವ ಕಂಪನಿಗಳಿಗೆ ಮೀಸಲಾತಿ ಜಾರಿಗೆ ಷರತ್ತು ವಿಧಿಸಲಾಗುತ್ತದೆ. 

ಆಗ ಆ ಕಂಪನಿಗಳು ಎಸ್ಸಿ, ಎಸ್‌ಟಿ, ಒಬಿಸಿ, ಮಹಿಳಾ ಮೀಸಲಾತಿಯನ್ನು ಜಾರಿ ಮಾಡಬೇಕಾಗುತ್ತದೆ. ಟೆಂಡರ್‌ ಅಂಗೀಕರಿಸುವಾಗ ಸಂಬಂಧಿಸಿದ ಸಂಸ್ಥೆ ಮೀಸಲು ಪಾಲನೆಯನ್ನು ಖಚಿತಪಡಿಸಿಕೊಳ್ಳುತ್ತದೆ. ಈ ವೇಳೆ ಜಾತಿ ಪ್ರಮಾಣ ಪತ್ರ, ಇತರೆ ದಾಖಲೆಗಳನ್ನು ಹೊರಗುತ್ತಿಗೆ ಒದಗಿಸುವ ಸಂಸ್ಥೆಯೇ ನಿರ್ವಹಿಸಬೇಕು. ಒಂದು ವೇಳೆ ನೇಮಕಗೊಂಡ ಅಭ್ಯರ್ಥಿ ಕರ್ತವ್ಯಕ್ಕೆ ಹಾಜರಾಗದೇ ಇದ್ದರೆ ಅದೇ ವರ್ಗದ ಅಭ್ಯರ್ಥಿ ನೇಮಿಸಬೇಕು. ನೇಮಕವಾಗುವ ಅಭ್ಯರ್ಥಿ 18ರಿಂದ 60ರೊಳಗಿರಬೇಕು. ಈ ಸಿಬ್ಬಂದಿಯನ್ನು ಕಾಯಂ ಮಾಡುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಯಾವ ನೇಮಕಕ್ಕೆ ಮೀಸಲಾತಿ ಇಲ್ಲ?1. 45 ದಿನಗಳಿಂದ ಕಡಿಮೆ ಅವಧಿಯ ನೇಮಕಾತಿಗಳಿಗೆ. 2. 20ಕ್ಕಿಂತ ಕಡಿಮೆ ಸಿಬ್ಬಂದಿಯ ನೇಮಕಾತಿಯ ವೇಳೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ