ಬೈಪಾಸ್ ರಸ್ತೆಗೆ ಹರಿದುಹೋಗುತ್ತಿದೆ ಖಾನಾವಳಿ, ಗೂಡಂಗಡಿಗಳ ಕೊಳಚೆ । ಪಟ್ಟಣ ಪಂಚಾಯ್ತಿ ದಿವ್ಯ ನಿರ್ಲಕ್ಷ್ಯ
ವಿಶೇಷ ವರದಿಕನ್ನಡಪ್ರಭ ವಾರ್ತೆ ನಾಯಕನಹಟ್ಟಿ
ಜಿಲ್ಲೆಯ ಪ್ರಮುಖ ಯಾತ್ರಾ ಹಾಗೂ ಪುಣ್ಯ ತಾಣ ಖ್ಯಾತಿ ನಾಯಕನಹಟ್ಟಿ ಪಟ್ಟಣದಲ್ಲಿ ಬೀದಿ, ಬಡಾವಣೆ ಸಂಪರ್ಕ ರಸ್ತೆಗಳು ಒತ್ತುವರಿಯಾಗಿವೆ. ಈಚೆಗೆ ಪಟ್ಟಣದ ಪ್ರಮುಖ ಬೈಪಾಸ್ ರಾಜ್ಯ ಹೆದ್ದಾರಿಯಲ್ಲೂ ಕೂಡ ಭಾರಿ ಪ್ರಮಾಣದಲ್ಲಿ ಗೂಡಂಗಡಿಗಳು ಅಕ್ರಮವಾಗಿ ತಲೆಎತ್ತಿದ್ದು, ಕಿರಿದಾದ ರಸ್ತೆಗಳಿಂದಾಗಿ ಜನರ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.ನಾಯಕನಹಟ್ಟಿ ಗ್ರಾಮ ಪಂಚಾಯಿತಿ ಆಡಳಿತ ಕಾಲಾವಧಿಯಲ್ಲಿ ಇದ್ದ ಬಡಾವಣೆಗಳಲ್ಲಿ ವಿಶಾಲ ಜನಸಂಪರ್ಕ ರಸ್ತೆಗಳಿದ್ದವು. ಪಟ್ಟಣ ಪಂಚಾಯಿ ಮೇಲ್ದರ್ಜೆಗೇರಿ ಆರು ವರ್ಷದ ಈ ಕಾಲಾವಧಿಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಬಡಾವಣೆಗಳಲ್ಲಿ ರಸ್ತೆಗಳು ಒತ್ತುವರಿಯಾಗಿವೆ. ಈ ಒತ್ತುವರಿ ರೋಗ ಪ್ರಮುಖ ಬೀದಿ ರಸ್ತೆ ಸೇರಿ ಬೈಪಾಸ್ ಹೆದ್ದಾರಿ ರಸ್ತೆಗೂ ವಿಸ್ತರಿಸಿಕೊಂಡಿದೆ. ಅದರಲ್ಲೂ ಪಾದಗಟ್ಟೆ ಸಂಪರ್ಕಿಸುವ ರಸ್ತೆಗಳೇ ಹೆಚ್ಚು ಒತ್ತುವರಿಗೊಳಗಾಗಿರುವುದರಿಂದ ಜನರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಚಿಕ್ಕಕೆರೆ ಇಕ್ಕೆಲದಿಂದ ಬೈಪಾಸ್ ರಾಜ್ಯ ಹೆದ್ದಾರಿ ಪಾದಗಟ್ಟೆ ಸಂಪರ್ಕಿಸುತ್ತದೆ. ಅಲ್ಲಿಂದ ಎಸ್‌ಟಿಎಸ್‌ಆರ್ ಪ್ರೌಢಶಾಲೆ ಪಕ್ಕದಲ್ಲಿ ಹಾದು ವಾರ್ಡ್-6, 7, 8 ಹಾದು ಮಲ್ಲೂರಹಳ್ಳಿ ಜಿಲ್ಲಾ ರಸ್ತೆ ಸೇರುತ್ತದೆ. ಜಗಳೂರು, ಹೊಸಪೇಟೆ ಕಡೆಗಳಿಂದ ಭಾರೀ ವಾಹನಗಳು ಚಳ್ಳಕೆರೆ, ಬಳ್ಳಾರಿ ಕಡೆ ಹೋಗಲು ಈ ಬೈಪಾಸ್ ರಾಜ್ಯ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಭಾರೀ ಭಾರಹೊತ್ತ ಲಾರಿಗಳು ಪಟ್ಟಣ ಮಧ್ಯಭಾಗದಲ್ಲಿ ಪ್ರವೇಶಿಸುವುದನ್ನು ತಡೆಯಲಿಕ್ಕಾಗಿಯೇ ಈ ಬೈಪಾಸ್ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಬೈಪಾಸ್ ರಸ್ತೆಯನ್ನು ಗೂಡಂಗಡಿಗಳು ನುಂಗಿರುವ ಪರಿಣಾಮ ಅನಿವಾರ್ಯವಾಗಿ ಭಾರೀ ವಾಹನಗಳು ಪುನಃ ಪಟ್ಟಣದ ಮಧ್ಯಭಾಗದ ರಸ್ತೆಯಲ್ಲೇ ಸಂಚರಿಸುತ್ತಿವೆ!ಶ್ರೀಗುರು ತಿಪ್ಪೇರುದ್ರಸ್ವಾಮಿ ಪಾದುಕೆ ಸ್ಥಳ ಖ್ಯಾತಿಯ ಪಾದಗಟ್ಟೆ ಪೂಜಾ ಸ್ಥಳವಾಗಿದೆ. ಇಲ್ಲಿ ಪ್ರತಿ ಸೋಮವಾರ ಶ್ರೀಗಳ ಪಾದುಕೆ ಪೂಜಾ ಕೈಂಕರ್ಯ ಸಂಪ್ರದಾಯ ಕೂಡ ಇದೆ. ಪಾದಗಟ್ಟೆ ಸುತ್ತಮುತ್ತಲಿನ ಒಟ್ಟು 26 ಎಕರೆ 26 ಗುಂಟೆ ಜಾಗ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಸೇರಿದೆ ಎಂಬುದಾಗಿ ಪಹಣಿಯಲ್ಲಿ ದಾಖಲಿಸಿದೆ. ಸರ್ವೇ ನಂಬರ್ 190ರಲ್ಲಿದೆ. ದೇಗುಲಕ್ಕೆ ಸೇರಿದ ಈ ಭೂಮಿಯಲ್ಲಿ ಬಹುಪಾಲು ಆಸ್ಪತ್ರೆ, ನಾಡಕಚೇರಿ, ಪ್ರವಾಸಿ ಮಂದಿರ, ಬಿಎಸ್‌ಎನ್ನೆಲ್ ದೂರವಾಣಿ ಕಚೇರಿ, ಹಾಸ್ಟೆಲ್, ನೀರು ಶುದ್ಧೀಕರಣ ಘಟಕಕ್ಕೆ ಜಿಲ್ಲಾಡಳಿತ ಮಂಜೂರು ಮಾಡಿದೆ. ಉಳಿದಂತೆ ಪಾದಗಟ್ಟೆಗೆ ಕನಿಷ್ಠ 10 ಅಡಿ ಸುತ್ತಲ ವ್ಯಾಪ್ತಿ ಜಾಗವೂ ಉಳಿದಿಲ್ಲ. ಈಗ ಇರುವ ಕನಿಷ್ಠ ಸ್ಥಳಲ್ಲೂ ಕೂಡ ಒತ್ತುವರಿ ಮುಂದುವರಿದಿದೆ. ಒತ್ತುವರಿ ತಡೆಗಟ್ಟಲು ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತರ ಆಡಳಿತ ಇಲ್ಲ. ಪ್ರಭಾರ ಅಧಿಕಾರಿಗಳಿಗೆ ಒತ್ತುವರಿ ತಡೆಗಟ್ಟುವ ಆಸ್ಥೆ ಇಲ್ಲ. ಸ್ಥಳೀಯ ಆಡಳಿತ ನಿಷ್ಕ್ರಿಯಗೊಂಡಿರುವ ಕಾರಣ ಇರುವ ರಸ್ತೆಗಳಲ್ಲಿ ನಾಯಿಕೊಡೆಗಳಂತೆ ಗೂಡಂಗಡಿಗಳು ತಲೆ ಎತ್ತುತ್ತಲೇ ಇವೆ. ಜನಸಾಮಾನ್ಯರು ಈ ಅಕ್ರಮ ಪ್ರಶ್ನಿಸಿದರೆ ಗೂಡಂಗಡಿ ಮಾಲೀಕರು ದೌರ್ಜನ್ಯ ನಡೆಸುತ್ತಾರೆ ಎಂದು ಹೆಸರು ಹೇಳಲು ಇಚ್ಚಿಸದ ನಾಗರಿಕರು ಬೇಸರಿಸುತ್ತಾರೆ.
ಒಂದೆಡೆ ಸರ್ಕಾರಿ ಹಾಸ್ಟೆಲ್ ಕಾಂಪೌಂಡ್, ಎಸ್‌ಟಿಎಸ್‌ಆರ್ ಪ್ರೌಢಶಾಲೆ ಕಾಂಪೌಂಡ್ ಗೋಡೆಗಳಿಗೆ ತಾಕಿಕೊಂಡೇ ಖಾನಾವಳಿಗಳು, ಗೂಡಂಗಡಿಗಳು ಇವೆ. ಇವುಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ರಸ್ತೆಗೆ ಬೀಳುತ್ತದೆ. ಕಾಂಪೌಂಡ್‌ಗಳಿಗೆ ಅಂಟಿಕೊಂಡಿರುವ ಇಲ್ಲಿ ತರಹೇವಾರಿ ಜನರು ಬಂದು ಗಲಾಟೆ, ನಾನಾ ಮಾತುಕತೆ ನಡೆಸುತ್ತಾರೆ. ಇದರಿಂದ ಶಾಲೆ, ಹಾಸ್ಟೆಲ್ ವಿದ್ಯಾಭ್ಯಾಸಕ್ಕೆ ಕಿರಿಕಿರಿ ಉಂಟಾಗುತ್ತಿದೆ ಎಂಬುದಾಗಿ ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ಕೆರೆಕೋಡಿ ಕೂಡ ಒತ್ತುವರಿ!ಪಾದಗಟ್ಟೆಗೆ ಹೊಂದಿಕೊಂಡು ಚಿಕ್ಕಕೆರೆ ಕೋಡಿ ಇದೆ. ಕೆರೆ ತುಂಬಿದ ಕ್ಷಣದಲ್ಲಿ ಕೆರೆ ನೀರು ಕೋಡಿ ಮೂಲಕ ಹಿರೇಕೆರೆ ಹಳ್ಳ ಸೇರುತ್ತಿತ್ತು. ಅಂತಹ ಕೆರೆ ಕೋಡಿಯಲ್ಲಿ ಗೂಡಂಗಡಿಗಳು ತಲೆಎತ್ತಿದ್ದು, ಕೋಡಿಯ ಕುರುಹು ಇಲ್ಲದಂತಾಗಿದೆ. ಭದ್ರಾಮೇಲ್ದಂಡೆ ಯೋಜನೆಯಡಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಅಲ್ಲದೇ ಹೊಸಪೇಟೆಯ ತುಂಗಾಭದ್ರಾ ಜಲಾಶಯದ ಹಿನ್ನೀರು ಪೂರೈಕೆ ಯೋಜನೆಯಡಿ ಚಿಕ್ಕಕೆರೆಗೆ ಪೈಪ್‌ಲೈನ್ ಕಾಮಗಾರಿ ಕೂಡ ನಡೆದಿದೆ. ಆದರೆ, ಕೋಡಿ ಒತ್ತುವರಿ ತೆರವುಗೊಳಿಸದೇ ಜನಪ್ರತಿನಿಧಿ ಮಹಾಶಯರು ಕೆರೆ ತುಂಬಿಸುವಲ್ಲಿ ಗಮನಹರಿಸಿದ್ದಾರೆ. ಕೆರೆ ತುಂಬಿ ಕೋಡಿ ಒಡೆದರೆ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಜಿಲ್ಲಾಡಳಿತ ಕೂಡ ಕಿಂಚಿತ್ತೂ ಚಿಂತಿಸದಿರುವುದು ವಿಪರ್ಯಾಸ.ತಳ್ಳುಗಾಡಿಗಳಿಂದ ಸಂಜೆ ಒತ್ತುವರಿ !ಪಟ್ಟಣದಲ್ಲಿ ತೇರುಬೀದಿ ಸಂಜೆಯಾಯಿತೆಂದರೆ ತಳ್ಳುಗಾಡಿಗಳಿಂದ ಒತ್ತುವರಿಗೊಳಗಾಗುತ್ತದೆ. ಅದರಲ್ಲೂ ಹಳೇ ಆಸ್ಪತ್ರೆ ಜಾಗದಿಂದ ಪಾದಗಟ್ಟೆ ಸಂಪರ್ಕ ರಸ್ತೆ ಸಂಪೂರ್ಣ ತಳ್ಳುಗಾಡಿಗಳ ಒತ್ತುವರಿಯಿಂದ ಜನಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಪಟ್ಟಣ ಪಂಚಾಯಿತಿ ಕಚೇರಿ ಸಮ್ಮುಖದಲ್ಲೇ ಇದು ನಡೆಯುತ್ತಿದ್ದರೂ, ಪುರದ ಕಾನೂನು ಕಾಪಾಡಬೇಕಾದ ಅಧಿಕಾರಿಗಳು ಅಲ್ಲೇ ಪಾನಿಪೂರಿ, ಪಾವ್‌ಬಜಿ ತಿಂದು ತೇಗಿ ಮುಂದೆ ತೆರಳುತ್ತಾರೆ!
ಪ್ರತಿ ಸೋಮವಾರ ಸಂತೆ ದಿನ. ಸಂತೆ ಮೈದಾನಕ್ಕಾಗಿ ಜಾಗ ಮೀಸಲಾಗಿದ್ದರೂ, ಜಗಳೂರು-ಬಳ್ಳಾರಿ, ಪಾದಗಟ್ಟೆ ರಸ್ತೆಗಳಲ್ಲೇ ಸಂತೆ ನಡೆಯುತ್ತದೆ. ಆಗಲೂ ಪಟ್ಟಣ ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿದ ಅಧಿಕಾರಿಗಳು ಪಾವು ಕೆಜಿ ತರಕಾರಿ ತೂಗಿಸಿಕೊಂಡು ಇದು ನಮ್ಮ ಹೊಣೆ ಅಲ್ಲ ಎನ್ನುವಂತೆ ಮರೆಯಾಗುತ್ತಾರೆ. ಆದರೆ, ಇದೇ ತಳ್ಳುಗಾಡಿ, ಗೂಡಂಗಡಿ ಮುಂಗಟ್ಟುಗಳಿಂದ ಕರ ವಸೂಲಿ ಮಾಡುತ್ತಾರೆ. ಅವರಿಂದ ಜನ ಸಾಮಾನ್ಯರು ಅನುಭವಿಸುತ್ತಿರುವ ಕಿರಿಕಿರಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.----ಶಾಸಕರು ಗಮನಹರಿಸಲಿಮಾರ್ಚ್ 26 ರಂದು ಶ್ರೀಗುರು ತಿಪ್ಪೇರುದ್ರಸ್ವಾಮಿ ಮಹಾರಥೋತ್ಸವ ಜರುಗಲಿದೆ. ಮಹಾರಥ ಪಾದಗಟ್ಟೆ ಬಳಿಯೇ ಬಂದು ಮರಳುವುದು ಸಂಪ್ರದಾಯ. ಆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಸಂಚರಿಸಲು ಬೈಪಾಸ್ ರಸ್ತೆಯೇ ಏಕೈಕ ಮಾರ್ಗ. ಈಗ ಆ ರಸ್ತೆ ಅಗಲೀಕರಣ ಮಾಡಬೇಕಿದೆ. ಇಲ್ಲದಿದ್ದರೆ ಅವಘಡ ಕಟ್ಟಿಟ್ಟ ಬುತ್ತಿ. ಶಾಸಕರು ಇತ್ತ ತಕ್ಷಣ ಗಮನಹರಿಸಲಿ.
- ಜನಾರ್ಧನ ನಾಯಕ ಮುಖಂಡ, ನಾಯಕನಹಟ್ಟಿ.