ಭಟ್ಕಳ ಬೇಂಗ್ರೆಯಲ್ಲಿ 21ರಿಂದ ರಾಜ್ಯಮಟ್ಟದ ಮೀನುಗಾರಿಕಾ ದಿನಾಚರಣೆ, ಮತ್ಸ್ಯಮೇಳ

KannadaprabhaNewsNetwork |  
Published : Nov 20, 2024, 12:35 AM IST
ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿದರು. | Kannada Prabha

ಸಾರಾಂಶ

ಭಟ್ಕಳದ ಬೇಂಗ್ರೆಯ ಗಾಲ್ಫ್ ಮೈದಾನದಲ್ಲಿ ನ. 21ರಿಮದ 23ರ ವರೆಗೆ ರಾಜ್ಯಮಟ್ಟದ ಮತ್ಸ್ಯ ಮೇಳದಲ್ಲಿ ರಾಜ್ಯ ಮತ್ತು ಕೇಂದ್ರ ಇಲಾಖೆಗಳ ಸುಮಾರು ೬೦ ಮಳಿಗೆಗಳು, ಖಾಸಗಿ ಕೈಗಾರಿಕೆಗಳು, ಅಕ್ವೇರಿಯಂ ಮತ್ತು ಮೀನು ಕೃಷಿಗೆ ಅಗತ್ಯವಿರುವ ಪರಿಕರಗಳ ವಿತರಕರು, ಉತ್ಪನ್ನಗಳು ಮತ್ತು ಚಟುವಟಿಕೆಗಳ ಪ್ರದರ್ಶನ ನಡೆಯಲಿದೆ.

ಭಟ್ಕಳ: ವಿಶ್ವವಿಖ್ಯಾತ ಮುರುಡೇಶ್ವರ ಸಮೀಪದ ಬೇಂಗ್ರೆಯ ಗಾಲ್ಫ್ ಮೈದಾನದಲ್ಲಿ ನ. 21ರಿಂದ 23ರ ವರೆಗೆ ವಿಶ್ವ ಮೀನುಗಾರಿಕೆ ದಿನಾಚರಣೆ ಮತ್ತು ರಾಜ್ಯಮಟ್ಟದ ಮತ್ಸ್ಯ ಮೇಳ- 2024 ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.ಬೇಂಗ್ರೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ. 21ರಂದು ವಿಶ್ವ ಮೀನುಗಾರಿಕೆ ದಿನಾಚರಣೆ ಮತ್ತು ರಾಜ್ಯಮಟ್ಟದ ಮತ್ಸ್ಯ ಮೇಳ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಹಲವು ಶಾಸಕರು, ಅಧಿಕಾರಿಗಳು, ಗಣ್ಯರು ಪಾಲ್ಗೊಳ್ಳುವರು ಎಂದರು.ಈ ಬಾರಿ ವಿಶ್ವ ಮೀನುಗಾರಿಕಾ ದಿನವನ್ನು ಕರಾವಳಿ ಜಿಲ್ಲೆಯ ಭಟ್ಕಳದಲ್ಲಿ ಆಚರಿಸಿ ಮೀನುಗಾರಿಕೆಯ ಬಗ್ಗೆ ಮತ್ತಷ್ಟು ತಿಳಿವಳಿಕೆ ನೀಡಲು ನಿರ್ಧರಿಸಲಾಗಿದೆ. ಮೀನುಗಾರಿಕಾ ದಿನವನ್ನು ಕೇವಲ ಮೀನುಗಾರರಿಗಾಗಿ, ಮೀನು ತಿನ್ನುವವರಿಗಾಗಿ ಮಾತ್ರ ಅಲ್ಲ, ಇದು ಎಲ್ಲ ಸಮುದಾಯದವರನ್ನು ಒಟ್ಟುಗೂಡಿಸುವ ಸಲುವಾಗಿ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಅನೇಕ ವೈವಿಧ್ಯತೆಯನ್ನು ಅಳವಡಿಸಿಕೊಳ್ಳಲಾಗಿದೆ. ಇಲ್ಲಿ ಮೀನುಗಾರಿಕೆ, ಮೀನುಗಾರಿಕೆಯ ಕುರಿತು ಅರಿವು ಮೂಡಿಸುವುದರೊಂದಿಗೆ, ಮನೆಯಲ್ಲಿ ಮೀನು ಸಾಕಾಣಿಕೆ ಮಾಡುವವರಿಗೆ, ಆಕ್ವೇರಿಯಂ ಕುರಿತು, ಮೀನು ಕೃಷಿಯ ಕುರಿತು ಆಸಕ್ತಿ ಇರುವವರಿಗೆ ಕೂಡಾ ಅನುಕೂಲ ಮಾಡಿಕೊಲಾಗಿದೆ ಎಂದರು.ರಾಜ್ಯದ ಬೇರೆ ಬೇರೆ ಕಡೆಗಳಿಂದ ೫ ಲಕ್ಷ ಜನರು ಈ ಮೂರು ದಿನಗಳ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮೇಳದಲ್ಲಿ ವಿವಿಧ ಸ್ಟಾಲ್‌ಗಳನ್ನು ಹಾಕಲಾಗುತ್ತಿದ್ದು, ಅಲ್ಲಿಯೂ ವಿವಿಧ ಬಗೆಯ ಮೀನು ಖಾದ್ಯ ಲಭ್ಯವಿರುತ್ತದೆ. ಅಲ್ಲದೇ ಬಂದವರಿಗೆ ಉಚಿತ ಊಟದ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಮೀನುಗಾರಿಕೆಯಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು, ಉತ್ತರ ಕನ್ನಡ ಮುಂದಿರುವಂತೆ, ಒಳನಾಡು ಮೀನುಗಾರರು ಕೂಡಾ ಮುಂದೆ ಇದ್ದಾರೆ. ಒಂದು ಹಂತದಲ್ಲಿ ಕರಾವಳಿ ಹಾಗೂ ಒಳನಾಡು ಮೀನುಗಾರಿಕೆ ಸರಿಸಮನಾಗಿದೆ ಎಂದ ಸಚಿವರು, ಇದು ಮೀನುಗಾರರಿಗೆ ಮತ್ತು ಸಾರ್ವಜನಿಕರಿಗೆ ಮೂರು ದಿನಗಳ ಹಬ್ಬವಾಗಿದೆ. ಕಳೆದ ಹತ್ತು ವರ್ಷಗಳಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ನಡೆಯುತ್ತಿರುವ ವಿಶ್ವ ಮೀನುಗಾರಿಕಾ ದಿನಾಚರಣೆ ಈ ಬಾರಿ ಮೀನುಗಾರರ ಸಮುದಾಯದ ಮಧ್ಯೆ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು.ನ. ೨೧, ೨೨ ಹಾಗೂ ೨೩ರಂದು ವಿವಿಧ ಗೋಷ್ಠಿಗಳನ್ನು ಆಯೋಜಿಲಾಗಿದೆ. ಮೀನುಗಾರಿಕೆ, ಮೀನು ಸಂಸ್ಕರಣೆ, ಮೀನು ಸಾಕಾಣಿಕೆ, ಮೀನು ಖಾದ್ಯ ತಯಾರಿಕೆ ಸೇರಿದಂತೆ ವಿವಿಧ ಪರಿಣಿತರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಕಲಾವಿದರು ಮತ್ತು ಸ್ಥಳೀಯ ಕಲಾವಿದರಿಂದ ವಿವಿಧ ಮನರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವೂ ಇರಲಿದೆ ಎಂದರು.ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶಕುಮಾರ ಇದ್ದರು.ಆಕರ್ಷಕ ಮತ್ಸ್ಯಮೇಳಭಟ್ಕಳದ ಬೇಂಗ್ರೆಯ ಗಾಲ್ಫ್ ಮೈದಾನದಲ್ಲಿ ನ. 21ರಿಮದ 23ರ ವರೆಗೆ ರಾಜ್ಯಮಟ್ಟದ ಮತ್ಸ್ಯ ಮೇಳದಲ್ಲಿ ರಾಜ್ಯ ಮತ್ತು ಕೇಂದ್ರ ಇಲಾಖೆಗಳ ಸುಮಾರು ೬೦ ಮಳಿಗೆಗಳು, ಖಾಸಗಿ ಕೈಗಾರಿಕೆಗಳು, ಅಕ್ವೇರಿಯಂ ಮತ್ತು ಮೀನು ಕೃಷಿಗೆ ಅಗತ್ಯವಿರುವ ಪರಿಕರಗಳ ವಿತರಕರು, ಉತ್ಪನ್ನಗಳು ಮತ್ತು ಚಟುವಟಿಕೆಗಳ ಪ್ರದರ್ಶನ ನಡೆಯಲಿದೆ.ಸಮುದ್ರ ಕಳೆ ಪ್ರದರ್ಶನ, ಮೀನು ಆಹಾರದ ಮಳಿಗೆಗಳು, ಅಲಂಕಾರಿಕ ಮೀನು ಮಾರಾಟ ಸೇರಿದಂತೆ ಮೇಳದಲ್ಲಿ ಸುರಂಗ ಅಕ್ವೇರಿಯಂ ಮತ್ತು ಅಲಂಕಾರಿಕ ಮೀನು ಪ್ರದರ್ಶನವು ನೂರಾರು ವಿಶಿಷ್ಟ ಮೀನು ಪ್ರಭೇದಗಳನ್ನು ಪ್ರದರ್ಶಿಸಲಾಗುತ್ತದೆ. ಅದೇ ಸಮಯದಲ್ಲಿ, ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ತಜ್ಞರು ಇತ್ತೀಚಿನ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬಗ್ಗೆ ಚರ್ಚಿಸುವರು. ಪ್ರಗತಿಪರ ರೈತರು ತಮ್ಮ ಯಶಸ್ಸಿನ ಯಶೋಗಾಥೆಗಳನ್ನು ಹಂಚಿಕೊಳ್ಳಲಿದಾರೆ. ಪ್ರತಿದಿನ ಸಂಜೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೀನುಗಾರಿಕೆ ಮತ್ತು ಮೀನು ಕೃಷಿಯಲ್ಲಿ ತೊಡಗಿರುವ ಎಲ್ಲ ಸಂಸ್ಥೆಗಳಿಗೆ ಅರ್ಥಪೂರ್ಣ, ಫಲಿತಾಂಶ- ಆಧರಿತ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ಸ್ಯ ಮೇಳದಲ್ಲಿ ಮುಕ್ತ ಅವಕಾಶವಾಗಿರುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!