ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷರು, ಶ್ರೀಗಳು, ಗಣ್ಯರು, ಯುವ ಸಾಹಿತಿಗಳನ್ನು ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 80ನೇ ಜಯಂತ್ಯುತ್ಸವ ಹಾಗೂ 12ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷೆ ಚಿನಕುರಳಿಯ ಎಸ್‌ಟಿಜೆ ಪದವಿಪೂರ್ವ ಕಾಲೇಜಿನ ಕು.ಕೆ.ಎಂ.ಅಪೇಕ್ಷ, ಉದ್ಘಾಟಕಿ ಶಿವಮೊಗ್ಗದ ಕೆಮ್ಮನಾಳಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕು.ಸುಷ್ಮಾ, ಹಿರಿಯ ಸಾಹಿತಿ ಹಾಗೂ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾಡೋಜ ಡಾ.ಗೊ.ರು.ಚನ್ನಬಸಪ್ಪ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ನಿಶ್ಚಿತ ಎಂ.ಶೆಟ್ಟಿ ಹಾಗೂ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರನ್ನು ಮಂಗಳವಾದ್ಯ ,ಶ್ರೀಮಠದ ಮಕ್ಕಳ ವೀರಗಾಸೆ ಕುಣಿತದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಧ್ವಜಾರೋಹಣ :ಬೆಂಗಳೂರಿನ ಮಲ್ಲೇಶ್ವರಂ ಕ್ಲೂನಿ ಕಾನ್ವೆಂಟ್ ಹೈಸ್ಕೂಲ್‌ನ ಬಿ.ಸಿ.ವೈನವಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರೆ, ಮಂಡ್ಯದ ಚಿನ್ಮಯಿ ವಿದ್ಯಾಸಂಸ್ಥೆಯ ಮೃಡಾನಿ ಎಸ್.ಪಾಟೀಲ್ ನಾಡಧ್ವಜಾರೋಹಣ ನೆರವೇರಿಸಿದ ಬಳಿಕ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು.
ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಚಾ.ನಾ.ಅಶೋಕ್ ಮತ್ತು ಬೆಂಗಳೂರು ನಗರ ಜಿಲ್ಲೆಯ ಕಸಾಪ ಅಧ್ಯಕ್ಷ ಪ್ರಕಾಶಮೂರ್ತಿ ಮಾತನಾಡಿದರು. ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಎನ್.ಮಂಜುನಾಥ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ಶ್ರೀಮಠದ ಚೈತನ್ಯನಾಥಸ್ವಾಮೀಜಿ, ಬ್ರಹ್ಮಚಾರಿ ಸಾಯಿಕೀರ್ತಿನಾಥಸ್ವಾಮೀಜಿ, ರಾಮಚಂದ್ರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.ವಿಚಾರ ಮತ್ತು ಕವಿಗೋಷ್ಠಿ:
ಉದ್ಘಾಟನಾ ಕಾರ್ಯಕ್ರಮದ ನಂತರ ಶ್ರೀಮಠದ ಬಿಜಿಎಸ್ ಸಭಾ ಭವನದಲ್ಲಿ ಸಾಗರದ ಅವಿನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕು.ಬಿ.ಬಿಂದು ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಬೆಟ್ಟದ ಮೇಲ್ಭಾಗದ ಗುರುಭವನದಲ್ಲಿ ಸಿದ್ದಾಪುರದ ಸರಸ್ವತಿ ವಿದ್ಯಾಲಯದ ಕು.ವಿಧಾತ್ರಿ ರವಿಶಂಕರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಆದಿಶಕ್ತಿ ಸಮುದಾಯ ಭವನದಲ್ಲಿ ಕಲಬುರ್ಗಿಯ ಅಜೀಮ್ ಪ್ರೇಮ್‌ಜಿ ಶಾಲೆಯ ಕು.ಜಿ.ಪ್ರೀತಮ್ ಅಧ್ಯಕ್ಷತೆಯಲ್ಲಿ ಕಥಾಗೋಷ್ಠಿ ನಡೆಯಿತು.