ನಾಳೆಯಿಂದ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ

KannadaprabhaNewsNetwork |  
Published : May 15, 2025, 01:35 AM IST
 ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ | Kannada Prabha

ಸಾರಾಂಶ

ಸುಂಟಿಕೊಪ್ಪದ ಬ್ಲೂಬಾಯ್ಸ್‌ ಯುವಕ ಸಂಘದಿಂದ ಮೇ 16ರಿಂದ 25ರ ವರೆಗೆ ಡಿ ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್‌ ಕಪ್‌ ಪಂದ್ಯಾವಳಿ ನಡೆಯಲಿದೆ.

ಮಡಿಕೇರಿ : ಸುಂಟಿಕೊಪ್ಪದ ಬ್ಲೂಬಾಯ್ಸ್ ಯುವಕ ಸಂಘದ ವತಿಯಿಂದ ಮೇ 16ರಿಂದ 25 ರ ವರೆಗೆ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಪಂದ್ಯಾವಳಿ ನಡೆಯಲಿದೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎಂ.ಆಲಿಕುಟ್ಟಿ, ಸುಂಟಿಕೊಪ್ಪದ ಸರ್ಕಾರಿ ಶಾಲಾ ಮೈದಾನದಲ್ಲಿ 26ನೇ ವರ್ಷದ ನಾಕೌಟ್ ಮಾದರಿಯ ಫುಟ್ಬಾಲ್ ಪಂದ್ಯಾವಳಿ ನಡೆಯಲಿದ್ದು, ಗೋಲ್ಡ್‌ಕಪ್‌ಗಾಗಿ 25 ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಪಂದ್ಯಾವಳಿಯ ಪ್ರಥಮ ಮತ್ತು ದ್ವಿತೀಯ ವಿಜೇತ ತಂಡಕ್ಕೆ ಡಿ.ವಿನೋದ್ ಶಿವಪ್ಪ ಮತ್ತು ಅವರ ಪುತ್ರ ವಿಶಾಲ್ ಶಿವಪ್ಪ ಅವರು ಡಿ.ಶಿವಪ್ಪ ಸ್ಮರಣಾರ್ಥವಾಗಿ 1 ಲಕ್ಷ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ 50 ಸಾವಿರ ನಗದು ಮತ್ತು ಟ್ರೋಫಿ ಜೊತೆಗೆ ವೈಯಕ್ತಿಕ ಬಹುಮಾನವನ್ನು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಸಜ್ಜು:

ಪ್ರತಿ ನಿತ್ಯ ಮಧ್ಯಾಹ್ನ 3 ಗಂಟೆಯಿಂದ ಎರಡು ಪಂದ್ಯಾವಳಿ ನಡೆಯಲಿದ್ದು, ಭಾನುವಾರ 3 ಪಂದ್ಯ ಆಯೋಜಿಸಲಾಗಿದೆ. ಮೇ 24ರಂದು ಸೆಮಿಫೈನಲ್ ಪಂದ್ಯ ಜರುಗಲಿದೆ. ಕೊಡಗಿನ ಕೊಲ್ಕೋತ್ತಾ ಎಂದೇ ಖ್ಯಾತವಾದ ಸುಂಟಿಕೊಪ್ಪಕ್ಕೆ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರಸಿದ್ಧಿಯಿದೆ. ಪುಟ್ಬಾಲ್ ಆಟಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 38 ವರ್ಷದ ಹಿಂದೆ ಸುಂಟಿಕೊಪ್ಪದಲ್ಲಿ ಸ್ಥಾಪನೆಯಾದ ಬ್ಲೂ ಬಾಯ್ಸ್ ಯುವಕ ಸಂಘ ಇದೀಗ ಸಾಕಷ್ಟು ಸಾಧನೆಗಳೊಂದಿಗೆ ಮತ್ತೊಂದು ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಸಜ್ಜುಗೊಂಡಿದೆ. ಸುಂಟಿಕೊಪ್ಪದಲ್ಲಿ ಪುಟ್ಬಾಲ್ ಪಂದ್ಯಾಟಕ್ಕೆ66 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವುದು ಸುಂಟಿಕೊಪ್ಪದ ಹೆಗ್ಗಳಿಕೆಯಾಗಿದೆ ಎಂದರು.

ಪ್ಲಾಂಟರ್ ಹಾಗೂ ದಾನಿಗಳಾದ ಡಿ.ವಿನೋದ್ ಶಿವಪ್ಪ ಮಾತನಾಡಿ, 1996 ರಿಂದ ಸುಂಟಿಕೊಪ್ಪದಲ್ಲಿ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬರುತ್ತಿರುವ ಬ್ಲೂ ಬಾಯ್ಸ್ ಯುವಕ ಸಂಘ ಮಕ್ಕಳಿಂದ ಹಿರಿಯವರೆಗೆ ಈ ಪಂದ್ಯಾವಳಿ ಮೂಲಕ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಫುಟ್ಬಾಲ್ ಕ್ರೀಡೆಯತ್ತ ಆಕರ್ಷಣೆ ಮೂಡಿಸುವಲ್ಲಿ ಸಹಕಾರಿಯಾಗಿದೆ. ಪ್ರತೀ ವರ್ಷ ಡಿ.ಶಿವಪ್ಪ ಸ್ಮಾರಕ ಪುಟ್ಬಾಲ್ ಪಂದ್ಯಾವಳಿಯನ್ನು ಸಾವಿರಾರು ಕ್ರೀಡಾ ಪ್ರೇಮಿಗಳು ವೀಕ್ಷಿಸುತ್ತಾ ಕ್ರೀಡಾ ಮನರಂಜನೆ ಪಡೆಯುತ್ತಿದ್ದಾರೆ ಎಂದರು.

ಈ ಬಾರಿ ಪಂದ್ಯಾವಳಿಯಲ್ಲಿ ಬೆಂಗಳೂರು, ತಮಿಳುನಾಡು, ಮಂಡ್ಯ, ಮೈಸೂರು, ಕೇರಳ ಕ್ಯಾಲಿಕಟ್, ಮಂಗಳೂರು, ಕೂತುಪರಂಬ ಕಣ್ಣೂರು, ಕುಂಬಳೆ, ಉಪ್ಪಳ, ಊಟಿ, ತಿರುಚ್ಚಿ, ಕೆಜಿಎಫ್‌ನ ವಾರಿಯರ್ಸ್ ಫುಟ್ಬಾಲ್ ಕ್ಲಬ್, ಬೈಲಕುಪ್ಪ, ಕೊಡಗಿನ ಪ್ರತಿಷ್ಠಿತ ತಂಡಗಳಾದ ಕುಶಾಲನಗರ, ಮಿಡ್ ಸಿಟಿ, ಪನ್ಯ, ಬೆಟ್ಟಗೇರಿ, ಗೋಣಿಕೊಪ್ಪ, ಕೊಡಗರಹಳ್ಳಿಯ ನೇತಾಜಿ ಯುವಕ ಸಂಘ, ಗದ್ದೆಹಳ್ಳದ ಎಮಿಟಿ ತಂಡಗಳೂ ಸೇರಿದಂತೆ ಅತಿಥೇಯ ಸುಂಟಿಕೊಪ್ಪದ ಬ್ಲೂಬಾಯ್ಸ್ ಯೂತ್ ತಂಡವೂ ಪಾಲ್ಗೊಳ್ಳಲಿದೆ ಎಂದರು.

ಸುಂಟಿಕೊಪ್ಪ ವಾಹನ ಚಾಲಕ ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮನ್ ಮಾತನಾಡಿ, ಮೇ 16 ರಂದು ಮಧ್ಯಾಹ್ನ 3 ಗಂಟೆಗೆ ಪಂದ್ಯಾವಳಿಯನ್ನು ಕೊಡಗಿನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಉದ್ಘಾಟಿಸುವರು ಮತ್ತು ಕುಶಾಲನಗರ ಉಪವಿಭಾಗದ ಉಪ ಅಧೀಕ್ಷಕರಾದ ಪಿ.ಚಂದ್ರಶೇಖರ್ ಹಾಗೂ ಡಿ.ವಿಶಾಲ್ ಶಿವಪ್ಪ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:

ಈಗಾಗಲೇ ಬ್ಲೂ ಬಾಯ್ಸ್ ಯುವಕ ಸಂಘವು ಅನೇಕ ರೀತಿಯ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಪ್ರಾಕೃತಿಕ ವಿಕೋಪದ ಸಂದರ್ಭ ಸಂತ್ರಸ್ಥರಿಗೆ ನೆರವು ನೀಡಿದ ಸಂಘದ ಸದಸ್ಯರು, ಹಲವಾರು ವರ್ಷಗಳಿಂದ ರಕ್ತದಾನ ಶಿಬಿರ, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಪ್ರತೀ ವರ್ಷ ಒಂದಲ್ಲ ಒಂದು ರೀತಿಯ ಕ್ರೀಡಾ ಚಟುವಟಿಕೆ, ರಾಷ್ಟ್ರೀಯ ಉತ್ಸವಗಳು ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಬ್ಲೂಬಾಯ್ಸ್ ಯುವಕ ಸಂಘದ ವತಿಯಿಂದ ಆಟಗಾರರು ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿರುವುದು ವಿಶೇಷ. ಅಲ್ಲದೇ ಸಂಘದ ಸದಸ್ಯರಲ್ಲಿಯೇ ಅನೇಕರು ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿರುವುದು ಕೂಡ ಗಮನಾರ್ಹ ಎಂದರು.

ಸಂಘದ ಗೌರವಾಧ್ಯಕ್ಷ ಟಿ.ವಿ.ಪ್ರಸನ್ನ, ಉಪಾಧ್ಯಕ್ಷ ಎನ್.ಎಸ್.ಆದಿಶೇಷ, ಸಹಕಾರ್ಯದರ್ಶಿ ಯು.ಎಂ.ಅನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ