ಏ.7ರಂದು ಸಿದ್ಧಗಂಗಾ ಸಂಸ್ಥೆಯಿಂದ ರಾಜ್ಯಮಟ್ಟದ ಎಂಎಸ್‌ಎಸ್ ಕ್ವಿಜ್

KannadaprabhaNewsNetwork | Published : Mar 29, 2024 12:55 AM

ಸಾರಾಂಶ

ದಾವಣಗೆರೆ ನಗರದ ಸಿದ್ಧಗಂಗಾ ಸಂಸ್ಥೆ ಸಂಸ್ಥಾಪಕ, ಶಿಕ್ಷಣಶಿಲ್ಪಿ ಡಾ. ಎಂ.ಎಸ್. ಶಿವಣ್ಣನವರ ಗೌರವಾರ್ಥ ರಾಜ್ಯಮಟ್ಟದ ಎಂ.ಎಸ್.ಎಸ್- 2024 ಕ್ವಿಜ್ ಕಾರ್ಯಕ್ರಮವನ್ನು ಏ.7ರಂದು ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೋಜ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ನಗರದ ಸಿದ್ಧಗಂಗಾ ಸಂಸ್ಥೆ ಸಂಸ್ಥಾಪಕ, ಶಿಕ್ಷಣಶಿಲ್ಪಿ ಡಾ. ಎಂ.ಎಸ್. ಶಿವಣ್ಣನವರ ಗೌರವಾರ್ಥ ರಾಜ್ಯಮಟ್ಟದ ಎಂ.ಎಸ್.ಎಸ್- 2024 ಕ್ವಿಜ್ ಕಾರ್ಯಕ್ರಮವನ್ನು ಏ.7ರಂದು ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೋಜ ಹೇಳಿದರು.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವರ್ಷ ಎಸ್.ಎಸ್.ಎಲ್.ಸಿ. ಮತ್ತು ಕೇಂದ್ರ ಪಠ್ಯಕ್ರಮದಲ್ಲಿ ಎಸ್.ಎಸ್.ಎಲ್‌.ಸಿ. ಪರೀಕ್ಷೆ ಬರೆದಿರುವ ಮಕ್ಕಳು ಕ್ವಿಜ್‌ನಲ್ಲಿ ಭಾಗವಹಿಸುವರು. ಲಿಖಿತ ಕ್ವಿಜ್ 10ನೇ ತರಗತಿ ವಿಜ್ಞಾನ ಮತ್ತು ಗಣಿತ ಎನ್ ಸಿಇಆರ್‌ಟಿ ಪಠ್ಯ ಪುಸ್ತಕಾಧಾರಿತ ಆಯ್ಕೆಯ 60 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

ಈಗಾಗಲೇ ರಾಜ್ಯದ ವಿವಿಧ ಪ್ರೌಢಶಾಲೆಗಳಿಂದ ಸಹಸ್ರಾರು ವಿದ್ಯಾರ್ಥಿಗಳು ಹೆಸರನ್ನು ನೋಂದಾಯಿಸಿದ್ದಾರೆ. ಕ್ವಿಜ್‌ಗೆ ಆಗಮಿಸುವ ದೂರದೂರಿನ ಮಕ್ಕಳಿಗೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. ಬೆಳಗ್ಗೆ 9 ರಿಂದ 10.30 ಗಂಟೆವರೆಗೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಿಂದ ಬರುವ ಮಕ್ಕಳನ್ನು ಮತ್ತು ಪೋಷಕರನ್ನು ಕರೆತರಲು ಸಿದ್ಧಗಂಗಾ ಶಾಲಾ- ಕಾಲೇಜಿನ ವಾಹನಗಳ ವ್ಯವಸ್ಥೆ ಹಾಗೂ ಕ್ವಿಜ್ ಮುಗಿದ ನಂತರ ಲಘು ಉಪಾಹಾರ ವ್ಯವಸ್ಥೆ ಇರುತ್ತದೆ ಎಂದರು.

ಏ.7ರಂದು ಬೆಳಗ್ಗೆ 9 ಗಂಟೆಯಿಂದ ನೋಂದಣಿ ಮತ್ತು ಪ್ರವೇಶ ಪತ್ರ ನೀಡಲಾಗುತ್ತದೆ. 11 ಗಂಟೆಗೆ ಪ್ರಾರಂಭವಾಗುವ ಲಿಖಿತ ಕ್ವಿಜ್‌ ಅನ್ನು ಮಕ್ಕಳು ಒ.ಎಂ.ಆರ್. ಶೀಟ್‌ನಲ್ಲಿ ಉತ್ತರಿಸುವರು. ವಿಜ್ಞಾನದ 30, ಗಣಿತದ 30 ಪ್ರಶ್ನೆಗಳಿಗೆ ಉತ್ತರಿಸಲು 60 ನಿಮಿಷಗಳ ಕಾಲಾವಕಾಶ ಇರುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಪ್ರಶ್ನೆಪತ್ರಿಕೆಗಳು ಪ್ರತ್ಯೇಕ ಇರುತ್ತವೆ ಎಂದು ಮಾಹಿತಿ ನೀಡಿದರು.

ಬಹುಮಾನಗಳ ವಿವರ:

ಪ್ರಥಮ ₹25,000, ದ್ವಿತೀಯ ₹15,000 ಮತ್ತು ತೃತೀಯ ₹10,000 ನಗದು ಬಹುಮಾನ, ಆಕರ್ಷಕ ಸ್ಮರಣಿಕೆ, ಪದಕ ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಜೊತೆಗೆ ತಲಾ ₹1000ರ 10 ಸಮಾಧಾನಕರ ಬಹುಮಾನ ಮತ್ತು 100 ಮಕ್ಕಳು ಎಂ.ಎಸ್.ಎಸ್. ಕ್ವಿಜ್ ಮೆಡಲ್ ಪಡೆಯಲಿದ್ದಾರೆ. ನಗದು ಬಹುಮಾನ ಪಡೆದ ಮಕ್ಕಳಿಗೆ 2 ವರ್ಷಗಳ ಪಿಯುಸಿ ವಿಜ್ಞಾನ ಶಿಕ್ಷಣ ಉಚಿತ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಕಾರ್ಯದರ್ಶಿ ಡಿ.ಎಸ್. ಹೇಮಂತ್, ನಿರ್ದೇಶಕ ಡಾ. ಡಿ.ಎಸ್. ಜಯಂತ್, ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್, ಹಿರಿಯ ವಿದ್ಯಾರ್ಥಿ ಹರ್ಷ, ಮನೋಹರ ಇದ್ದರು.

- - - -28ಕೆಡಿವಿಜಿ38ಃ:

ದಾವಣಗೆರೆ ನಗರದ ಸಿದ್ಧಗಂಗಾ ಸಂಸ್ಥೆಯಿಂದ ರಾಜ್ಯಮಟ್ಟದ ಎಂ.ಎಸ್.ಎಸ್- 2024 ಕ್ವಿಜ್ ಆಯೋಜಿಸಿರುವ ಕುರಿತು ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೋಜ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Share this article