10ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬಗರ್‌ಹುಕುಂ ಹೋರಾಟ: ಡಾ.ಸುನೀತ್ ಕುಮಾರ್

KannadaprabhaNewsNetwork | Published : Mar 3, 2025 1:50 AM

ಸಾರಾಂಶ

ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಕನಿಷ್ಠ ಬೆಂಬಲ ಬೆಲೆ ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಮಾ.10 ರಂದು ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ರಾಜ್ಯಮಟ್ಟದ ರೈತರ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ.

- ಜಿಲ್ಲೆಯಿಂದ 500 ರೈತರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಕನಿಷ್ಠ ಬೆಂಬಲ ಬೆಲೆ ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಮಾ.10 ರಂದು ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ರಾಜ್ಯಮಟ್ಟದ ರೈತರ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ.

ಎಐಕೆಕೆಎಂಎಸ್ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಸುನೀತ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಸಮಾವೇಶ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ಸಂಘಟನೆ ರಾಜ್ಯ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ, ರಾಜ್ಯ ಮಂಡಳಿ ಸದಸ್ಯೆ ಡಾ.ದೀಪಾ ಪಾಲ್ಗೊಳ್ಳುವರು. ಎಂ.ಶಶಿಧರ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಚಲೋ ಹೋರಾಟದಲ್ಲಿ ಜಿಲ್ಲೆಯಿಂದ ಸುಮಾರು 500 ಜನ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ಕೊಡಬೇಕು. ನರೇಗಾ ಯೋಜನೆಯಡಿ 200 ಮಾನವ ದಿನಗಳ ಕೆಲಸ ಹಾಗೂ ₹600 ಕನಿಷ್ಠ ಕೂಲಿ ನಿಗದಿಪಡಿಸಬೇಕು. ಹೊಸ ಕೃಷಿ ಮಾರುಕಟ್ಟೆ ನೀತಿ ಕೈಬಿಡಬೇಕು. ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧಗೊಳಿಸಬೇಕು. ಬೀಜ, ರಸಗೊಬ್ಬರ, ಕೀಟನಾತಕಗಳಂತಹ ಕೃಷಿ ಒಳಸುರಿಗಳನ್ನು ಅತ್ಯಂತ ಕಡಿಮೆ ದರದಲ್ಲಿ ಸರಬರಾಜು ಮಾಡಬೇಕು. ವಿದ್ಯುತ್ ಕಾಯ್ದೆ-2023ನ್ನು ಕೂಡಲೇ ರದ್ದುಗೊಳಿಸಿ, ವಿದ್ಯುತ್ ಖಾಸಗೀಕರಣ ಹಿಂತೆಗೆದುಕೊಳ್ಳಬೇಕು. ರೈತರ ಸಾಲ ಮನ್ನಾ ಮಾಡುವ ಜೊತೆಗೆ 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ನೀಡಬೇಕು ಎಂದು ಹಕ್ಕೊತ್ತಾಯ ಮಾಡಲಾಗುವುದು ಎಂದರು.

ಸಂಘಟನೆಯ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತ, ಸೋಮಶೇಖರಪ್ಪ, ಮಂಜುನಾಥ ರೆಡ್ಡಿ, ಮಂಜಪ್ಪ ಇದ್ದರು.

Share this article