ಸಿದ್ದಾಪುರದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಡೊಳ್ಳು ಕುಣಿತ ಸ್ಪರ್ಧೆ

KannadaprabhaNewsNetwork | Published : Dec 2, 2024 1:15 AM

ಸಾರಾಂಶ

ಇಂಥದೊಂದು ಅಪೂರ್ವ ಜಾನಪದ ಕಲೆಯ ಕುರಿತಾದ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಿದ್ದು, ಡೊಳ್ಳು ಕುಣಿತ ಕಲೆಗೆ ಮುಂದುವರಿಕೆಗೆ ಸಹಕಾರಿ.

ಸಿದ್ದಾಪುರ: ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸಂಘಟನೆಯ ತಾಲೂಕು ಘಟಕ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ ರಾಜ್ಯಮಟ್ಟದ ಹೊನಲು ಬೆಳಕಿನ ಡೊಳ್ಳು ಕುಣಿತ ಸ್ಪರ್ಧೆ ಕಾರ್ಯಕ್ರಮ ಪಟ್ಟಣದ ನೆಹರೂ ಮೈದಾನದಲ್ಲಿ ಜರುಗಿತು.ಸಾನಿಧ್ಯ ವಹಿಸಿದ್ದ ನಿಪ್ಪಾಣಿಯ ಅರುಣಾನಂದ ತೀರ್ಥ ಸ್ವಾಮೀಜಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಯುವ ಸಮುದಾಯ ತನ್ನ ಪರಂಪರೆಯ ಇಂಥ ಕಲೆಗಳನ್ನು ಅಭ್ಯಸಿಸಿ, ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ಮಾಡಬೇಕು. ಆ ನಿಟ್ಟಿನಲ್ಲಿ ಇದೊಂದು ಹೆಜ್ಜೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಜಿ.ಟಿ. ನಾಯ್ಕ ಮಣಕಿನಗುಳಿ ಮಾತನಾಡಿ ಇಂಥದೊಂದು ಅಪೂರ್ವ ಜಾನಪದ ಕಲೆಯ ಕುರಿತಾದ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಿದ್ದು, ಡೊಳ್ಳು ಕುಣಿತ ಕಲೆಗೆ ಮುಂದುವರಿಕೆಗೆ ಸಹಕಾರಿ. ಇಂಥ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಿಸುತ್ತೇನೆ. ಈ ಕಾರ್ಯಕ್ರಮ ಆಯೋಜಿಸಿದ ಸಂಘಟನೆಯ ಕಾರ್ಯ ಮಹತ್ವದ್ದು ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಡೊಳ್ಳು ಕುಣಿತ ನಮ್ಮ ತಾಯ್ನಾಡಿನ ಸಂಸ್ಕೃತಿ. ಇದು ನೆಲದ ಕಲೆ. ನಮ್ಮಲ್ಲಿ ಶೌರ್ಯವನ್ನು ತರುವ ನೃತ್ಯ, ವಾದನ ಎರಡೂ ಮೇಳೈಸಿದ ಜಾನಪದ ಕಲೆ. ಈ ಕಲೆಯನ್ನು ಮುಂದಿನ ತಲೆಮಾರು ಅಭ್ಯಸಿಸಿಕೊಂಡು ಹೋಗಬೇಕು. ಜಾನಪದ ಕಲೆಗಳನ್ನು ಪರಿಚಯಿಸುವ ಈ ಕಾರ್ಯಕ್ರಮ ಅಗತ್ಯವಾದದ್ದು ಎಂದರು.ವೇದಿಕೆಯಲ್ಲಿ ಕರವೇ ಜನಧ್ವನಿ ಜಿಲ್ಲಾಧ್ಯಕ್ಷ ಉಮಾಕಾಂತ ಹೊಸಕಟ್ಟ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ, ಜಿಲ್ಲಾ ರೈತ ಸಂಘದ ಮಾಧ್ಯಮ ವಕ್ತಾರ ಇಲಿಯಾಸ್ ಸಾಬ್, ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ, ತಾಲೂಕು ಗ್ಯಾರಂಟಿ ಯೋಜನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಸಾಮಾಜಿಕ ಮುಖಂಡ ದಿವಾಕರ ನಾಯ್ಕ, ಸಂಘಟನೆಯ ತಾಲೂಕು ಅಧ್ಯಕ್ಷ ಹೇಮಂತಕುಮಾರ ನಾಯ್ಕ, ಸ್ಪರ್ಧಾ ಕಾರ್ಯಕ್ರಮದ ಆಯೋಜಕ ಸಮಿತಿ ಅಧ್ಯಕ್ಷ ರವಿಕುಮಾರ ಕೊಠಾರಿ ಹಾಗೂ ಕರವೇ ಜನಧ್ವನಿ ಸಂಘಟನೆಯ ಜಿಲ್ಲೆ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರನ್ನು, ಕನ್ನಡ ಬರಹಗಾರರನ್ನು ಸನ್ಮಾನಿಸಲಾಯಿತು.ಅಪರ ಜಿಲ್ಲಾಧಿಕಾರಿ ಮುಲ್ಲಾರಿಂದ ಹಾಸ್ಟೆಲ್‌ಗಳ ಪರಿಶೀಲನೆ

ಕಾರವಾರ: ಅಪರ ಜಿಲ್ಲಾಧಿಕಾರಿ ಸಾಜೀದ್ ಅಹಮದ್ ಮುಲ್ಲಾ ಅವರು ಸಮಾಜಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯಗಳು, ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯಗಳು ಹಾಗೂ ಬಾಲಕರ ವಸತಿನಿಲಯಗಳಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದರು.ಎಲ್ಲ ವಸತಿ ನಿಲಯಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಲು ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಭವಿಷ್ಯದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಚಟುವಟಿಕೆಗಳನ್ನು ನಿಯಮಿತವಾಗಿ ನಡೆಯುವಂತೆ ನೋಡಿಕೊಳ್ಳಲು ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದರು.ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ವಸತಿನಿಲಯದಲ್ಲಿನ ವಿದ್ಯಾರ್ಥಿಗಳಿಗಾಗಿ ಸರ್ಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ, ಉನ್ನತ ಸಾಧನೆ ಮಾಡುವಂತೆ ತಿಳಿಸಿದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ ಇದ್ದರು.

Share this article