ಕ್ರೀಡಾಕೂಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸುವ ಕುರಿತು ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಯುವ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆ.23 ರಂದು ಭಾಗಮಂಡಲದಲ್ಲಿ 33ನೇ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ.ಕ್ರೀಡಾಕೂಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸುವ ಕುರಿತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಸ್ಮಯಿ ವಿ.ಟಿ ಅವರ ಅಧ್ಯಕ್ಷತೆಯಲ್ಲಿ ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿರಾಜಪೇಟೆ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಮತ್ತು ಅಯ್ಯಂಗೇರಿ ಶ್ರೀ ಕೃಷ್ಣ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಭಾಗಮಂಡಲ ಗ್ರಾಮದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ಬೆಳಗ್ಗೆ 9 ಗಂಟೆಯಿಂದ ಕ್ರೀಡಾಕೂಟಗಳು ಆರಂಭಗೊಳ್ಳಲಿವೆ.ಸಾರ್ವಜನಿಕ ಪುರುಷರು ಹಾಗೂ ಮಹಿಳೆಯರ (7 ಮಂದಿಯ ತಂಡ) ವಿಭಾಗಕ್ಕೆ ಹಗ್ಗಜಗ್ಗಾಟ, ಪುರುಷರಿಗೆ ವಾಲಿಬಾಲ್ (4 ಮಂದಿಯ ತಂಡ) ಮತ್ತು ಮಹಿಳೆಯರಿಗೆ ಥ್ರೋಬಾಲ್ (6 ಮಂದಿಯ ತಂಡ) ಪಂದ್ಯಾವಳಿ ನಡೆಯಲಿದೆ.ಮಧ್ಯಾಹ್ನ 1 ಗಂಟೆಯಿಂದ ಕೆಸರು ಗದ್ದೆ ಓಟ ನಡೆಯಲಿದ್ದು, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರಿಗೆ, ಪ್ರೌಢಶಾಲಾ, ಪದವಿಪೂರ್ವ ಮತ್ತು ಪದವಿ ಕಾಲೇಜು ಯುವಕ, ಯುವತಿಯರಿಗೆ ಹಾಗೂ ಆಯೋಜಕರಿಗೆ ಓಟದ ಸ್ಪರ್ಧೆ, ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಓಟದ ಸ್ಪರ್ಧೆ ನಡೆಯಲಿದೆ.ಸಂಜೆ ಸಾಂಪ್ರದಾಯಿಕ ಪೂಜೆಯ ನಂತರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಸ್ಮಯಿ ವಿ.ಟಿ ಹಾಗೂ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಮನವಿ ಮಾಡಿದರು. ಸಾರ್ವಜನಿಕ ಹಗ್ಗಜಗ್ಗಾಟಕ್ಕೆ ಸ್ಪರ್ಧಿಸುವ ಪುರುಷರಿಗೆ 1,500 ರು., ಮಹಿಳೆಯರು 1,000 ರು., ಸಾರ್ವಜನಿಕರ ವಾಲಿಬಾಲ್ ಹಾಗೂ ಥ್ರೋಬಾಲ್‌ಗೆ ತಲಾ 1,000 ರು. ಪ್ರವೇಶ ಶುಲ್ಕ ಪಾವತಿಸಬೇಕು. ಆ.22 ರ ಸಂಜೆ 5 ಗಂಟೆಯ ಒಳಗೆ ತಂಡದ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.ಕ್ರೀಡಾಕೂಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಆಕರ್ಷಕ ನಗದು, ಪಾರಿತೋಷಕ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು.ವಾಲಿಬಾಲ್ ಮತ್ತು ಥ್ರೋಬಾಲ್ ನೋಂದಾವಣಿಗಾಗಿ ಕಾವೇರಿಮನೆ ಭರತ್ 8431515404, ಹಗ್ಗಜಗ್ಗಾಟ ಬಿದ್ದಿಯಂಡ ಸುಭಾಷ್ 9845053501 ನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ.ಸುಕುಮಾರ್ 9481213920, ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ 8618568173, ಶ್ರೀ ಕೃಷ್ಣ ಯುವಕ ಸಂಘದ ಅಧ್ಯಕ್ಷ ಲತೇಶ್ 9483662610, ಜೀವನ್ ಕುಮಾರ್ 9353426073, ಕಾರ್ಯದರ್ಶಿ ಅಭಿಷೇಕ್ 6361621643, ಸದಸ್ಯ ಪ್ರತೀಶ್ 8217801336 ನ್ನು ಸಂಪರ್ಕಿಸಬಹುದಾಗಿದೆ. ಪೂರ್ವಭಾವಿ ಸಭೆಯಲ್ಲಿ ಯುವ ಒಕ್ಕೂಟದ ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್, ಜಿಲ್ಲಾ ಯುವ ಒಕ್ಕೂಟದ ಖಜಾಂಚಿ ಕೆ.ಎ.ಮೋಹನ್, ಸದಸ್ಯರಾದ ನವೀನ್ ದೇರಳ, ನಿಖಿಲ್ ಬೆಳ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.