ಕನ್ನಡಪ್ರಭ ವಾರ್ತೆ ಸಿಂಧನೂರು
ರಾಜ್ಯ ನೋಟರಿಗಳ ಸಂಘ ಹಾಗೂ ಬೆಳಗಾವಿ ಜಿಲ್ಲಾ ನೋಟರಿಗಳ ಸಂಘದ ಸಹಭಾಗಿತ್ವದಲ್ಲಿ 14ನೇ ರಾಜ್ಯ ಮಟ್ಟದ ನೋಟರಿಗಳ ಸಮ್ಮೇಳವನ್ನು ಬೆಳಗಾವಿ ಸುವರ್ಣಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಂಧನೂರು ತಾಲೂಕು ನೋಟರಿಗಳ ಸಂಘದ ಅಧ್ಯಕ್ಷ ಸೈಯದ್ ಸಾಧಿಕ್ ಹುಸೇನಿ (ಬಾಬರಪಾಷ) ತಿಳಿಸಿದ್ದಾರೆ.ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ಸಮ್ಮೇಳನವನ್ನು ಸರ್ವೊಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಉದ್ಘಾಟಿಸುವರು. ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಮಾಹಿತಿ ನೀಡಿದರು.
ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಸಂಗ್ರೇಶಿ, ಉಪ ಕಾರ್ಯದರ್ಶಿ ನಾಗರಾಜ ಅಂಕುಸದೊಡ್ಡಿ, ಬೆಳಗಾವಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಲ್. ವಿಜಯಲಕ್ಷ್ಮಿ ದೇವಿ, ಅಖಿಲ ಭಾರತ ನೋಟರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಆಸೀಫ್ ಅಲಿ ಶೇಖ್ಹುಸೇನ, ರಾಜ್ಯ ನೋಟರಿಗಳ ಸಂಘದ ಅಧ್ಯಕ್ಷ ಶ್ರೀಕಾಂತ ಪಾಟೀಲ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಚಿಕ್ಕನಗೌಡರ, ನಿಕಟಪೂರ್ವ ಅಧ್ಯಕ್ಷ ಎನ್. ಕೋಟೇಶ್ವರರಾವ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲರಘು ಸೇರಿ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು, ನೋಟರಿಗಳ ಸಂಘದ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.ನಂತರ ಬೆಳಗಾವಿ ಆರ್‌ಎಲ್ ಲಾ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಿ.ವೈ. ಕುಲಕರ್ಣಿ ನೋಟರಿ ವೃತ್ತಿಯ ಘನತೆ ಹಾಗೂ ವೃತ್ತಿ ಕೌಶಲ್ಯ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಮುಧುಕರ ದೇಶಪಾಂಡೆ ಅವರು ನೋಟರಿ ಮತ್ತು ಡಿಜಟಲೀಕರಣ ಕುರಿತು, ನೋಟರಿ ಕಾರ್ಯಾಗಾರ ಅಕಾಡಮಿಯ ಅಧ್ಯಕ್ಷ ಬಿ.ಎಸ್. ಪ್ರಶಾಂತ ನೋಟರಿ ಮಾಸ್ಟರ್ ರೋಲ್ ಹಾಗೂ ನವೀಕರಣ ನ್ಯೂನ್ಯತೆಗಳ ಕುರಿತು ಉಪನ್ಯಾಸ ಗೋಷ್ಠಿಗಳನ್ನು ನಡೆಸುವರು. ಇದೇ ವೇಳೆ ಪ್ರಶ್ನೋತ್ತರಗಳು ನಡೆಯಲಿವೆ ಎಂದು ವಿವರಿಸಿದರು.
ನೋಟರಿಗಳ ಸಂಘದ ಪದಾಧಿಕಾರಿಗಳು, ಹಿರಿಯ ನೋಟರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಬೆಳಗಾವಿಯ ಸ್ವರಾಂಜಲಿ ಮ್ಯೂಜಿಕಲ್ ಕ್ಲಬ್ ವತಿಯಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ಬೆಂಗಳೂರಿನ ಕು. ಸಮೀತ ಬಿ.ಎನ್. ಅವರಿಂದ ಭರತನಾಟ್ಯಂ ನಡೆಯುವುದು ಎಂದು ತಿಳಿಸಿದರು.ನೋಟರಿಗಳ ಜ್ವಲಂತ ಸಮಸ್ಯೆಗಳ ಕುರಿತು, ಸಂಘಟನೆ ಬಲಪಡಿಸುವ, ಸದಸ್ಯತ್ವ ಹೆಚ್ಚಳ, ನೋಟರಿಗಳ ಅಕಾಲಿಕ ನಿಧನ, ರೋಗ, ರುಜಿನಗಳಿಗೆ ತುತ್ತಾದವರಿಗೆ ಪರಿಹಾರ ಧನ, ನೋಟರಿಗಳ ಭವನ ನಿರ್ಮಾಣ, ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಟರಿಗಳ ಸಂಘದ ಸದಸ್ಯರೊಬ್ಬರಿಗೆ ರಾಜ್ಯಮಟ್ಟದ ಸ್ಥಾನಮಾನ ಹೀಗೆ ಹಲವಾರು ವಿಚಾರಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ನೋಟರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುನೀಲ ಕುಮಾರು ಇಂದುವಾಸಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನೋಟರಿಗಳ ಸಂಘದ ಸಹ ಕಾರ್ಯದರ್ಶಿ ಅಮರೇಗೌಡ ಗದ್ರಟಗಿ, ಖಜಾಂಚಿ ಬಸವರಾಜ ಅಮರಾಪೂರ, ಸದಸ್ಯರಾದ ಎಚ್. ಪಂಪಾಪತಿ, ಟಿ. ಮಲ್ಲಯ್ಯ, ಪ್ರಹ್ಲಾದ ಗುಡಿ, ಶರಣಬಸವರಾಜ ಒಳಬಳ್ಳಾರಿ, ಮಹ್ಮದ ಅಲಿ, ಶಿವಕುಮಾರ ಹಿರೇಮಠ, ಅಮರೇಗೌಡ ಕೊಳಬಾಳ, ಬಸವರಾಜ ಹೊಸಳ್ಳಿ ಇದ್ದರು.