ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಎಸೋಸಿಯೇಶನ್ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಎಸೋಸಿಯೇಶನ್ ಆಶ್ರಯದಲ್ಲಿ ರಾಜ್ಯ ಮಟ್ಟದ ಯೋಯೆಕ್ಸ್ ಸನ್‌ರೈಸ್ ರ‍್ಯಾಕಿಂಗ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಉರ್ವದ ನೂತನ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡಿದೆ.ಈ ಕ್ರೀಡಾಕೂಟದಲ್ಲಿ 19 ವರ್ಷ ವಯೋಮಿತಿಯ ಹಾಗೂ ಸೀನಿಯರ್ಸ್ ವಿಭಾಗದ ಪುರುಷ ಮತ್ತು ಮಹಿಳೆಯರ ಸಿಂಗಲ್ಸ್, ಡಬಲ್ಸ್ ಮತ್ತು ಮಿಕ್ಸಡ್ ಡಬಲ್ಸ್ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ರಾಜ್ಯದ ವಿವಿಧೆಡೆಗಳಿಂದ ಸುಮಾರು 1 ಸಾವಿರಕ್ಕೂ ಅಧಿಕ ಆಟಗಾರರು ಭಾಗವಹಿಸಿದ್ದಾರೆ.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕ್ರೀಡಾ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೊಡುಗೆ ಅಪಾರ. ರಾಜ್ಯ ಸರ್ಕಾರ ಕೂಡ ಕ್ರೀಡೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳ, ಒಳಾಂಗಣ ಕ್ರೀಡಾಂಗಣ, ಕ್ರಿಕೆಟ್ ಮೈದಾನ ಎಲ್ಲವೂ ಕ್ರೀಡಾಪಟುಗಳಿಗೆ ಪೂರಕವಾಗಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸಾಕಷ್ಟು ಪಂದ್ಯಾಟಗಳು ನಡೆಯಬೇಕು. ಇಲ್ಲಿನ ಪ್ರತಿಭೆಗಳು ಬರೀ ರಾಜ್ಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಛಾಪು ಮೂಡಿಸುವಂತಾಗಬೇಕು ಎಂದು ಆಶಿಸಿದರು.
ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಕ್ರೀಡಾಂಗಣ ಇದ್ದು, ವರ್ಷಪೂರ್ತಿ ಕ್ರೀಡಾ ಚಟುವಟಿಕೆಗಳು ನಡೆಯಬೇಕು. ಕಬಡ್ಡಿ, ಬ್ಯಾಡ್ಮಿಂಟನ್‌ಗೆ ಸೇರಿದಂತೆ ಕ್ಯಾಲೆಂಡರ್ ಆಫ್ ಇವೆಂಟ್‌ಗಳು ನಡೆಯಬೇಕು ಎಂದು ಸಲಹೆ ನೀಡಿದರು.ಮುಖ್ಯಮಂತ್ರಿಗಳ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಯೆನೆಪೋಯ ವಿವಿಯ ಪ್ರೊ ಚಾನ್ಸಿಲರ್ ಫರಾದ್ ಯೆನೆಪೋಯ, ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಮಂಗಳೂರು ಸ್ಮಾರ್ಟ್ ಸಿಟಿ ಜಿಎಂ ಅರುಣ್ ಪ್ರಭಾ, ಕರ್ನಾಟಕ ಬ್ಯಾಡ್ಮಿಂಟನ್ ಎಸೋಸಿಯೇಶನ್ ಅಧ್ಯಕ್ಷ ಮನೋಜ್ ಕುಮಾರ್, ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಎಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಎಸೋಸಿಯೇಶನ್ ಕಾರ್ಯದರ್ಶಿ ಸುಪ್ರೀತ್ ಆಳ್ವ ಮತ್ತಿತರರು ಇದ್ದರು.