ರಾಜ್ಯದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿ: ಶಾಸಕ ಜೆ.ಟಿ. ಪಾಟೀಲ

KannadaprabhaNewsNetwork |  
Published : Mar 12, 2024, 02:08 AM IST
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೀಳಗಿ ಶಾಸಕ ಹಟ್ಟಿ ಚಿನ್ನದ ಗಣಿ ನಿಯಮಿತ ಅಧ್ಯಕ್ಷ ಜೆ.ಟಿ. ಪಾಟೀಲ. ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಎಸ್ಪಿ ಅಮರನಾಥ ರೆಡ್ಡಿ ಇತರರು ಇದ್ದರು. | Kannada Prabha

ಸಾರಾಂಶ

ಕಲಾದಗಿಯ ಪ್ರವಾಸಿ ಮಂದಿರದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕಾ ಆಡಳಿತ, ತಾ.ಪಂ ಸಹಯೋಗದಲ್ಲಿ ಹಮ್ಮಿಕೊಂಡ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಡೀ ರಾಷ್ಟ್ರಕ್ಕೆ ಮಾದರಿಯಾಗಿವೆ ಎಂದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಡೀ ರಾಷ್ಟ್ರಕ್ಕೆ ಮಾದರಿಯಾಗಿವೆ ಎಂದು ಹಟ್ಟಿ ಚಿನ್ನದ ಗಣಿ ನಿಯಮಿತ ಅಧ್ಯಕ್ಷ, ಬೀಳಗಿ ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಕಲಾದಗಿಯ ಪ್ರವಾಸಿ ಮಂದಿರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ತಾಲೂಕಾ ಆಡಳಿತ, ತಾ.ಪಂ ಸಹಯೋಗದಲ್ಲಿ ಹಮ್ಮಿಕೊಂಡ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ಪ್ರಸಕ್ತ ಬಜೆಟ್‌ ನಲ್ಲಿ ₹ 58 ಸಾವಿರ ಕೋಟಿ ಮೀಸಲಿರಿಸಿದೆ.ಲೋಕಸಭೆ ಚುನಾವಣೆ ಬಳಿಕ ಬಂದ್‌ ಆಗಲಿವೆ ಎಂಬ ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಹೇಳಿದರು.

ಮತಕ್ಷೇತ್ರದಲ್ಲಿ ಈಗಾಗಲೇ ಸರ್ಕಾರದ ಯೋಜನೆಗಳು ಶೇ.99ರಷ್ಟು ಜನತೆಗೆ ತಲುಪಿವೆ. ತಾಂತ್ರಿಕ ದೋಷ, ಮಾಹಿತಿ ಕೊರತೆಯಿಂದಾಗಿ ಕೆಲವು ವಿಳಂಬಗೊಂಡಿದ್ದು, ಅವುಗಳನ್ನು ಕೂಡ ಸರಿಪಡಿಸಲಾಗುತ್ತಿದೆ. ಸರ್ಕಾರದ ಋಣ ನಿಮ್ಮ ಮೇಲಿದ್ದು, ನಿಮ್ಮ ಋಣ ನನ್ನ ಮೇಲಿದೆ. ಅದನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನ ನನ್ನದು. ಬೀಳಗಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಹೇಳಿದ ಅವರು, 2017-18ರ ಅವಧಿಯಲ್ಲಿ ಸರ್ಕಾರದಿಂದ ₹ 2000 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದಂತೆ ಈಗಲೂ ಮುಖ್ಯಮಂತ್ರಿಗಳನ್ನು ಕಾಡಿ ಬೇಡಿಯಾದರೂ ಅನುದಾನ ತಂದು ಮೂಲ ಸೌಕರ್ಯ ಒದಗಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.,ಮಹಿಳೆಯರ ಆರ್ಥಿಕ ಸುಧಾರಣೆಗಾಗಿ ಸರ್ಕಾರ ಜನಸ್ನೇಹಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಫಲಾನುಭವಿಗಳು ಈ ಯೋಜನೆಗಳನ್ನು ಪಡೆಯಲು ಮುಂಚಿನಂತೆ ಹಣ ಮತ್ತು ಸಮಯದ ವ್ಯರ್ಥವಾಗಲ್ಲ. ಗ್ರಾಮ್‌ ಒನ್‌, ಮೊಬೈಲ್ ಆ್ಯಪ್‌ ಗಳಂಥ ಆಧುನಿಕ ತಂತ್ರಜ್ಞಾನ ನೆರವಿನಿಂದ ಈ ಸೌಲಭ್ಯ ಪಡೆಯಬಹುದು. ಯೋಜನೆ ಪಡೆಯಲು ಮಧ್ಯವರ್ತಿಗಳ ಹಾವಳಿ ಇಲ್ಲ. ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈ ಯೋಜನೆಗಳು ಶೇ.98 ರಷ್ಟು ಅನುಷ್ಠಾನಗೊಂಡಿದೆ ಎಂದು ಹೇಳಿದರು.

ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಮಾತನಾಡಿ, ಕುಟುಂಬ ನಿರ್ವಹಣೆಯ ಹೆಚ್ಚಿನ ಜವಾಬ್ದಾರಿ ಮಹಿಳೆಯರದ್ದಾಗಿರುವುದರಿಂದ ಗೃಹಲಕ್ಷ್ಮೀ ಯೋಜನೆಯ ₹ 2 ಸಾವಿರ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ದೇಶ ಸುತ್ತು ಕೋಶ ಓದು ಎಂಬ ನಾಣ್ನುಡಿಯಂತೆ ಶಕ್ತಿ ಯೋಜನೆಯಡಿ ಸ್ತ್ರೀಯರು ಬೇರೆ ಬೇರೆ ಪ್ರದೇಶಗಳಿಗೆ ಸಂಚರಿಸುವಂತಾಗಿದೆ. ಆ ದೃಷ್ಟಿಯಿಂದ ಅಂಬೇಡ್ಕರ್‌ ಒದಗಿಸಿದ ಸಂವಿಧಾನದಲ್ಲಿ ಹೆಣ್ಣು-ಗಂಡು ಬೇಧವಿಲ್ಲದೆ ಮತ ಮಾತ್ರ ಅಮೂಲ್ಯವಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಪ್ರತಿ ದೇಶದ ಅಭಿವೃದ್ಧಿ ಅದರ ಸೂಚ್ಯಂಕದ ಮೇಲೆ ನಡೆಯುತ್ತಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿವಾಗಿ ಮುಂದುವರಿದಾಗ ಮಾತ್ರ ಸೂಚ್ಯಂತಕ ಪ್ರಮಾಣ ಹೆಚ್ಚಾಗಲು ಸಾಧ್ಯ. ಸರ್ಕಾರ ಮಹಿಳೆಯರಿಗೆ ಆದ್ಯತೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಶೇ.55ರಷ್ಟು ಮಹಿಳೆಯರು ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಗೆ 3 ಮಹಿಳಾ ಒಕ್ಕೂಟಗಳಿಗೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ ಎಂದರು.

ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಾಂಕೇತಿವಾಗಿ ಚೆಕ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಕಲಾದಗಿ ಗ್ರಾಪಂ ಅಧ್ಯಕ್ಷೆ ಕಾಕುಂಬಿ ರೋಣ, ಉಪಾಧ್ಯಕ್ಷ ಫಕೀರಪ್ಪ ಮಾದರ, ತಹಸೀಲ್ದಾರಗಳಾದ ಅಮರೇಶ ಪಮ್ಮಾರ, ಜೆ.ಬಿ. ಮಜ್ಜಗಿ, ತಾಪಂ ಇಒಗಳಾದ ಎಸ್.ಎಂ. ರೇವಡಿ, ಅಭಯಕುಮಾರ ಮೊರಬ, ಸಂತೋಷ ಮ್ಯಾಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ