ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸಮರ ಕಲೆ ಮತ್ತು ಯೋಗಭ್ಯಾಸದಿಂದ ಆತ್ಮರಕ್ಷಣೆಯ ಜೊತೆಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಶನಿವಾರಸಂತೆ ಮಂಜುನಾಥ್ ಕ್ಲಿನಿಕ್ ವೈದ್ಯ ಡಾ.ನವೀನ್ ಅಭಿಪ್ರಾಯಪಟ್ಟರು.ಅವರು ಪಟ್ಟಣದ ಯಶಸ್ವಿ ಕಲ್ಯಾಣ ಮಂಟಪದಲ್ಲಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ 2024ನೇ ಸಾಲಿನ 7ನೇ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕರಾಟೆ, ಯೋಗ ಮುಂತಾದ ಸಮರ ಕಲೆಯ ಅವಶ್ಯಕತೆ ಇದ್ದು, ಆತ್ಮರಕ್ಷಣೆ, ಆರೋಗ್ಯ ಬೆಳವಣಿಗೆಗೆ ಇವು ಪೂರಕವಾಗುತ್ತದೆ. ಯೋಗ ಮತ್ತು ಧ್ಯಾನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಏಕಾಗ್ರತೆ, ಚುರುಕುತನ ಹೆಚ್ಚಾಗುವುದರ ಜತೆಯಲ್ಲಿ ವ್ಯಕ್ತಿತ್ವ ವಿಕಾಸನಗೊಳ್ಳುತ್ತದೆ ಎಂದರು.ಶನಿವಾರಸಂತೆ ಗ್ರಾ.ಪಂ. ಸದಸ್ಯ ಎಸ್.ಆರ್.ಮಧು ಮಾತನಾಡಿ, ಕರಾಟೆ ಮತ್ತು ಯೋಗ ಸಂಸ್ಥೆಯು ಶನಿವಾರಸಂತೆಯಲ್ಲಿ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಪಂದ್ಯಾವಳಿಯನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಈ ಭಾಗದ ಶಾಲಾ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಶಾಲೆ, ಕರಾಟೆ ಮತ್ತು ಯೋಗ ಸಂಸ್ಥೆಗೆ ಜಿಲ್ಲೆಗೆ ಕೀರ್ತಿ ತಂದು ಕೊಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆಯ ಅಧ್ಯಕ್ಷ ಎನ್.ಎಸ್.ಅರುಣ್ ಅಧ್ಯಕ್ಷವಹಿಸಿದ್ದರು. ನಿಶಾಂತ್ ಕಾಫಿ ಸಂಸ್ಥೆಯ ಅಶೋಕ್, ಕರಾಟೆ ಮತ್ತು ಯೋಗ ಸಂಸ್ಥೆಯ ಪಳನಿ, ಪದಾಧಿಕಾರಿಗಳು ಹಾಜರಿದ್ದರು. ಸಮಾರಂಭದಲ್ಲಿ ಇತ್ತಿಚಿಗೆ ನಡೆದ ರಾಷ್ಟ್ರ ಮಟ್ಟದ ಕರಾಟೆ ಮತ್ತು ಪಂದ್ಯಾವಳಿಯಲ್ಲಿ ಪಾಲ್ಗೊಂಡು ತೃತೀಯ ಸ್ಥಾನ ತಂದು ಕೊಟ್ಟ ಇಲ್ಲಿನ ನ್ಯಾಷಿನಲ್ ಇನ್‍ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆಯ ವಿದ್ಯಾರ್ಥಿನಿ ಇಂಪನ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು
ಎರಡು ದಿನ ನಡೆಯುವ ಪಂದ್ಯಾವಳಿಯಲ್ಲಿ ಕೊಡಗು, ಹಾಸನ, ಮೈಸೂರು ಜಿಲ್ಲೆಗಳಿಂದ ಒಂದು ಸಾವಿರ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ, ಭಾನುವಾರ ಸಂಜೆ 5 ಗಂಟೆ ವರೆಗೆ ಪಂದ್ಯಾವಳಿ ನಡೆಯುತ್ತದೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಅರುಣ್ ಹೇಳಿದರು.